ಮೇಲ್ಮನೆಯಲ್ಲಿ ಸಿಡಿ ಸದ್ದು: ಚರ್ಚೆಗೆ ಅವಕಾಶ ನೀಡದ ಬಸವರಾಜ ಹೊರಟ್ಟಿ
News

ಮೇಲ್ಮನೆಯಲ್ಲಿ ಸಿಡಿ ಸದ್ದು: ಚರ್ಚೆಗೆ ಅವಕಾಶ ನೀಡದ ಬಸವರಾಜ ಹೊರಟ್ಟಿ

March 10, 2021

ಬೆಂಗಳೂರು,ಮಾ.9-ಹನಿಟ್ರ್ಯಾಪ್ ಸಿಡಿ ಪ್ರಕರಣ ಮೇಲ್ಮನೆಯಲ್ಲಿ ಸದ್ದು ಮಾಡಿದ್ದು, ವಿಧಾನಪರಿ ಷತ್ತಿನಲ್ಲಿ ಮಾನಹಾನಿ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಸಚಿವರ ವಿರುದ್ಧ ಚರ್ಚೆಗೆ ಅವಕಾಶ ನೀಡಲು ಸಭಾಪತಿ ಬಸವರಾಜ ಹೊರಟ್ಟಿ ನಿರಾಕರಿಸಿದ್ದಾರೆ. ಇದರಿಂದ ಸದನದಲ್ಲಿ ಕೆಲಕಾಲ ಕೋಲಾಹಲ ಗದ್ದಲಕ್ಕೆ ಕಾರಣವಾಯಿತು.

ಸದನ ಸಮಾವೇಶಗೊಂಡಾಗ ಕಾಂಗ್ರೆಸ್ ಸದಸ್ಯ ಪ್ರಸನ್ನ ಕುಮಾರ್ ಪ್ರಶ್ನೋತ್ತರ ಅವಧಿಯಲ್ಲಿ ತಾವು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‍ಗೆ ಪ್ರಶ್ನೆ ಕೇಳುವುದಿಲ್ಲ. ಆರು ಸಚಿವರು ಸಿಡಿ ವಿಚಾರವಾಗಿ ನ್ಯಾಯಾಲಯ ಮೊರೆ ಹೋಗಿದ್ದಾರೆ. ಇಂತಹ ಸಚಿವರಿಗೆ ನಾನು ಪ್ರಶ್ನೆ ಕೇಳುವುದಿಲ್ಲ ಎಂದರು. ಪ್ರಶ್ನೆ ಹೊರತು ಯಾವುದೇ ಮಾತನ್ನಾಡಿದರೂ ಕಡತಕ್ಕೆ ಹೋಗುವುದಿಲ್ಲ ಎಂದರು.

ಸಚಿವ ಬೈರತಿ ಬಸವರಾಜ್ ಅವರು ನ್ಯಾಯಾ ಲಯದ ಮೊರೆ ಹೋಗಿದ್ದಾರೆ, ಇದಕ್ಕಾಗಿ ಪ್ರಶ್ನೆ ಬಹಿಷ್ಕರಿಸಿದ್ದೇನೆ ಎಂದರು. ಆಗ ಸದನದಲ್ಲಿ ಕಾರಣ ಹೇಳಬೇಡಿ ಎಂದು ಸಭಾಪತಿ ಹೇಳಿದ್ದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಕೋರ್ಟ್ ಮೊರೆ ಹೋಗಿರುವ ಸಚಿವರಿಗೆ ಪ್ರಶ್ನೆ ಕೇಳಲು ಅವಕಾಶ ನೀಡುವಂತೆ ಕಾಂಗ್ರೆಸ್ ಸದಸ್ಯರು ಹಠ ಹಿಡಿದರು. ಆಗ ಈ ವಿಚಾರದ ಕುರಿತ ಚರ್ಚೆಗೆ ನಿಯಮದಲ್ಲಿ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದಾಗ ಸಭಾಪತಿಗಳ ಮಾತಿಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿ ಸಿಡಿ ವಿಚಾರ ಚರ್ಚೆಗೆ ಒತ್ತಾಯಿಸಿದರು. ಈ ವೇಳೆ ಆಡಳಿತ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ, ವಾದ-ವಿವಾದ ನಡೆದು ಸದನದಲ್ಲಿ ಗದ್ದಲದ ವಾತಾವರಣವುಂಟಾಯಿತು.

ಒಂದು ಹಂತದಲ್ಲಿ ಕಾಂಗ್ರೆಸ್ ನಾಯಕರು ಸಭಾಪತಿ ಗಳ ಪೀಠದ ಮುಂಭಾಗ ಸಿಡಿ ಚರ್ಚೆಗೆ ಆಗ್ರಹಿಸಿ ಪ್ರತಿಭಟಿಸಲು ಮುಂದಾದರು. ಆದರೆ ಎಲ್ಲ ಸದಸ್ಯ ರಲ್ಲಿ ಸಹಮತ ಕಾಣದ ಹಿನ್ನೆಲೆ ಹಾಗೂ ಪ್ರತಿಪಕ್ಷ ನಾಯಕ ಎಸ್‍ಆರ್ ಪಾಟೀಲ್ ಪೂರ್ಣಮನಸ್ಸಿ ನಿಂದ ಹೋರಾಟಕ್ಕೆ ಮುಂದಾಗದ ಕಾರಣ ಸದಸ್ಯರು ಬಾವಿಗಿಳಿದು ನಿರ್ಧಾರ ವಾಪಸ್ ಪಡೆದರು.

ಪ್ರತಿ ಸದಸ್ಯರೂ ಪ್ರಶ್ನೆ ಬಹಿಷ್ಕರಿಸಿದಾಗಲೂ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವಂತೆ ಕಾಂಗ್ರೆಸ್ ಸದಸ್ಯರು ಒತ್ತಡ ಹಾಕಿದರು. ಪ್ರತಿ ಸಾರಿಯೂ ಗದ್ದಲ ನಿರ್ಮಾಣವಾಯಿತು. ಬಸವರಾಜ ಇಟಗಿ ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಸದಸ್ಯರು ಬಾವಿಗಿಳಿಯಲು ಮುಂದಾದರು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ನಾವು ಮಾತ ನಾಡಲು ಅವಕಾಶ ಕೊಡಬೇಕು ಎಂದು ಕೇಳಿದರು. ಪ್ರಶ್ನೆ ಕೇಳಲು ಅವಕಾಶ ಇದೆ, ಸಂಬಂಧಿಸದ ವಿಚಾರ ಪ್ರಸ್ತಾಪಕ್ಕೆ ಅವಕಾಶ ಇಲ್ಲ ಎಂದರು. ಈ ನಡುವೆ ಮಾತನಾಡಿದ ಇಟಗಿ, ಕೋರ್ಟ್ ಮೊರೆ ಹೋದ ವರು ಸದನದಲ್ಲಿ ಇರಬಾರದು ಎಂದು ಆಗ್ರಹಿಸಿದರು.

Translate »