ಮೈಸೂರು, ಅ.10(ಎಸ್‍ಬಿಡಿ)- ಕೊರೊನಾ ಸಂದಿಗ್ಧತೆ ನಡುವೆ ಈ ಬಾರಿ ದಸರಾ ಆಚರಣೆಯನ್ನು ಸಾಂಪ್ರದಾಯಿಕ ಪೂಜೆಗಷ್ಟೇ ಸೀಮಿತ ಗೊಳಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಜೀವ ರಕ್ಷಣೆ ಮೊದಲು ಜೀವನ ಚಿಂತನೆ ನಂತರ ಎಂದು ಜನರಿಗೆ ತಿಳಿಹೇಳಿದ್ದ ಸರ್ಕಾರವೇ ದಸರಾ ಆಚರಣೆ ಮೂಲಕ ಅಪಾಯಕ್ಕೆ ಎಡೆಮಾಡಿಕೊಡುತ್ತಿರುವುದು ಸರಿಯಲ್ಲ. ದಿನೇ ದಿನೆ ಪರಿಸ್ಥಿತಿ ಬಿಗಡಾ ಯಿಸುತ್ತಿದ್ದು, ಮೈಸೂರು ಜಿಲ್ಲೆಯಲ್ಲೇ 40 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. 850ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹೀಗಿರುವಾಗ ಯಾವ ಒತ್ತಡಕ್ಕೆ ಮಣಿದು ಕೋಟ್ಯಾಂತರ ರೂ. ವೆಚ್ಚ ಮಾಡಿ, ದಸರಾ ಆಚರಿಸಲಾಗು ತ್ತಿದೆಯೋ ತಿಳಿದಿಲ್ಲ. ದಸರೆಗೆ 300 ಜನ ಸೇರಿದರೂ ಸೋಂಕು ಹರಡುವ ಸಾಧ್ಯತೆಯಿದೆ. ಇದಕ್ಕೂ ಮೀರಿ ದಸರಾ ಆಚರಿಸಿದರೆ ಅದರಲ್ಲಿ ಭಾಗಿಯಾದವರಿಗೆ ಸೋಂಕು ತಗುಲಿ, ಜೀವ ಹಾನಿಯಾದರೆ ತಲಾ 30 ಲಕ್ಷ ರೂ. ಪರಿಹಾರ ನೀಡಬೇಕಾಗುತ್ತದೆ. ಕೇರಳ ರಾಜ್ಯದಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ ಕಾರಣ ಸಾವು-ನೋವು ಸಂಭವಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಮೆರವಣಿಗೆ ಇನ್ನಿತರ ಜನಾಕ ರ್ಷಣೆ ಕಾರ್ಯಕ್ರಮ ಕೈಬಿಟ್ಟು, ಸಾಂಪ್ರದಾಯಿಕ ಪೂಜೆಯೊಂದಿಗೆ ದಸರಾ ಆಚರಿಸ ಬೇಕೆಂದು ಪ್ರಕಟಣೆಯಲ್ಲಿ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.