ಸತ್ಯ ಹೇಳಲು ನಾನು ಹಿಂಜರಿಯುವುದಿಲ್ಲ… ಹಾಗಾಗಿ ಅತೀ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ
ಮೈಸೂರು

ಸತ್ಯ ಹೇಳಲು ನಾನು ಹಿಂಜರಿಯುವುದಿಲ್ಲ… ಹಾಗಾಗಿ ಅತೀ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ

January 18, 2021

ಮೈಸೂರು, ಜ.17(ಆರ್‍ಕೆಬಿ)- ನೇರ ಹಾಗೂ ಸತ್ಯ ಹೇಳುವ ನಾನು ಕೆಲವೊಮ್ಮೆ ಒರಟು ಮಾತಿನಲ್ಲಿ ಹೇಳುತ್ತೇನೆ. ಸತ್ಯ ಹೇಳಲು ನಾನು ಹಿಂಜರಿಯುವುದಿಲ್ಲ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ವಿವಾದ ಗಳಿಗೂ ಸಿಲುಕುತ್ತೇನೆ. ಹಾಗಾಗಿ ಅತೀ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ಎಂದರೆ ಅದು ನಾನೇ ಎಂದು ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿ ಕನಕ ನೌಕರರ ಸಂಘ ಆಯೋಜಿ ಸಿದ್ದ ಶ್ರೀ ಕನಕದಾಸರ 533ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾನು ಸತ್ಯ ಹೇಳಿದರೂ ವಿವಾದವಾಗು ತ್ತದೆ. ಮಾಧ್ಯಮದವರೂ ಅದಕ್ಕೆ ಬಣ್ಣ ಹಚ್ಚುತ್ತಾರೆ. ಆರ್‍ಎಸ್‍ಎಸ್‍ನವರೂ ಸಾಮಾ ಜಿಕ ಜಾಲತಾಣಗಳಲ್ಲಿ ರಂಗು ರಂಗಿನ ಬಣ್ಣ ಹಚ್ಚುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ಹನುಮ ಜಯಂತಿ ದಿನ ಸ್ನೇಹಿ ತನ ಮನೆಗೆ ಊಟಕ್ಕೆ ಹೋಗಿದ್ದೆ. ಅಲ್ಲೊಬ್ಬ ನನ್ನನ್ನು ಇಂದು ಹನುಮ ಜಯಂತಿ, ಬಾಡೂಟ ತಿನ್ನುತ್ತೀರಾ ಎಂದ. ಅದಕ್ಕೆ ನಾನು ಹನುಮ ಹುಟ್ಟಿದ್ದು ಯಾರಿಗೂ ಗೊತ್ತಿಲ್ಲ, ತಿನ್ನೋ ಸುಮ್ಮನೆ ಎಂದು ಹೇಳಿದ್ದೇ. ಅದನ್ನೇ ದೊಡ್ಡ ವಿಚಾರ ಮಾಡಿದರು ಎಂದರು.

ನನ್ನ ಇಮೇಜ್ ಹಾಳುವ ಮಾಡುವ ಪ್ರಯತ್ನ: ಗೋಹತ್ಯೆ ವಿಚಾರದಲ್ಲಿ ಯಾರು ಏನು ಹೇಳಿದರೂ ವಿವಾದವಾಗುವುದಿಲ್ಲ. ನಾನು ಹೇಳಿದರೆ ಸಾಕು ಹೇಗಾದರೂ ಮಾಡಿ ಸಾರ್ವಜನಿಕರ ದೃಷ್ಟಿಯಲ್ಲಿ ನನ್ನ ಇಮೇಜ್ ಕಡಿಮೆ ಮಾಡಿ, ನನ್ನನ್ನು ಖಳ ನಾಯಕ ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೂ ಸತ್ಯ ಹೇಳಲು ನಾನು ಎಂದಿಗೂ ಅಂಜುವುದಿಲ್ಲ. ಹೇಳದೇ ಹೋದರೆ ನಾನು ಆತ್ಮದ್ರೋಹ ಮಾಡಿಕೊಂಡಂತೆ. ನಾನು ಸತ್ಯ ಹೇಳೇ ಹೇಳುತ್ತೇನೆ ಎಂದರು.

