ನಂಬಿಕೆ ಕಳೆದುಕೊಂಡ ಮಾನವ ಸಂಬಂಧ ಕೃತಿ ಬಿಡುಗಡೆ ಸಂದರ್ಭ ಪ್ರಾಧ್ಯಾಪಕಿ ಎನ್.ಕೆ.ಲೋಲಾಕ್ಷಿ ಅಭಿಮತ
ಮೈಸೂರು

ನಂಬಿಕೆ ಕಳೆದುಕೊಂಡ ಮಾನವ ಸಂಬಂಧ ಕೃತಿ ಬಿಡುಗಡೆ ಸಂದರ್ಭ ಪ್ರಾಧ್ಯಾಪಕಿ ಎನ್.ಕೆ.ಲೋಲಾಕ್ಷಿ ಅಭಿಮತ

January 18, 2021

ಮೈಸೂರು,ಜ.17(ಆರ್‍ಕೆಬಿ)-ಇಂದು ಮಾನವ ಸಂಬಂಧಗಳು ನಂಬಿಕೆ ಕಳೆದುಕೊಂಡಿವೆ. ಪರಸ್ಪರ ಅಪನಂಬಿಕೆ ಬರುತ್ತಿದೆ. ಮೊಬೈಲ್ ಹಾವಳಿಯಿಂದ ಇಂದಿನ ಯುವಜನರಿಗೆ ಸಂಬಂಧಗಳು ಬೇಡ ಎಂಬಂತಾಗಿವೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಅಭಿಪ್ರಾಯಪಟ್ಟರು.

ಮೈಸೂರು ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಭವನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸಂವಹನ ಪ್ರಕಾಶನ ಭಾನುವಾರ ಆಯೋಜಿಸಿದ್ದ ಲೇಖಕಿ ಶ್ರೀಲತಾ ಮನೋಹರ್ ಅವರ `ಪ್ರೀತಿಯೇ’ ಕವನ ಸಂಕಲನ ಮತ್ತು `ಮತ್ತೆ ಮಳೆ ಬಂದಾಗ’ ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ ಪ್ರೀತಿಯ ಕೊರತೆ ಇದೆ. ಇಂದು ಮನೆ ಬಾಗಿಲಿಗೆ ಒಬ್ಬ ಭಿಕ್ಷುಕ ಬಂದರೆ ಭಿಕ್ಷೆ ಕೊಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ಜನಸಾಮಾನ್ಯರ ಬದುಕನ್ನು ಯಾವುದು ಕಟ್ಟಿಕೊಡುತ್ತದೆಯೋ ಅದೇ ಸಾಹಿತ್ಯ. ಎಲ್ಲಿ ಮನುಷ್ಯತ್ವ, ನೋವು ಇರುತ್ತದೆಯೋ ಅಲ್ಲಿ ಕವಿತೆ ಹುಟ್ಟುತ್ತದೆ. ಸಮಾಜವನ್ನು ಒಟ್ಟುಗೂಡಿಸುವ ಕೆಲಸವನ್ನು ಕವಿತೆಗಳು ಮಾಡಬೇಕು. ಇದರ ನಡುವೆ ಲೇಖಕಿ ಶ್ರೀಲತಾ ಮನೋ ಹರ್ ಅವರ ಕೃತಿಗಳು ಮಾನವೀಯತೆ, ಮಾನವೀಯ ಮೌಲ್ಯ ಗಳನ್ನು ನೆಲೆಗೊಳಿಸುವ ಕಡೆಗೆ ಕೊಂಡೊಯ್ಯುವಂತಿದೆ ಎಂದರು.

ನಿಜವಾದ ಮಾನವ ಧರ್ಮ ಕಟ್ಟಲು ಯಾವುದು ಪ್ರೋತ್ಸಾಹ, ದಾನ ಮಾಡುತ್ತದೆಯೋ ಅದೇ ಧರ್ಮ. ವೈರಸ್ ಹಾವಳಿ ನಡುವೆಯೂ ಬೀದಿ ಬೀದಿಗಳಿಗೆ ಹೋಗಿ ಅನ್ನ, ಆಹಾರ, ಧಾನ್ಯ ನೀಡಿದರೋ ಅದೇ ನಿಜವಾದ ಧರ್ಮ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕುರಿತು ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಆರ್.ಚಂದ್ರೇಗೌಡ ಮತ್ತು ಯುವರಾಜ ಕಾಲೇಜು ಉಪನ್ಯಾಸಕಿ ಎಚ್.ನಿವೇದಿತಾ ಮಾತನಾಡಿದರು. ನಿವೃತ್ತ ಶಿಕ್ಷಕ ಸಾ.ವೆ.ರ. ಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಮನೋಹರ್, ಲೇಖಕಿ ಶ್ರೀಲತಾ ಮನೋಹರ್, ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ನಾಗರಾಜು, ಜಿಲ್ಲಾ ಸಂಚಾಲಕ ಹೆಚ್.ಎಂ.ವಿಜಯಕುಮಾರ್ ಹೊಡಾಘಟ್ಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »