ಮೈಮುಲ್ ಸಹಕಾರ ಕೋರಿದ ಹೋಟೆಲ್ ಮಾಲೀಕರ ಸಂಘ
ಮೈಸೂರು

ಮೈಮುಲ್ ಸಹಕಾರ ಕೋರಿದ ಹೋಟೆಲ್ ಮಾಲೀಕರ ಸಂಘ

July 8, 2020

ಮೈಸೂರು, ಜು.7(ಆರ್‍ಕೆಬಿ)- ಮೈಸೂರಿನಲ್ಲಿ 1500 ಹೋಟೆಲ್, ರೆಸ್ಟೋರೆಂಟ್, ಬೇಕರಿ, ಮತ್ತು ಸ್ವೀಟ್ ಸ್ಟಾಲ್‍ಗಳಿದ್ದು, ಪ್ರವಾಸೋದ್ಯಮವನ್ನೇ ಅವಲಂಬಿಸಿದ್ದೇವೆ. ಇತ್ತೀಚಿನ ಕೊರೊನಾ ಹಾವಳಿ ಹಾಗೂ ಲಾಕ್‍ಡೌನ್‍ನಿಂದಾಗಿ ಎಲ್ಲಾ ವ್ಯಾಪಾರವೂ ನೆಲಕಚ್ಚಿದೆ. ಈ ವೇಳೆಯಲ್ಲೂ ಹೋಟೆಲ್‍ಗಳು, ಬೇಕರಿಗಳು, ರೆಸ್ಟೋರೆಂಟ್ ಮತ್ತು ಸ್ವೀಟ್‍ಸ್ಟಾಲ್‍ಗಳು ನಂದಿನಿ ಹಾಲನ್ನು ಉಪಯೋಗಿಸುತ್ತಾ ಬಂದಿದ್ದು, ಹಾಲಿನ ಡೈರಿಗೆ ಹಾಗೂ ಹೈನುಗಾರಿಕೆ ಮಾಡುವವರಿಗೆ ಬಹಳ ಸಹಾಯವಾಗುತ್ತಿತ್ತು.

ವ್ಯಾಪಾರ ನೆಲಕಚ್ಚಿ ಹೋಟೆಲ್‍ನವರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬೆಂಗ ಳೂರು ಹಾಲು ಒಕ್ಕೂಟದ ಮಾರುಕಟ್ಟೆ ಪ್ರಕಾರ ಹೋಟೆಲ್‍ನವರಿಗೆ 1 ಕ್ರೇಟ್ ಹಾಲಿಗೆ 1 ಲೀ. ಉಚಿತ ಹಾಲು ನೀಡಿ ಸಹಕರಿಸಿದ್ದಾರೆ. ಅದೇ ರೀತಿ ಮೈಸೂರು ಹಾಲು ಒಕ್ಕೂಟವೂ ಹೋಟೆಲ್ ಉದ್ಯಮಕ್ಕೆ ಸಹಕಾರ ನೀಡುವಂತೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ನೇತೃತ್ವದಲ್ಲಿ ಮಂಗಳವಾರ ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಮಹೇಶ್ ಕಾಮತ್, ರವಿಶಾಸ್ತ್ರಿ, ಸುಬ್ರಹ್ಮಣ್ಯ ತಂತ್ರಿ, ರಾಘವೇಂದ್ರ ತಂತ್ರಿ ಇನ್ನಿತರರು ಇದ್ದರು.

 

 

Translate »