ನಾನು ವಿಧಾನಸಭೆಯಲ್ಲಿ ಗೋಹತ್ಯೆ ವಿಚಾರದಲ್ಲಿ ಚರ್ಚೆ ವೇಳೆ ಹೇಳಿದ್ದೆ. ಗೋಮಾಂಸವನ್ನು ಇಂಥದೇ ಸಮುದಾಯ, ಧರ್ಮದವರು ತಿನ್ನುತ್ತಾರೆ ಎಂದು ಹೇಳ ಲಾಗದು. ಆಹಾರ ಹವ್ಯಾಸ ಅವರವರಿಗೆ ಸೇರಿದ್ದು. ಅದನ್ನು ದೊಡ್ಡ ವ್ಯಾಖ್ಯಾನಕ್ಕೆ ಒಳ ಪಡಿಸಿ, ಸಮಾಜ ಒಡೆಯುವ ಕೆಲಸ ಮಾಡ ಬೇಡಿ. ತಿನ್ನಬೇಕು ಎನಿಸಿದರೆ ತಿನ್ನುತ್ತೇನೆ. ನೀವ್ಯಾರು ಕೇಳುವುದಕ್ಕೆ ಎಂದೆ. ಇಂಥ ಮೂಲಭೂತ ಹಕ್ಕುಗಳನ್ನು ಪ್ರಶ್ನಿಸುವುದು ಸಂವಿಧಾನ ಬಾಹಿರ. ಮಾಡಲು ಹೋಗ ಬೇಡಿ ಎಂದು ತಿಳಿಸಿದ್ದೆ ಎಂದು ಸಿದ್ದ ರಾಮಯ್ಯ ಹೇಳಿದರು.

1964ರಲ್ಲಿಯೇ ಕರ್ನಾಟಕ ಪ್ರಿವೆನ್ಷನ್ ಆಫ್ ಕೌ ಸ್ಲಾಟ್ಟರ್ ಅಂಡ್ ಕ್ಯಾಟಲ್ ಪ್ರಿಸ ರ್ವೆಷನ್ ಆ್ಯಕ್ಟ್‍ನಲ್ಲಿಯೇ ಸ್ಪಷ್ಪವಾಗಿದೆ. 12 ವರ್ಷ ಆದ ನಂತರ ವಯಸ್ಸಾಗುವ ದನ ಗಳನ್ನು ಮಾರಾಟ ಮಾಡಬಹುದು ಎಂದು. ಅದರಲ್ಲಿ ಗೋವುಗಳ ರಕ್ಷಣೆ ಬಗ್ಗೆ ಹೇಳ ಲಾಗಿದೆ. ಮಿಶ್ರ ತಳಿ ಹಸುಗಳು ಒಮ್ಮೆಯೇ ಗಂಡು ಮತ್ತು ಹೆಣ್ಣು ಕರುಗಳನ್ನು ಹೆಚ್ಚಾ ಗಿಯೇ ಹಾಕುತ್ತದೆ. ಹಾಗಾದರೆ ಗಂಡು ಕರುಗಳನ್ನು ಏನು ಮಾಡಬೇಕು?. 12 ವರ್ಷವಾದ ಬಳಿಕ ಹಸು, ಎಮ್ಮೆ, ಎತ್ತು ಸಾಕಲು ಕನಿಷ್ಠ 7 ಕೆಜಿ ಮೇವು ಬೇಕಾಗು ತ್ತದೆ. ಅಂದರೆ ದಿನಕ್ಕೆ 100 ರೂ., ತಿಂಗಳಿಗೆ 3000 ರೂ., ವರ್ಷಕ್ಕೆ 36000 ರೂ. ಬೇಕಾಗುತ್ತದೆ. ಇದು ರೈತರಿಗೆ ಕಷ್ಟವಲ್ಲವೇ? ಈ ಎಲ್ಲಾ ಸತ್ಯವನ್ನು ಹೇಳಿದರೆ ಸಿದ್ದ ರಾಮಯ್ಯ ಗೋಮಾತೆ ವಿರೋಧಿ, ಗೋಹತ್ಯೆ ಪರ ಇದ್ದಾರೆ ಎಂದೆಲ್ಲಾ ಗದ್ದಲ ಎಬ್ಬಿಸುತ್ತಾರೆ ಎಂದರು.

