ಕೊಡಗು, ಹಾಸನ, ಮಂಡ್ಯದ ಕೆಲವೆಡೆ ಭೂಕಂಪನ
ಮೈಸೂರು

ಕೊಡಗು, ಹಾಸನ, ಮಂಡ್ಯದ ಕೆಲವೆಡೆ ಭೂಕಂಪನ

June 24, 2022

ಮೈಸೂರು, ಜೂ.23- ಕೊಡಗು, ಹಾಸನ ಮತ್ತು ಮಂಡ್ಯ ಜಿಲ್ಲೆಯ ಕೆಲವೆಡೆ ಗುರುವಾರ ಮುಂಜಾನೆ ಲಘು ಭೂಕಂಪನ ಸಂಭವಿಸಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಅದರಲ್ಲೂ ಈ ಹಿಂದಿನ ಕಹಿ ಘಟನೆಗಳಿಂದಾಗಿ ಕೊಡಗಿನ ಜನತೆ ಬೆಚ್ಚಿ ಬಿದ್ದಿದ್ದಾರೆ.

ಗುರುವಾರ ಮುಂಜಾನೆ 4.37ರಲ್ಲಿ ರಿಕ್ಟರ್ ಮಾಪಕ ದಲ್ಲಿ ಭೂ ಕಂಪನದ ತೀವ್ರತೆ 3.4ರಷ್ಟು ದಾಖಲಾಗಿದೆ ಎಂದು ಬೆಂಗಳೂರಿನಲ್ಲಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‍ಎನ್‍ಡಿಎಂಸಿ) ಅಧಿಕೃತವಾಗಿ ತಿಳಿಸಿದೆ. ಹಾಸನ ಜಿಲ್ಲೆ ಹೊಳೆನರಸೀ ಪುರ ತಾಲೂಕು ನಾಗರನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಲುಗನಹಳ್ಳಿ ಮಾಪನ ಕೇಂದ್ರದಿಂದ 0.8 ಕಿಮೀ ಅಂತರದಲ್ಲಿ ಭೂಕಂಪನದ ಕೇಂದ್ರ ಬಿಂದುವಿದ್ದು, ಇದರ ಪ್ರಭಾವವು ಅಲ್ಲಿಂದ ನೈರುತ್ಯ ದಿಕ್ಕಿನಲ್ಲಿ 2.3ಕಿಮೀ ಅಂತರದಲ್ಲಿರುವ ಕ್ಯಾತನಹಳ್ಳಿ ಗ್ರಾಪಂ ವ್ಯಾಪ್ತಿಯ ಹಿಂಡನಹಳ್ಳಿ, ಬಡ ಕ್ಯಾತನಹಳ್ಳಿ, ಉತ್ತರ ಈಶಾನ್ಯ ದಿಕ್ಕಿನಲ್ಲಿ 3.6 ಕಿಮೀ ವ್ಯಾಪ್ತಿಯ ಹಳ್ಳಿ ಮೈಸೂರು ಹೋಬಳಿಯಲ್ಲಿ ತೀವ್ರತೆ ವ್ಯಾಪಿಸಿದೆ.

ಹಾಸನ ಜಿಲ್ಲೆ ಭೂಕಂಪನ ವಲಯ 2ಕ್ಕೆ ಒಳಪಟ್ಟಿದ್ದು, ಈ ವಲಯದಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿ ರುವುದರಿಂದ ಹಾನಿಯ ಸಾಧ್ಯತೆ ಕಡಿಮೆ. ಈ ಕಂಪನ ಮಧ್ಯಮ ಮತ್ತು ವಿನಾಶಕಾರಿಯಲ್ಲದ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್ ಎನ್‍ಡಿಎಂಸಿ ನಿರ್ದೇಶಕರು ತಿಳಿಸಿದ್ದಾರೆ.
ಗುರುವಾರ ಬೆಳಗಿನಜಾವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ರೇಂಜರ್ ಬ್ಲಾಕ್, ಅಮ್ಮಳ್ಳಿ ಗ್ರಾಮ, ನೇಗಳೆ ಗ್ರಾಮ, ಮಡಿಕೇರಿ ತಾಲೂ ಕಿನ ದೇವಸ್ತೂರು, ಮಡಿಕೇರಿ ನಗರ ಪ್ರದೇಶದಲ್ಲಿ ಸುಮಾರು 20 ಸೆಕೆಂಡ್‍ಗಳ ಕಾಲ ಭೂ ಕಂಪನವಾಗಿದ್ದು, ಕೆಲವು ಮನೆಗಳಲ್ಲಿ ಪಾತ್ರೆ ಹಾಗೂ ಕಿಟಕಿ ಗಾಜುಗಳು ಅದುರಿದ ಅನುಭವವಾಗಿದೆ.

