ವಿದ್ಯುತ್ ದರ ಏರಿಕೆ ಕೈಬಿಡಲು ಆಗ್ರಹಿಸಿ ಸಿಪಿಐ(ಎಂ) ಒತ್ತಾಯ
ಮೈಸೂರು

ವಿದ್ಯುತ್ ದರ ಏರಿಕೆ ಕೈಬಿಡಲು ಆಗ್ರಹಿಸಿ ಸಿಪಿಐ(ಎಂ) ಒತ್ತಾಯ

June 25, 2022

ಪ್ರತಿ ಯೂನಿಟ್ ವಿದ್ಯುತ್ ದರವನ್ನು 10 ಪೈಸೆಯಿಂದ 20 ಪೈಸೆಗೆ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ದರ 15 ಪೈಸೆಯಿಂದ 25 ಪೈಸೆಗೆ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಮತ್ತೊಂದು ಹೊರೆಯನ್ನು ಹೇರಲು ಮುಂದಾಗಿರುವ ವಿದ್ಯುತ್ ಕಂಪನಿಗಳ ಕ್ರಮವನ್ನು ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)ದ ಮೈಸೂರು ಜಿಲ್ಲಾ ಸಮಿತಿಯ ಕಾರ್ಯಕರ್ತರು ಶುಕ್ರವಾರ ಮೈಸೂರಿನ ವಿ.ವಿ.ಮೊಹಲ್ಲಾದ ಸೆಸ್ಕ್ ವಿಭಾಗೀಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಕಳೆದ 2009ರಿಂದ 2022ರ ಇಂದಿನವರೆಗೆ ಪ್ರತಿ ಯೂನಿಟ್ ವಿದ್ಯುತ್ ದರವನ್ನು 2.70ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯು ಎಲ್ಲಾ ಮನೆಗಳ ಬಿಲ್‍ಗಳನ್ನು ಹೆಚ್ಚಿಸಲಿದೆ. ವಾಣಿಜ್ಯ ಬಳಕೆಯ ವಿದ್ಯುತ್ ಬೆಳೆಗಳ ಏರಿಕೆಯಿಂದ ಸಣ್ಣ ಕೈಗಾರಿಕೆಗಳು ಮುಚ್ಚುವಂತಹ ಪರಿಸ್ಥಿತಿಗೆ ತಂದೊಡ್ಡಲಿದೆ. ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಮತ್ತೊಂದು ಹೊರೆಯನ್ನು ಹೇರಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೇ ಹೆಚ್ಚಳ ಮಾಡಲಾಗಿರುವ ವಿದ್ಯುತ್ ದರವನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಸದಸ್ಯರಾದ ಕೆ.ಬಸವರಾಜ್, ಜಿ.ಜಯರಾಂ, ಲ.ಜಗನ್ನಾಥ್, ನಗರ ಕಾರ್ಯದರ್ಶಿ ರಾಜೇಂದ್ರ, ಬಲರಾಂ, ಕೃಷ್ಣಮೂರ್ತಿ, ಅಣ್ಣಪ್ಪ, ಟಿ.ಎಸ್.ವಿಜಯಕುಮಾರ್, ಯತೀಶ್, ಸಿದ್ದಯ್ಯ, ಚಂದ್ರಶೇಖರ್, ಈಶ್ವರ್, ಟಿ.ಎನ್.ರಾಜು, ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »