ಕಾವೇರಿ ಜಲ ವಿವಾದ: ಮತ್ತೊಂದು ಹೊಸ ಬೆಳವಣಿಗೆ ಮೇಕೆದಾಟು ಯೋಜನೆ ಸಂಬಂಧ ಚೆನ್ನೈ ಹಸಿರುಪೀಠ ಏಕಾಏಕಿ ಸಮಿತಿ ರಚನೆ
ಮೈಸೂರು

ಕಾವೇರಿ ಜಲ ವಿವಾದ: ಮತ್ತೊಂದು ಹೊಸ ಬೆಳವಣಿಗೆ ಮೇಕೆದಾಟು ಯೋಜನೆ ಸಂಬಂಧ ಚೆನ್ನೈ ಹಸಿರುಪೀಠ ಏಕಾಏಕಿ ಸಮಿತಿ ರಚನೆ

May 27, 2021

ಯಾರೂ ದೂರು ನೀಡದಿದ್ದರೂ ಸ್ವಯಂ ಸಮಿತಿ ರಚನೆ ಅಚ್ಚರಿ

ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ: ಇಂದು ಮುಖ್ಯಮಂತ್ರಿ ಯಡಿಯೂರಪ್ಪರಿಂದ ತುರ್ತು ಉನ್ನತ ಸಭೆ

ಬೆಂಗಳೂರು, ಮೇ 26(ಕೆಎಂಶಿ)- ಕಾವೇರಿ ನೀರಿನ ನಮ್ಮ ಹಕ್ಕನ್ನು ಬಳಸಿಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ತುರ್ತಾಗಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಮೇಕೆದಾಟು ಯೋಜನೆಗೆ ಸಂಬಂ ಧಿಸಿದಂತೆ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರುಪೀಠ ಸ್ವಯಂಪ್ರೇರಿತವಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯವರು ಈ ಸಭೆ ಕರೆದಿದ್ದಾರೆ.

ಮೇಕೆದಾಟು ಯೋಜನೆಯಲ್ಲಿ ಪರಿಸರಕ್ಕೆ ತೊಂದರೆ ಆಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆ ಸಲು ಹಸಿರುಪೀಠ ದಿನಪತ್ರಿಕೆಯ ವರದಿಯನ್ನು ಆಧರಿಸಿ ಸ್ವಯಂ ಪ್ರೇರಣೆಯಿಂದ ರಚನೆ ಮಾಡಿರುವ ಸಮಿತಿಯ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ ನಡೆಸುವ ಸಂಬಂಧ ಈ ಸಭೆ ಕರೆಯಲಾಗಿದೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಷ್ಟ್ರೀಯ ಹಸಿರುಪೀಠ ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸುಮೋಟೋ ದೂರು ದಾಖಲಿಸಿಕೊಂಡಿದೆ. ಇದಕ್ಕೆ ಸಂಬಂಧ ಪಟ್ಟಂತೆ ಸಮಿತಿ ರಚನೆ ಮಾಡಿದೆ. ಮೇಕೆದಾಟು ಯೋಜನೆ ಸಂಬಂಧ ಪರಿಸರ ನಾಶ ಆಗಿದೆಯೇ? ಪರಿಸರಕ್ಕೆ ತೊಂದರೆಯಾಗಿದೆಯೆ? ಎಂಬುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸಮಿತಿ ರಚಿಸಿದೆ. ಈ ಸಂಬಂಧ ಯಾರೂ ಅಧಿಕೃತವಾಗಿ ದೂರು ನೀಡದಿದ್ದರೂ ಹಸಿರುಪೀಠ ಸ್ವಯಂ ಪ್ರೇರಿತವಾಗಿ ಸಮಿತಿ ರಚನೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಿದೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಅಂತರ ರಾಜ್ಯ ಜಲ ವಿವಾದದ ಕಾನೂನು ಪಂಡಿತರು, ಹಿರಿಯ ವಕೀಲರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಈಗಾಗಲೇ ಮೇಕೆದಾಟು ಯೋಜನೆಯ ಬಗ್ಗೆ ಸುಪ್ರೀಂಕೋರ್ಟ್‍ಗೆ ಎಲ್ಲ ವಿವರವನ್ನು ನೀಡಲಾಗಿದೆ. ಕರ್ನಾಟಕ ತನ್ನ ಹಕ್ಕಿನ ನೀರನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಸಮಿತಿ ರಚನೆ ಮಾಡಿದ್ದು ಎಷ್ಟು ಸಮಯೋಚಿತ ಹಾಗೂ ಎಷ್ಟು ಕಾನೂನುಬದ್ಧ ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ ಈ ವಿಚಾರದಲ್ಲಿ ಕಾನೂನಾತ್ಮಕವಾಗಿ ಕರ್ನಾಟಕದ ಹಿತ ಕಾಪಾಡುವುದು ನಮ್ಮ ಕೆಲಸ. ಅದನ್ನು ಯಾವ ರೀತಿ ಪರಿಣಾಮಕಾರಿಯಾಗಿ ಮಾಡಬೇಕು ಎಂಬುದರ ಕುರಿತು ನಾಳೆ ಪ್ರಮುಖವಾದ ಸಭೆ ನಡೆಯಲಿದೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

 

Translate »