ಕೊಡಗಲ್ಲೂ ಕಂಪನ: ಹಾಸನ ಜಿಲ್ಲೆ ಭೂಕಂಪನ ವಲಯ 2ಕ್ಕೆ ಒಳಪಟ್ಟಿದ್ದು, ಕೊಡಗು ಜಿಲ್ಲೆ ವಲಯ 3ಕ್ಕೆ ಒಳಪಡು ತ್ತದೆ ಎಂದು ಕೊಡಗು ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಕಟಣೆ ತಿಳಿಸಿದೆ. ಭೂ ಕಂಪನದ ಕೇಂದ್ರ ಬಿಂದುವಿ ನಿಂದ ಸೋಮವಾರಪೇಟೆ 46 ಕಿಮೀ (ವಾಯು ಮಾರ್ಗ) ಹಾಗೂ ಮಡಿಕೇರಿ 56 ಕಿಮೀ(ವಾಯು ಮಾರ್ಗ) ದೂರವಿರುವು ದರಿಂದ ಸಣ್ಣ ಪ್ರಮಾಣದ ಕಂಪನವಾಗಿದೆ. ಈ ಘಟನೆಯಿಂದ ಜನರು ಭಯಪಡುವ ಅಗತ್ಯವಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಇದೀಗ ಮಳೆಗಾಲದಲ್ಲೇ ಭೂಕಂಪನವಾಗಿರುವ ಹಿನ್ನೆಲೆ ಯಲ್ಲಿ 2018-19ರಲ್ಲಿ ಪ್ರಕೃತಿ ವಿಕೋಪ ಘಟಿಸಿದ್ದ ಗ್ರಾಮ ಗಳಲ್ಲಿ ಆತಂಕ ಮನೆ ಮಾಡಿದೆ. ಈ ಹಿಂದೆ ಭಾರೀ ಮಳೆ ಹಾಗೂ ಭೂ ಕುಸಿತದಿಂದ ಬೆಟ್ಟ ಶ್ರೇಣಿಗಳೇ ಕೊಚ್ಚಿ ಹೋಗಿ ದ್ದವು. ಅದನ್ನು ನೆನಪಿಸಿಕೊಂಡು ಜನರು ಭಯಭೀತರಾಗಿ ದ್ದಾರೆ. ಅಂದು ಭೂಕುಸಿತ ಕುರಿತು ಅಧ್ಯಯನ ನಡೆಸಿದ್ದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಭೂಗರ್ಭ ವಿಜ್ಞಾನಿಗಳ ತಂಡ ಲಘು ಭೂಕಂಪನಕ್ಕೂ ಭೂ ಕುಸಿತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಇಂದು ಘಟಿಸಿರುವ ಲಘು ಭೂಕಂಪದ ಬಗ್ಗೆ ಭಯಪಡ ಬೇಕಾದ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರಪೇಟೆ ಪ್ರಕರಣದ ರೇಂಜರ್ಸ್ ಬ್ಲಾಕ್‍ನಲ್ಲಿ 2004-05ರಲ್ಲಿ ಮಳೆಗಾಲದ ವೇಳೆ ಭೂಮಿಯೊಳಗಿ ನಿಂದ ಶಬ್ದ ಬರುತ್ತಿತ್ತು. ಆ ಸಮಯದಲ್ಲಿ ಪ್ರಾಕೃತಿಕ ವಿಕೋಪ ಕೇಂದ್ರದ ತಜ್ಞರು ಪುಣೆಯಿಂದ ಆಗಮಿಸಿ ಅಧ್ಯಯನ ನಡೆಸಿ ಇದು ಭೂಕಂಪವಲ್ಲ. ಭೂಮಿ ಆಳದಲ್ಲಿನ ಬಂಡೆ ಗಳು ನೀರಿನ ರಭಸಕ್ಕೆ ಒಂದಕ್ಕೊಂದು ಡಿಕ್ಕಿ ಹೊಡೆದಾಗ ಬರುವ ಶಬ್ದ ಎಂದು ವರದಿ ನೀಡಿದ್ದರು. ಆದರೂ ರೇಂಜರ್ಸ್ ಬ್ಲಾಕ್‍ನಲ್ಲಿ ಸಿಸ್ಮೋಗ್ರಾಫ್ ಯಂತ್ರವನ್ನು ಅಳವಡಿಸಲಾಗಿತ್ತು. ಈ ಯಂತ್ರದಿಂದ ಅಧ್ಯಯನಕ್ಕೆ ಹೆಚ್ಚು ಅನುಕೂಲ ವಾಗಿತ್ತು. ಭೂ ಕಂಪನದ ತೀವ್ರತೆಯನ್ನು ಅರಿಯಲು ಈ ಯಂತ್ರ ಸಹಕಾರಿಯಾಗಿತ್ತು. ಆದರೆ ಅಧಿಕಾರಿಗಳು ಕೆಲ ವರ್ಷದ ಹಿಂದೆ ಸಿಸ್ಮೋಗ್ರಾಫ್ ಯಂತ್ರವನ್ನು ತೆರವು ಗೊಳಿಸಿದ್ದಾರೆ ಎಂದು ಹೇಳುತ್ತಿರುವ ರೇಂಜರ್ಸ್ ಬ್ಲಾಕ್ ನಿವಾಸಿಗಳು ಮತ್ತೆ ಈ ಯಂತ್ರವನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಾರಂಗಿ ಜಲಾಶಯದಲ್ಲಿ ಅಳವಡಿಸಿರುವ ಸಿಸ್ಮೋಗ್ರಾಫ್ ಯಂತ್ರದಲ್ಲೂ ಕೂಡ ಇಂದಿನ ಭೂಕಂಪನ ಬಗ್ಗೆ ದಾಖಲಾಗಿದೆ.

ಕಿಕ್ಕೇರಿ, ಕೆ.ಆರ್.ಪೇಟೆಯಲ್ಲೂ ಕಂಪಿಸಿದ ಅನುಭವ:ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಸುತ್ತಮುತ್ತಲಿನ ಮಾದಾಪುರ, ಚಿನ್ನೇನಹಳ್ಳಿ, ಮಾದಾ ಪುರ ಕೊಪ್ಪಲು, ಗೊಂದಿಹಳ್ಳಿ, ಗಾಣದಹಳ್ಳಿ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿದೆ. ಕೆ.ಆರ್.ಪೇಟೆ ನಗರದ ಕೆಲ ಪ್ರದೇಶಗಳಲ್ಲಿ ಕೂಡ ಭೂಕಂಪನದ ಅನುಭವ ವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

Translate »