ಮೈಸೂರಲ್ಲಿ ನಿರ್ಮಾಣವಾಗಲಿರುವ ಯುದ್ಧ ಸ್ಮಾರಕಕ್ಕೆ ಚಾಮರಾಜನಗರ ಕ್ವಾರಿ ಕಲ್ಲು
ಮೈಸೂರು

ಮೈಸೂರಲ್ಲಿ ನಿರ್ಮಾಣವಾಗಲಿರುವ ಯುದ್ಧ ಸ್ಮಾರಕಕ್ಕೆ ಚಾಮರಾಜನಗರ ಕ್ವಾರಿ ಕಲ್ಲು

January 18, 2021

ಮೈಸೂರು, ಜ.17- ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ `ಯುದ್ಧ ಸ್ಮಾರಕ’ ಕಾಮ ಗಾರಿ ಆರಂಭಕ್ಕೆ ಕಾಲ ಸನ್ನಿಹಿತವಾಗಿದ್ದು, ಸ್ಮಾರಕ ನಿರ್ಮಾಣ ಕ್ಕಾಗಿ ಚಾಮರಾಜನಗರ ಜಿಲ್ಲೆಯ ಕ್ವಾರಿಯಲ್ಲಿ ವಿವಿಧ ಆಕಾರದಲ್ಲಿ ಕಲ್ಲುಗಳ ಸ್ಲ್ಯಾಬ್ ರೂಪುಗೊಳ್ಳುತ್ತಿದೆ. ಮೊದಲ ಹಂತ ದಲ್ಲಿ 33 ಕ್ಯೂಬಿಕ್ ಮೀಟರ್ ಉತ್ಕøಷ್ಟ ಕಲ್ಲುಗಳ ಸ್ಲ್ಯಾಬ್‍ಗಳು ಮುಂದಿನ ವಾರ ಮೈಸೂರಿಗೆ ಬರಲಿವೆ.

ಮೈಸೂರು ನಗರದಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕಾಗಿ ನಿವೃತ್ತ ಸೈನಿಕರ ಸಂಘದ 20 ವರ್ಷಗಳ ಬೇಡಿಕೆ ಕೊನೆಗೂ ಈಡೇರಿಕೆ ಹಂತಕ್ಕೆ ಬಂದಿದ್ದು, ಯುದ್ಧ ಸ್ಮಾರಕ ಕಾಮಗಾರಿ ಆರಂಭಕ್ಕೆ ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ಮಾರಕ ವನ್ನು ಕಾಂಕ್ರಿಟ್ ಕಟ್ಟಡವಾಗಿಸಬಾರದೆಂಬ ಉದ್ದೇಶದಿಂದ ಉತ್ಕøಷ್ಟ ಕಲ್ಲಿನ ಸ್ಲ್ಯಾಬ್ ಬಳಸಿ ಪಾರಂಪರಿಕ ಶೈಲಿಯಲ್ಲಿ ನಿರ್ಮಿ ಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಚಾಮರಾಜನಗರ ಜಿಲ್ಲೆಯ ಕ್ವಾರಿ ಮಾಲೀಕರಾದ ಹೆಚ್.ಎಂ.ಪುಟ್ಟಮಾದಯ್ಯ (80) ಎಂಬುವರು 33 ಕ್ಯೂಬಿಕ್ ಮೀಟರ್ ಕಪ್ಪು ಶಿಲೆ(ಉತ್ಕøಷ್ಟ ಕಲ್ಲು)ಯನ್ನು ಸರ್ಕಾರಕ್ಕೆ ರಾಜಧನ ಹಾಗೂ ವಿವಿಧ ಶುಲ್ಕ ತಾವೇ ಪಾವತಿಸಿ ಉಚಿತವಾಗಿ ಸ್ಮಾರಕ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಅಲ್ಲದೆ ಕ್ವಾರಿಯಿಂದ 300 ಟನ್ ತೂಕದ ಕಚ್ಛಾ ಶಿಲೆಯನ್ನು ಚಾಮರಾಜನಗರದ ಎಸ್‍ವಿಜಿ ಗ್ರಾನೈಟ್ಸ್ ಮಾಲೀಕ ಎ.ಶ್ರೀನಾಥ್ ಯಾವುದೇ ಶುಲ್ಕ ಪಡೆಯದೇ ಸ್ಮಾರಕ ನಿರ್ಮಾ ಣಕ್ಕೆ ಅನುಗುಣವಾಗಿ ಬೇಕಾದ ಆಕಾರದಲ್ಲಿ ಕತ್ತರಿಸಿಕೊಡಲು ಸಮ್ಮತಿಸಿದ್ದಾರೆ. ಕಲ್ಲುಗಳ ಕತ್ತರಿಸುವ ಪ್ರಕ್ರಿಯೆ ಆರಂಭ ವಾಗಿದ್ದು, ಜನವರಿ 20ರೊಳಗೆ ಮೈಸೂರು ಜಿಲ್ಲಾಡಳಿತದ ವಶಕ್ಕೆ ಕಲ್ಲುಗಳು ದೊರೆಯುವ ಸಾಧ್ಯತೆ ಇದೆ.

