ಗುಂಡ್ಲುಪೇಟೆ, ಮಾ.19 (ಸೋಮ್.ಜಿ)- ವಿಳಾಸ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಗೃಹಿಣಿಯೋರ್ವರ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಟೀ ಕ್ಯಾಂಟೀನ್ ಪಾಪಣ್ಣ ಎಂಬುವರ ಪತ್ನಿ ಬಸಮ್ಮಣ್ಣಿ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು.
ವಿವರ: ಗುರುವಾರ ಮುಂಜಾನೆ ಬಸಮ್ಮಣ್ಣಿ ಅವರು ಮನೆ ಮುಂದೆ ಕೆಲಸ ಮಾಡುತ್ತಿದ್ದಾಗ ಕಪ್ಪು ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಬಸಮ್ಮಣ್ಣಿಯವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ 1.20 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ವೇಳೆ ಬಸಮ್ಮಣ್ಣಿ ಪ್ರತಿರೋಧ ತೋರಿದರಾದರೂ, ದುಷ್ಕರ್ಮಿಗಳು ಮಾಂಗಲ್ಯ ಸರ ಜೋರಾಗಿ ಎಳೆದ ಪರಿಣಾಮ ಓಲೆ ಸಿಲುಕಿ ಎಡಕಿವಿಗೆ ತೀವ್ರ ಗಾಯಗಳಾಗಿವೆ. ತಕ್ಷಣ ಬಸಮ್ಮಣ್ಣಿಯವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಸಿಪಿಐ ಮಹದೇವಸ್ವಾಮಿ, ಎಸ್‍ಐ ರಾಧಾ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತೆರಕಣಾಂಬಿ ಪೆÇಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.