ಮೈಸೂರು, ಜು.7(ಎಂಕೆ)- ಇಲ್ಲಿ ಯುಜಿಡಿಯದ್ದೇ ನಿತ್ಯ ಸಮಸ್ಯೆ… 4 ವರ್ಷಗಳಲ್ಲಿ 300ಕ್ಕೂ ಹೆಚ್ಚು ಬಾರಿ ಮ್ಯಾನ್‍ಹೋಲ್ ತುಂಬಿ ಹರಿದಿದೆ…!
ಮೈಸೂರಿನ 8ನೇ ವಾರ್ಡ್ ವ್ಯಾಪ್ತಿಯ ಶಿವರಾಶ್ರೀಶ್ವರ ನಗರದ 4ನೇ ಕ್ರಾಸ್‍ನಲ್ಲಿ ಪದೇ ಪದೆ ಒಳಚರಂಡಿ (ಯುಜಿಡಿ) ಸಮಸ್ಯೆ ಉಂಟಾ ಗುತ್ತಿದೆ. ವರ್ಷದಲ್ಲಿ 70-80 ದಿನಗಳು ಇಲ್ಲಿನ ಮ್ಯಾನ್‍ಹೋಲ್ ಬಾಯಿ ತೆರೆದು ಒಳಚರಂಡಿ ನೀರನ್ನು ಹೊರಹಾಕುತ್ತದೆ. ರಸ್ತೆಯಲ್ಲಿ ಹರಿಯುವ ಕೊಳಚೆ ನೀರಿನ ಮೇಲೇ ವಾಹನಗಳು ಸಂಚ ರಿಸುತ್ತವೆ. ದುರ್ವಾಸನೆ ಬೀರುವ ಮಾರ್ಗದಲ್ಲಿ ಪಾದಚಾರಿಗಳು ಮೂಗು ಮುಚ್ಚಿ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಯುಜಿಡಿ ಸಮಸ್ಯೆಯಿಂದಾಗಿ ದುರ್ವಾಸನೆ, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮನೆಯೊಳಗೆಲ್ಲಾ ದುರ್ವಾಸನೆ ಹರಡುತ್ತಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ವರ್ಷದಲ್ಲಿ 80ಕ್ಕೂ ಹೆಚ್ಚು ಬಾರಿ ಯುಜಿಡಿ ಕಟ್ಟಿಕೊಂಡು ಮ್ಯಾನ್ ಹೋಲ್‍ನಿಂದ ಒಳಚರಂಡಿ ನೀರೆಲ್ಲಾ ಹೊರಹರಿಯುತ್ತದೆ. ಪಾಲಿಕೆಯವರು ಬಂದು ಸರಿಪಡಿಸುವಷ್ಟರಲ್ಲಿ ಐದಾರು ದಿನಗಳೇ ಕಳೆದಿರುತ್ತವೆ. ಅಲ್ಲಿಯವರೆಗೂ ನಾವು ನರಕ ಅನುಭವಿಸುವುದು ಅನಿವಾರ್ಯವಾಗಿದೆ ಎಂದು ಇಲ್ಲಿನ ನಿವಾಸಿ ಜಿ.ಗಣೇಶ್ ‘ಮೈಸೂರು ಮಿತ್ರ’ನಲ್ಲಿ ದೂರಿದರು. 4 ವರ್ಷಗಳಿಂದ ಈ ಸಮಸ್ಯೆ ಹಾಗೇ ಮುಂದು ವರಿದಿದೆ. ಪಾಲಿಕೆ ಸಿಬ್ಬಂದಿಗಳು ಸುಮ್ಮನೆ ಬಂದು-ಹೋಗುವುದಾಗಿದೆಯೇ ಹೊರತು ಶಾಶ್ವತ ಪರಿಹಾರ ಮಾತ್ರ ದೊರಕಿಸಿಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯುಜಿಡಿಯಲ್ಲಿ ಮರಳು: ಪ್ರತಿಬಾರಿ ಯುಜಿಡಿ ಸರಿಪಡಿಸುವಾಗ ರಾಶಿ ರಾಶಿ ಮರಳನ್ನು ಮ್ಯಾನ್‍ಹೋಲ್‍ನಿಂದ ಹೊರತೆಗೆಯಲಾಗುತ್ತಿದೆ. ಯುಜಿಡಿ ಪೈಪ್‍ಗಳು ಅಲ್ಲಲ್ಲಿ ಒಡೆದು ಹೋಗಿರುವುದರಿಂದ ಕೊಳಚೆ ನೀರಿನ ಜೊತೆಗೆ ಮರಳು ಮಿಶ್ರಣ ವಾಗುತ್ತಿದೆ. ಹೊಸದಾಗಿ ಯುಜಿಡಿ ಪೈಪ್‍ಲೈನ್ ಕಾಮಗಾರಿ ಮಾಡಿದರಷ್ಟೇ ಶಾಶ್ವತ ಪರಿಹಾರ ಸಾಧ್ಯ ಎಂದು ಹೇಳಿದರು. ಅಲ್ಲದೆ ಶಿವರಾತ್ರೀಶ್ವರ ನಗರದಲ್ಲಿ ಮನೆಗಳು ಹೆಚ್ಚಾಗುತ್ತಿದ್ದು, ಸಮೀಪದಲ್ಲಿಯೇ ಖಾಸಗಿ ಶಾಲೆಯ ಹಾಸ್ಟೆಲ್‍ನಲ್ಲಿ ನೂರಾರು ವಿದ್ಯಾರ್ಥಿಗಳಿದ್ದಾರೆ. ನಾಲ್ಕು ವರ್ಷಗಳಿಂದ 300ಕ್ಕೂ ಹೆಚ್ಚು ಬಾರಿ ಯುಜಿಡಿ ಮ್ಯಾನ್‍ಹೋಲ್ ತುಂಬಿ ಹರಿದಿದ್ದು, ಪ್ರತಿ ಬಾರಿ ಸರಿಪಡಿಸಲಾಗುತ್ತಿದೆಯೇ ಹೊರತು ಶಾಶ್ವತ ಪರಿಹಾರ ನೀಡಿಲ್ಲ ಎಂದು ನಿವಾಸಿ ಅಂಕರಾಜು ಬೇಸರ ವ್ಯಕ್ತಪಡಿಸಿದರು.