2000ರಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ವೀಕೇರ್ ನಿವೃತ್ತ ಸೈನಿಕರ ಟ್ರಸ್ಟ್‍ನ ಎಂ.ಎನ್.ಸುಬ್ರಹ್ಮಣಿ ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. 2010ರಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಿದ ಪರಿ ಣಾಮ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಹುಡುಕುವ ಪ್ರಕ್ರಿಯೆ ನಡೆಸಲಾಗಿತ್ತು. ನಂತರ ಅದು ನೆನೆಗುದಿಗೆ ಬಿದ್ದಿತ್ತು. ಆದರೆ 2012ರಲ್ಲಿ ಮತ್ತೆ ಸ್ಮಾರಕ ನಿರ್ಮಾಣಕ್ಕೆ ಸಂಬಂ ಧಿಸಿದಂತೆ ಪ್ರಕ್ರಿಯೆ ಆರಂಭವಾಗಿತ್ತು. 2016ರಲ್ಲಿ ನಿವೃತ್ತ ಯೋಧರೂ ಆಗಿರುವ ಮೈಸೂರು ಉಪ ವಿಭಾಗಾಧಿಕಾರಿ ಯಾಗಿದ್ದ ಸಿ.ಎಲ್.ಆನಂದ್ (ಹಾಲಿ ಚಾಮರಾಜನಗರ ಅಪರ ಜಿಲ್ಲಾಧಿಕಾರಿ) ಅವರು ಯುದ್ಧ ಸ್ಮಾರಕ ನಿರ್ಮಾಣಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಜಿಲ್ಲಾ ಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯ ಬಲ ಭಾಗದಲ್ಲಿ ರುವ ಸುಮಾರು 5 ಎಕರೆ ವಿಸ್ತೀರ್ಣದ ಎನ್‍ಸಿಸಿ ಪರೇಡ್ ಮೈದಾನದಲ್ಲಿ 4 ಚದರ ಅಡಿ ವಿಸ್ತೀರ್ಣದಲ್ಲಿ ಯುದ್ಧಸ್ಮಾರಕ ನಿರ್ಮಿಸಲು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಲ್ಲದೆ ಅಂದು ಜಿಲ್ಲಾಧಿಕಾರಿಯಾಗಿದ್ದ ಡಿ.ರಂದೀಪ್ ಅವರಿಂದ ಆ ಜಾಗವನ್ನು ಮಂಜೂರು ಮಾಡಿಸಿಕೊಳ್ಳಲಾಗಿತ್ತು. ಈ ಹಿಂದೆ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ನೇತೃತ್ವದಲ್ಲಿ ರಚಿಸಲಾಗಿದ್ದ ಯುದ್ಧ ಸ್ಮಾರಕ ನಿರ್ಮಾಣ ಸಮಿತಿಯ ಸಭೆಯಲ್ಲಿ
ಸಿ.ಎಲ್.ಆನಂದ್ ಅವರು, ಡಿಸಿ ಕಚೇರಿ ಪಕ್ಕದಲ್ಲಿರುವ ಮೈದಾನÀದಲ್ಲಿ ಸ್ಮಾರಕ ನಿರ್ಮಾಣ ನಕ್ಷೆಯನ್ನು ಹಾಜರುಪಡಿಸಿದ್ದರು. ಇದಕ್ಕೆ ಯುದ್ಧಸ್ಮಾರಕ ಸಮಿತಿ ಒಪ್ಪಿಗೆ ಸೂಚಿಸಿದ್ದರಿಂದ ಜಿಲ್ಲಾಡಳಿತ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಅಂದಿನ ಸರ್ಕಾರ ಯುದ್ಧ ಸ್ಮಾರಕ ನಿರ್ಮಾಣಕ್ಕೆ 1.41 ಕೋಟಿ ರೂ., ಅನುದಾನ ಬಿಡುಗಡೆ ಮಾಡಲು ಸಮ್ಮತಿಸಿ, ಮುಂಗಡವಾಗಿ 50 ಲಕ್ಷ ರೂ. ಬಿಡುಗಡೆ ಮಾಡಿತ್ತು.