ಮನುಷ್ಯತ್ವದ ಶಿಕ್ಷಣ ಅಗತ್ಯ: ಇನ್ನೂ ಅಸ್ಪøಶ್ಯತೆ ಹೋಗಿಲ್ಲ. ಜಾತಿ ವ್ಯವಸ್ಥೆ ಆಳ ವಾಗಿ ಬೇರೂರಿದೆ. ಅದಕ್ಕೆ ನೀರೆರೆದು ಇನ್ನಷ್ಟು ಗಟ್ಟಿಗೊಳಿಸಲಾಗುತ್ತಿದೆ. ನಮ್ಮ ಆರ್ಥಿಕ ವ್ಯವಸ್ಥೆಗೆ ಸಾಮಾಜಿಕ, ಆರ್ಥಿಕ ಚಲನೆ ಇಲ್ಲ. ಸಾಮಾಜಿಕ ಚಲನೆ ಎಲ್ಲಿ ಇರುವುದಿ ಲ್ಲವೋ ಅಲ್ಲಿ ಬದಲಾವಣೆ ಸಾಧ್ಯವಿಲ್ಲ. ಇಂದು ಎಲ್ಲರಿಗೂ ಮನುಷ್ಯತ್ವದ ಶಿಕ್ಷಣ ಅಗತ್ಯ. ಇದನ್ನೇ ಬುದ್ಧ, ಬಸವ, ಕನಕ ದಾಸ, ಗಾಂಧಿ, ಅಂಬೇಡ್ಕರ್, ಕುವೆಂಪು ಹೇಳಿದ್ದು. ಎಲ್ಲರೂ ಮಾನವಂತರಾಗಿ ಎಂದರು. ಆ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುವುದೇ ನಾವು ಸಮಾಜ ಸುಧಾರಕರಿಗೆ, ಸಂತರಿಗೆ, ಮೌಲ್ವಿಗಳಿಗೆ ಸಲ್ಲಿಸುವ ಗೌರವ. ಹಾಗಾಗಿ ಪ್ರತಿಯೊಬ್ಬರೂ ವಿದ್ಯೆ ಕಲಿಯುವುದು ಮನುಷ್ಯರಾಗಲು. ಗುಲಾಮಗಿರಿಯನ್ನು ಕಿತ್ತೊಗೆಯಲು. ಆದರೆ ಇಂದು ಗುಲಾಮಗಿರಿಯೇ ಮನೆ ಮಾಡಿದೆ. ಅದನ್ನು ಕಿತ್ತೊಗೆಯದೇ ನಮ್ಮ ಸಮಾಜ, ಮನುಷ್ಯತ್ವದ ಸಮಾಜ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದರು.

ಇಂಥ ಜಡ್ಡು ಹಿಡಿದ ಜಾತಿ ವ್ಯವಸ್ಥೆಯನ್ನು ಸರಿದಾರಿಗೆ ತರಲು ಕನಕದಾಸರು ಅಂದೇ ಸಮಾಜ ಬದಲಾವಣೆಗೆ ಪ್ರಯ ತ್ನಿಸಿ ದರು. ಬಸವವಣ್ಣರ ವಚನಗಳು ವಚನ ಗಳಾಗಿಯೇ ಉಳಿದಿವೆ. ಅದು ಆಚರಣೆಗೆ ಬರುತ್ತಿಲ್ಲ. ಸಮಾಜ ಬದಲಾವಣೆ ಆಗ ಬೇಕಾದರೆ ಸಾಮಾಜಿಕ ಮತ್ತು ಆರ್ಥಿಕ ಚಲನೆ ಸಿಗಬೇಕು. ಎಲ್ಲಿಯವರೆಗೆ ಅದು ಬರುವುದಿಲ್ಲವೋ ಅಲ್ಲಿಯವರೆಗೆ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂದರು.

ನಾನು ಸಲಾಂ ಹೊಡೆಯುವ ರಾಜ ಕಾರಣಿಯಲ್ಲ: ನಾನು ಯಾರಿಗೂ ಸಲಾಂ ಹೊಡೆದು ರಾಜಕಾರಣ ಮಾಡುವುದಿಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ. ಇನ್ನೊಬ್ಬರನ್ನು ಬೇರೆ ಜಾತಿ, ಧರ್ಮ ದವನ್ನು ಪ್ರೀತಿಸುವುದೇ ಧರ್ಮ. ಬೇರೆ ಯವರಿಗೆ ಕೆಡುಕು ಬಯಸಬಾರದು ಎಂಬುದೇ ನಿಜವಾದ ಧರ್ಮ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಆಶುಕವಿ ಹಾಗೂ ಜನಪದ ಗಾಯಕ ಸಿದ್ದಪ್ಪ ಸಾಬಣ್ಣ ಬಿದರಿ ಅವರಿಗೆ ಸೇವಾ ಸಂತ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರದೇಶ ಕುರುಬರ ಸಂಘದ ಪ್ರಭಾರ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಕೆಎಎಸ್ ಅಧಿಕಾರಿಗಳು ಇತರರನ್ನು ಸನ್ಮಾನಿಸಲಾಯಿತು. ಸಂಘದ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರ ಸ್ಕಾರ ನೀಡಲಾಯಿತು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಹೆಚ್. ಎಂ.ರೇವಣ್ಣ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಹಂಪಿ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ, ಸಂಸ್ಕøತಿ ಚಿಂತಕ ಪ್ರೊ.ಸಿ.ನಾಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬೀರೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮೈಸೂರು ವಿವಿ ಕನಕ ನೌಕರರ ಸಂಘದ ಅಧ್ಯಕ್ಷ ಬಸವರಾಜು ಸಿ.ಜೆಟ್ಟಿಹುಂಡಿ, ನಗರಪಾಲಿಕೆ ಸದಸ್ಯ ಜೆ.ಗೋಪಿ ಇನ್ನಿತರರು ಇದ್ದರು.

Translate »