ಮೈಸೂರು, ಜೂ.23(ಎಂಟಿವೈ)- ಮುಂಬ ರುವ ವಿಧಾನಸಭಾ ಚುನಾವಣೆ ಸಮೀಪಿಸುತ್ತಿ ರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಮೈಸೂರು ತಾಲೂಕಿನ ವರಕೋಡು ಗೇಟ್ ಬಳಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರ
ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅನೀತಿ, ಮಿತಿ ಮೀರಿದ ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಪಠ್ಯಕ್ರಮದಲ್ಲಿ ಮಹನೀಯರಿಗೆ ಮಾಡಿದ ಅಪಮಾನ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಜನರು ಅಸಮಾದಾನಗೊಂಡಿದ್ದಾರೆ. ಅಲ್ಲದೆ, ಈ ಹಿಂದೆ ಕಾಂಗ್ರೆಸ್ ಸರ್ಕಾರ ನೀಡಿದ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಮೆಚ್ಚುಗೆ ಇದೆ. ಈ ಎಲ್ಲಾ ಅಂಶ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ವರದಾನವಾಗಿ ಪರಿಣಮಿಸಲಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು ಎಂದರು.
ಮುಂಬರುವ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 10ರಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು. ಆದ್ದರಿಂದ ನಾವು ಜನರ ಬಳಿಗೆ ಹೋಗುವ ಕಾರ್ಯ ಮಾಡಬೇಕು. ಜನರಿಗೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ಸರ್ಕಾರದ ವೈಫಲ್ಯವನ್ನು ತಿಳಿಸಬೇಕು. ಜತೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದ ಜನಪರ ಯೋಜನೆಗಳನ್ನು ತಿಳಿಸುವ ಕಾರ್ಯವನ್ನೂ ಮಾಡಬೇಕು. ಆ ಮೂಲಕ ಕಾಂಗ್ರೆಸ್ ಪರವಾದ ಅಭಿಪ್ರಾಯ ಮೂಡಿಸಬೇಕು. ಜನರ ಜಾಗೃತಗೊಳಿಸಿದರೆ 100ಕ್ಕೆ ನೂರು ಕಾಂಗ್ರೆಸ್ ಪಕ್ಷ 2023ರಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾಗಿ ಪಕ್ಷ ಸಂಘಟನೆ ಮಾಡಿದರೆ ಗೆಲುವು ಸಾಧಿಸಬಹುದು ಎನ್ನುವುದಕ್ಕೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯೇ ಸಾಕ್ಷಿ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಜೆಡಿಎಸ್ 3ನೇ ಸ್ಥಾನಕ್ಕೆ ಹೋಗಿದೆ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಾಮಾನ್ಯವಾಗಿ ಹೋರಾಟ ನಡೆಯುತ್ತದೆ. ಅಂಥ ಜಾಗದಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ಹೋಗಿದೆ. ಹಾಗಾಗಿ ಕಾಂಗ್ರೆಸ್‍ಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ, ಪ್ರಾಮಾಣಿಕತೆಯಿಂದ ಪಕ್ಷದ ಗೆಲುವಿಗೆ ಶ್ರಮಿಸಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು, ಸಂಘಟಿಸಲು ರಾಜಕೀಯ ಸಮಿತಿ, ಸಾಮಾಜಿಕ ಸಮಿತಿ, ರೈತ ಸಮಿತಿ ಸೇರಿದಂತೆ 7 ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳ ವರದಿಯನ್ನು ಕಿರುಹೊತ್ತಿಗೆ ಮೂಲಕ ಹೊರ ತರಲಾಗುವುದು. ಕಿರುಹೊತ್ತಿಗೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುವುದು. ಪಕ್ಷದ ಕಾರ್ಯ ಕರ್ತರು, ಮುಖಂಡರು ಪಕ್ಷ ಚಟುವಟಿಕೆಗೆ ಹೆಚ್ಚಿನ ಸಮಯವನ್ನು ನೀಡಬೇಕು ಎಂದರು.