ಸ್ಮಾರಕದಲ್ಲಿ: ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಈ ಮೈದಾನದಲ್ಲಿ ಇದೀಗ ಉದ್ಯಾ ನವನದಂತೆ ಗಿಡ ಬೆಳೆಸಲಾಗಿದೆಯಾಗಿದ್ದರೂ, ಸಮರ್ಪಕ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಇದೇ ಮೈದಾನದಲ್ಲಿ ಯುದ್ಧ ಸ್ಮಾರಕ ನಿರ್ಮಿಸಿದರೆ ಹೆಚ್ಚಿನ ಮಹತ್ವ ಪಡೆಯುತ್ತದೆ. ಪಾರಂಪರಿಕ ಶೈಲಿಯಲ್ಲಿಯೇ ಸ್ಮಾರಕ ನಿರ್ಮಾಣವಾಗಲಿದ್ದು, ಚೌಕಾಕಾರದಲ್ಲಿ ನಿರ್ಮಿಸ ಲಾಗುತ್ತದೆ. ಒಂದು ಭಾಗದಲ್ಲಿ 3 ವಿಧದ ಸೈನ್ಯದ ಸಂಕೇತದೊಂದಿಗೆ ದ್ವಾರ ನಿರ್ಮಿಸ ಲಾಗುತ್ತದೆ. ನಂತರ ಉಳಿದ ಮೂರು ಬದಿಯಲ್ಲಿ ಭೂ ಸೇನೆ, ವಾಯು ಸೇನೆ, ನೌಕಾದಳದ ಮಹತ್ವ ಸಾರುವ ಯುದ್ಧ ಟ್ಯಾಂಕರ್‍ಗಳು, ಯುದ್ಧ ವಿಮಾನಗಳು, ನೌಕೆ, ಗನ್ ಸೇರಿದಂತೆ ಯುದ್ಧದಲ್ಲಿ ಬಳಸುವ ಪರಿಕರಗಳನ್ನು ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಬಳಸಲ್ಪಟ್ಟ ಯುದ್ಧ ಪರಿಕರ ನೀಡಲು ಸೇನೆ ಸಮ್ಮತಿಯೂ ಸೂಚಿಸಿದೆ.

ಸಭಾಂಗಣ: ಯುದ್ಧ ಸ್ಮಾರಕದ ಬಳಿ ಪ್ರೇರಣ (ಮೋಟಿವೇಟಿವ್ ಹಾಲ್) ಸಭಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ. ಅದರಲ್ಲಿ ಭಾರತೀಯ ಸೈನ್ಯದ ಮೂರು ವಿಭಾಗಗಳು ಈ ಹಿಂದೆ ನಡೆಸಿರುವ ಯುದ್ಧಗಳು, ದಾಳಿಗಳು, ಕಾರ್ಯಾಚರಣೆಗಳ ಚಿತ್ರಗಳನ್ನು ಪ್ರದರ್ಶಿಸ ಲಾಗುತ್ತದೆ. ಗ್ರಂಥಾಲಯ, ಸೈನ್ಯದ ಕಾರ್ಯ ದಕ್ಷತೆ, ಹುತಾತ್ಮರಾದ ಯೋಧರ ವಿವರ, ಸರ್ಕಾರದಿಂದ ಗ್ಯಾರೆಂಟ್ರಿ ಅವಾರ್ಡ್ ಪಡೆದ ಹಿರಿಯ ಅಧಿಕಾರಿಗಳು, ಹುತಾತ್ಮ ಅಧಿಕಾರಿಗಳು, ಫೀಲ್ಡ್ ಮಾರ್ಷಲ್ ಮೇಜರ್ ಜನರಲ್ ಕೆ.ಎಂ.ಕಾರಿಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಸೇರಿದಂತೆ ಮಹಾನ್ ನಾಯಕರ ಜೀವನ ಚಿತ್ರಣಗಳ ಪ್ರದರ್ಶನ ಕ್ಕಿಡಲಾಗುತ್ತದೆ. ದೆಹಲಿಯಲ್ಲಿರುವ ಯುದ್ಧಸ್ಮಾರಕ ಹೊರತು ಪಡಿಸಿದರೆ ಮೈಸೂರಿನಲ್ಲಿ ನಿರ್ಮಿಸಲುದ್ದೇಶಿರುವ ಸ್ಮಾರಕ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ. ಇದಕ್ಕಾಗಿ ಭರದ ಸಿದ್ಧತೆ ಸದ್ದಿಲ್ಲದೆ ನಡೆಸಲಾಗುತ್ತಿದೆ.

