ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆ
ಮೈಸೂರು

ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆ

March 10, 2021

ಮೈಸೂರು,ಮಾ.9(ಎಸ್‍ಪಿಎನ್)-2021ರ ವಿಶ್ವ ಮಹಿಳಾ ದಿನಾಚರಣೆಯ ಘೋಷವಾಕ್ಯ `ಸಮಾನ ಭವಿಷ್ಯಕ್ಕೆ ಮಹಿಳಾ ನೇತೃತ್ವ’ ಎಂಬುದಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ರೂಪಿತವಾಗುತ್ತಿವೆ ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ಹಾಗೂ ಜನ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಸುಶೀಲಾ ಅಭಿಪ್ರಾಯಪಟ್ಟರು.

ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ಡಾ.ಶ್ರೀ ರಾಜೇಂದ್ರಭವನದಲ್ಲಿ ಜೆಎಸ್‍ಎಸ್ ಜನ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

1908ರಲ್ಲಿ ನ್ಯೂಯಾರ್ಕ್‍ನಲ್ಲಿ ಕಾರ್ಮಿಕರು ಒಗ್ಗೂಡಿ ಮಹಿಳಾ ದಿನಾಚರಣೆಯನ್ನು ಆಚರಿಸಲು ಮುಂದಾದರು. ಅಂದಿನಿಂದ ಇಂದಿನವರೆಗೆ ಮಾ.8ರಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಅಲ್ಲದೆ, ಮಹಿಳೆಯರ ಸಮಾಜಮುಖಿ ಕಾರ್ಯಕ್ರಮ ವನ್ನು ಪುರುಷರು ಗೌರವಿಸುತ್ತಾರೆ. ಅಂತಹವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.

ನಂತರ ಮಾತನಾಡಿದ ಜೆಎಸ್‍ಎಸ್ ಪಬ್ಲಿಕ್ ಶಾಲೆ ಪ್ರಾಂಶುಪಾಲರಾದ ಎಂ.ಆಶಾ, ಇಂದಿನ ಜಗತ್ತಿನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ತಮ್ಮದೇ ಛಾಪನ್ನು ಮೂಡಿಸಿ, ತಾವು ಯಾವ ಸಾಧನೆಯಿಂದಲೂ ಹಿಂದುಳಿದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಒಂದು ಸುಸ್ಥಿರ ಸಂಸಾರ, ಸಮಾಜ ಕಟ್ಟಲು ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದರು. ಈ ವೇಳೆ ಗಾರ್ಮೆಂಟ್ಸ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ಸುನಿತ ಮತ್ತು ಸರಿಗಮಪದಲ್ಲಿ ಸ್ಪರ್ಧಿಸಿದ್ದ ಕು.ಪ್ರಿಯಾ ಅವರನ್ನು ಸÀನ್ಮಾನಿಸಲಾಯಿತು. ನಂತರ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ವೇಳೆ ಜ್ಞಾನ ಜ್ಯೋತಿ ಸಂಸ್ಥೆ ಕಾರ್ಯದರ್ಶಿ ಹೇಮಾವತಿ, ಸದಸ್ಯೆ ಲೀಲಾ ಶಿವಕುಮಾರ್, ಪ್ರೇಮ ನಟರಾಜು, ಅಹಲ್ಯಾ ಸುರೇಶ್, ಜೆಎಸ್‍ಎಸ್ ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಿ.ಎಂ ಶಶಿಕಲಾ, ಸಲಹೆಗಾರರಾದ ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

Translate »