ಅಗತ್ಯ ವಸ್ತು ಪಟ್ಟಿಯಿಂದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಕೈಬಿಟ್ಟ ಕೇಂದ್ರ ಸರ್ಕಾರ
ಮೈಸೂರು

ಅಗತ್ಯ ವಸ್ತು ಪಟ್ಟಿಯಿಂದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಕೈಬಿಟ್ಟ ಕೇಂದ್ರ ಸರ್ಕಾರ

July 8, 2020

ನವದೆಹಲಿ, ಜು.7- ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಪಟ್ಟಿಯಿಂದ ಕೈಬಿಟ್ಟಿದೆ.

ಮಾರಕ ಕೊರೊನಾ ವೈರಸ್ ಭಾರತ ಪ್ರವೇಶ ಮಾಡುತ್ತಿ ದ್ದಂತೆಯೇ ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ ರಫ್ತಿನ ಮೇಲೆ ನಿಯಂತ್ರಣ ಹೇರಿದ್ದ ಕೇಂದ್ರ ಸರ್ಕಾರ ಇದೀಗ ಈ ಪಟ್ಟಿಯಿಂದ ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಕೈ ಬಿಟ್ಟಿದೆ. ದೇಶದಲ್ಲಿ ಪ್ರಸ್ತುತ ಮಾಸ್ಕ್‍ಗಳು ಮುಖ್ಯವಾಗಿ ಎನ್95 ಮಾಸ್ಕ್‍ಗಳು ಮತ್ತು ಸ್ಯಾನಿಟೈಸರ್ ಸಾಕಷ್ಟು ದಾಸ್ತಾನಿದ್ದು, ಇದೇ ಕಾರಣಕ್ಕೆ ಅಗತ್ಯ ವಸ್ತುಗಳ ಪಟ್ಟಿಯಿಂದ ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಕೈ ಬಿಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಅವರು, ಕೊರೊನಾ ವೈರಸ್ ದೇಶಕ್ಕೆ ಪ್ರವೇಶ ಮಾಡಿದ್ದ ಸಂದರ್ಭದಲ್ಲಿ ಮಾ.13ರಂದು ಅಗತ್ಯ ಸರಕುಗಳ ಕಾಯ್ದೆ, 1955ರ ಅಡಿಯಲ್ಲಿ ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಅಗತ್ಯ ವಸ್ತುಗಳು ಎಂದು ಘೋಷಣೆ ಮಾಡಲಾಗಿತ್ತು. ಅಂತೆಯೇ 100 ದಿನಗಳ ಕಾಲ ಅವುಗಳ ರಫ್ತು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ದೇಶದಲ್ಲಿ ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್ ಸಾಕಷ್ಟು ದಾಸ್ತಾನಿದೆ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಸ್ಯಾನಿಟೈಸರ್‍ಗಳ ಉತ್ಪಾದನೆಯಾಗುತ್ತಿದೆ. ಅಲ್ಲದೆ ಸಾಕಷ್ಟು ಗಾರ್ಮೆಂಟ್‍ಗಳು ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದು, ಹೀಗಾಗಿ ದೇಶದಲ್ಲಿ ಮಾಸ್ಕ್‍ಗಳು, ಹ್ಯಾಂಡ್ ಸ್ಯಾನಿಟೈಸರ್ ಕೊರತೆ ಉಂಟಾಗದು. ಇದೇ ಕಾರಣಕ್ಕೆ ಅಗತ್ಯ ವಸ್ತುಗಳ ಪಟ್ಟಿ ಯಿಂದ ಇವುಗಳನ್ನು ಕೈ ಬಿಡಲಾಗಿದೆ ಎಂದು ಹೇಳಿದರು.

ಜೂನ್ 30ಕ್ಕೆ 100 ದಿನಗಳು ಪೂರ್ಣಗೊಂಡಿದ್ದು, ಇದೀಗ ದೇಶದಲ್ಲಿ ಇವುಗಳ ಸಾಕಷ್ಟು ದಾಸ್ತಾನಿದೆ. ಹೀಗಾಗಿ ಮತ್ತೆ ನಿರ್ಬಂಧವನ್ನು ಮುಂದುವರೆಸುವ ಅವಶ್ಯಕತೆ ಇಲ್ಲ. ಕೇಂದ್ರಸರ್ಕಾರ ಮತ್ತು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಲ್ಲದೆ ಎಲ್ಲ ರಾಜ್ಯಗಳ ಜೊತೆ ಚರ್ಚೆ ನಡೆಸಿದ್ದೇವೆ. ಎಲ್ಲ ರಾಜ್ಯಗಳಲ್ಲೂ ಮಾಸ್ಕ್‍ಗಳು ಮತ್ತು ಸ್ಯಾನಿಟೈಸರ್‍ಗಳ ಸಾಕಷ್ಟು ದಾಸ್ತಾನಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

Translate »