ಹುತಾತ್ಮರಿಗೆ ಗೌರವ: ಮೈಸೂರಿನಲ್ಲಿ ಪೊಲೀಸ್, ಅಬಕಾರಿ ಹಾಗೂ ಅರಣ್ಯ ಇಲಾಖೆಯ ಹುತಾತ್ಮರ ಸ್ಮಾರಕವಿದೆ. ಕರ್ತವ್ಯದ ವೇಳೆ ಹುತಾತ್ಮರಾದರೆ ಸ್ಮಾರಕದ ಮುಂದೆ ತಂದು ಅಂತಿಮ ನಮನ ಸಲ್ಲಿಸಿ ಗೌರವಿಸುವ ವಾಡಿಕೆಯಿದೆ. ಆದರೆ ಜಿಲ್ಲೆಯ ಯೋಧರು ದೇಶಸೇವೆಯ ವೇಳೆ ಹುತಾತ್ಮರಾದರೆ ಅವರಿಗೆ ಅಂತಿಮ ಗೌರವ ಸಲ್ಲಿಸುವುದಕ್ಕೆ ಯಾವುದಾದರೂ ಮೈದಾನವನ್ನು ಆಶ್ರಯಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಯುದ್ಧ ಸ್ಮಾರಕ ನಿರ್ಮಾಣವಾದರೆ ಇದೇ ಸ್ಥಳದಲ್ಲಿ ಅಂತಿಮ ಗೌರವ ಸಲ್ಲಿಸಲು ಹಾಗೂ ಅಂತಿಮ ದರ್ಶನ ಪಡೆಯಲು ಸಹಕಾರಿಯಾಗುತ್ತದೆ.

ಪರಿಶೀಲನೆ: ಚಾಮರಾಜನಗರದ ಅಪರ ಜಿಲ್ಲಾಧಿಕಾರಿಯಾಗಿರುವ, ನಿವೃತ್ತ ಯೋಧ ರಾಗಿರುವ ಸಿ.ಎಲ್.ಆನಂದ್ ಇತ್ತೀಚೆಗೆ ನಿವೃತ್ತ ಮೇ.ಜನರಲ್ ಎಸ್.ಜಿ.ಒಂಭತ್ಕೆರೆ, ನಿವೃತ್ತ ಮೇ.ಜನರಲ್ ಕೆ.ಕೆ.ಮೂರ್ತಿ, ನಿವೃತ್ತ ಬ್ರಿಗೇಡ್ ವಿ.ಕೆ.ಅಡ್ಡಪ್ಪ, ನಿವೃತ್ತ ಲೆ.ಕರ್ನಲ್ ವಿಜಯ ಕುಮಾರ್, ಜಿಲ್ಲಾ ಸೈನಿಕ್ ಬೋರ್ಡ್ ಉಪನಿರ್ದೇಶಕ, ನಿವೃತ್ತ ಮೇ.ಬಾಲ ಸುಬ್ರ ಹ್ಮಣ್ಯಂ ಹಾಗೂ ಇನ್ನಿತರರು ಹೆಚ್.ಎಂ.ಪುಟ್ಟಮಾದಯ್ಯರ ಕ್ವಾರಿ ಹಾಗೂ ಎಸ್‍ವಿಜಿ ಗ್ರಾನೈಟ್ಸ್‍ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ 33 ಕ್ಯೂಬಿಕ್ ಮೀಟರ್ ಕಪ್ಪುಶಿಲೆ ನೀಡಿದ ಹೆಚ್.ಎಂ.ಮಾದಪ್ಪ ದೇಶದಲ್ಲಿ ಸೈನಿಕರು ಹಾಗೂ ರೈತರು ಮಹತ್ತರ ಪಾತ್ರವಹಿಸಲಿ ದ್ದಾರೆ. ಇಬ್ಬರ ಸೇವೆ ಸ್ಮರಣೀಯ. ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಿಸುತ್ತಿರುವ ಬಗ್ಗೆ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ನಿವೃತ್ತ ಯೋಧರಾಗಿರುವ ಎಡಿಸಿ ಸಿ.ಎಲ್.ಆನಂದ್ ನಮ್ಮ ಗಮನಕ್ಕೆ ತಂದರು. ಸ್ವಯಂ ಪ್ರೇರಣೆಯಿಂದ 33 ಕ್ಯುಬಿಕ್ ಮೀಟರ್ ಕಲ್ಲನ್ನು ನೀಡಿ, ದೇಶಸೇವೆಯಲ್ಲಿ ತೊಡಗಿರುವ ಸೈನಿಕರಿಗೆ ಗೌರವ ಸಮರ್ಪಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಎಂ.ಟಿ.ಯೋಗೇಶ್ ಕುಮಾರ್