ಮೈಸೂರು, ಜೂ.23(ಆರ್‍ಕೆ)-ಮೈಸೂರಿನ ಆರ್‍ಟಿ ನಗರಕ್ಕೆ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.
ಮುಡಾ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಕೆಲ ಕಾರಣಗಳಿಂದಾಗಿ ರವೀಂದ್ರನಾಥ ಠಾಗೂರ್ ನಗರಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಿರಲಿಲ್ಲ. ಪರಿಣಾಮ ನಿವೇಶನ ಹಂಚಿಕೆಯಾದವರು ಮನೆ ನಿರ್ಮಿಸಲು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಅತೀ ಹೆಚ್ಚು ಶುಲ್ಕ ಪಾವತಿಸುವಂತಾಗಿತ್ತು. ಅವರ ಸಮಸ್ಯೆ ಅರಿತು ಇದೀಗ ಪ್ರಾಧಿಕಾರವು 66/11 ಕೆ.ವಿ. ಸಾಮಥ್ರ್ಯದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ 23 ಕೋಟಿ ರೂ. ಅನು ದಾನ ಬಿಡುಗಡೆ ಮಾಡಲು ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು ಎಂದರು.
ಕಬಿನಿಯಿಂದ ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಬಿದರಗೂಡು ಯೋಜನೆಗೆ 150 ಕೋಟಿ ರೂ. ವೆಚ್ಚವನ್ನು ಮುಡಾದಿಂದಲೇ ಭರಿಸಿ ಅನುದಾನ ವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಬಿಡುಗಡೆ ಮಾಡಲು ತೀರ್ಮಾನಿಸ ಲಾಗಿದೆ. ಇದರಿಂದ ಪಾಲಿಕೆ, ಮುಡಾ ಹಾಗೂ ಇತರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಬಡಾವಣೆಗಳಿಗೆ 180 ಎಂಎಲ್‍ಡಿ ನೀರು ಪೂರೈಸಬಹುದಾಗಿದೆ ಎಂದರು.
ಮುಂದಿನ 50 ವರ್ಷಗಳವರೆಗೆ ಬಿದರಗೂಡು ಯೋಜನೆ ಯಿಂದಾಗಿ ಕುಡಿಯುವ ನೀರನ್ನು ಪೂರೈಸಬಹುದಾಗಿದೆ. ಜಾಕ್‍ವೆಲ್‍ನಿಂದ 180 ಎಂಎಲ್‍ಡಿ ನೀರು ಸರಬರಾಜು ಮಾಡಲು ಪೈಪ್‍ಲೈನ್ ಅಳವಡಿಸಲಾಗಿದೆಯಾದರೂ, ಪ್ರಸ್ತುತ 60 ಎಂಎಲ್‍ಡಿ ನೀರನ್ನು ಮಾತ್ರ ಪೂರೈಸಲಾಗುತ್ತಿದೆ. 180 ಎಂಎಲ್‍ಡಿ ಸಾಮಥ್ರ್ಯಕ್ಕೆ ಉನ್ನತೀಕರಿಸಲು ಅಗತ್ಯ ವಿದ್ದ 150 ಕೋಟಿ ರೂ. ಅನುದಾನವನ್ನು ಭರಿಸಲು ಪ್ರಾಧಿಕಾರ ನಿರ್ಧರಿಸಿತು ಎಂದು ರಾಜೀವ್ ತಿಳಿಸಿದರು.
ಅನುಮೋದಿತ ನಕ್ಷೆಯಂತೆ ನಿರ್ಮಿಸಿರುವ ಮನೆಗಳಿಗೆ 7 ದಿನದೊಳಗಾಗಿ ಸಿಆರ್ ನೀಡುವುದು, ನಕ್ಷೆ ಉಲ್ಲಂಘನೆ ಯಾಗಿರುವ ಕಟ್ಟಡಗಳಿಗೆ ವಾಸಯೋಗ್ಯ ದೃಢೀಕರಣ ಪತ್ರ ನೀಡಲು ನಿರ್ಧರಿಸಲಾಗಿದ್ದು, ಮನೆ ನಿರ್ಮಿಸಲು ನಿವೇಶನ ಮಂಜೂರಾತಿದಾರರಿಗೆ ಬ್ಯಾಂಕ್‍ನಿಂದ ಸಾಲ ಪಡೆಯಲು ನಿರಾಕ್ಷೇಪಣಾ ಪತ್ರ ನೀಡಲೂ ಮುಡಾ ಸಭೆಯು ನಿರ್ಧರಿಸಿದೆ ಎಂದರು. ಮುಡಾ ಆಯುಕ್ತ ಜಿ.ಟಿ. ದಿನೇಶ್‍ಕುಮಾರ್, ಕಾರ್ಯದರ್ಶಿ ವೆಂಕಟರಾಜು, ಸದಸ್ಯರಾದ ಲಕ್ಷ್ಮೀದೇವಿ, ಲಿಂಗಣ್ಣ, ನವೀನ್‍ಕುಮಾರ್, ಮಾದೇಶ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.