ಮೈಸೂರು, ಜೂ. 23 (ಆರ್‍ಕೆ)- ವಿಧಾನಪರಿಷತ್ ಚುನಾವಣೆ, ಪ್ರಧಾನಮಂತ್ರಿ ಗಳ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ವಿಳಂಬವಾಗಿರುವ ಮೈಸೂರು ಮೇಯರ್, ಉಪಮೇಯರ್ ಚುನಾವಣೆಗೆ ಜೂನ್ ಅಂತ್ಯಕ್ಕೆ ಮೀಸ ಲಾತಿ ಪ್ರಕಟವಾಗುವ ಸಾಧ್ಯತೆ ಇದೆ.
ಸುನಂದಾ ಪಾಲನೇತ್ರ ಅವರ ಮೇಯರ್ ಅಧಿಕಾರಾವಧಿ 2022ರ ಫೆಬ್ರವರಿ 23ರಂದೇ ಅಂತ್ಯಗೊಂಡಿದೆಯಾ ದರೂ, ಸರ್ಕಾರ ಮೀಸಲಾತಿ ಪ್ರಕಟಿಸುವುದು ವಿಳಂಬ ವಾಗಿರುವುದರಿಂದ ಹಾಗೂ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಅವಧಿಯ ಮೇಯರ್ ಚುನಾವಣೆ ಸಾಧ್ಯವಾಗಿಲ್ಲ.
ಇದರಿಂದ ಸುನಂದಾ ಪಾಲನೇತ್ರ ಅವರೇ ಪ್ರಭಾರ ಮೇಯರ್ ಆಗಿ ಮುಂದುವರಿದಿ ದ್ದಾರೆ. ಇದೀಗ ವಿಧಾನಪರಿಷತ್ ಚುನಾವಣೆ ಮುಕ್ತಾಯಗೊಂಡಿರುವುದರಿಂದ ಮೀಸಲಾತಿ ನಿಗದಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಜೂನ್ ಅಂತ್ಯಕ್ಕೆ ಮೀಸಲಾತಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪರಿಶಿಷ್ಟ ಪಂಗಡ (ಎಸ್‍ಟಿ) ಅಥವಾ ಸಾಮಾನ್ಯ ವರ್ಗಕ್ಕೆ ಈ ಬಾರಿ ಮೈಸೂರು ಮೇಯರ್ ಸ್ಥಾನ ಮೀಸಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೀಸಲಾತಿ ನಿಗದಿಗೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಒತ್ತಡ ಜಾಸ್ತಿಯಾಗಿದ್ದು, ಮೇಯರ್ ಚುನಾವಣೆ ಸಂಬಂಧ ಕುತೂಹಲ ಕೆರಳಿಸಿದೆ.
2021ರ ಫೆಬ್ರವರಿ 24ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‍ನ ರುಕ್ಮಿಣಿ ಮಾದೇ ಗೌಡ ಮೇಯರ್ ಆಗಿ ಮತ್ತು ಕಾಂಗ್ರೆಸ್‍ನ ಅನ್ವರ್ ಬೇಗ್ ಉಪಮೇಯರ್ ಆಗಿ ಆಯ್ಕೆ ಯಾಗಿದ್ದರು. ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದ ಕಾರಣಕ್ಕೆ ರುಕ್ಮಿಣಿ ಮಾದೇಗೌಡರ ಪಾಲಿಕೆ ಸದಸ್ಯತ್ವ ರದ್ದಾದ್ದರಿಂದ ಅವರು ಮೇಯರ್ ಸ್ಥಾನ ಕಳೆದು ಕೊಂಡಿದ್ದರು. ನಂತರ 2021ರ ಆಗಸ್ಟ್ ಮಾಹೆಯಲ್ಲಿ ನಡೆದ ಮೇಯರ್ ಚುನಾವಣೆ ಯಲ್ಲಿ ಬಿಜೆಪಿಯ ಸುನಂದ ಪಾಲನೇತ್ರ ಆಯ್ಕೆಯಾದರು. ಅದರಂತೆ ಈಗ ಅಧಿಕಾ ರಾವಧಿ ಅಂತ್ಯವಾದರೂ ಮೀಸಲಾತಿ ನಿಗದಿಯಾಗದ ಕಾರಣ ಅವರು ಪ್ರಭಾರ ಮೇಯರ್ ಆಗಿ ಕಳೆದ ನಾಲ್ಕು ತಿಂಗಳಿಂದ ಮುಂದುವರಿಯಲು ಅವಕಾಶ ಸಿಕ್ಕಿದೆ.