ಭಕ್ತಸಾಗರದ ನಡುವೆ ಚಾಮುಂಡೇಶ್ವರಿ ಭವ್ಯ ರಥೋತ್ಸವ
ಮೈಸೂರು

ಭಕ್ತಸಾಗರದ ನಡುವೆ ಚಾಮುಂಡೇಶ್ವರಿ ಭವ್ಯ ರಥೋತ್ಸವ

October 10, 2022

ಮೈಸೂರು, ಅ.9(ಎಂಟಿವೈ)- ಚಾಮುಂಡಿಬೆಟ್ಟದಲ್ಲಿ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಭವ್ಯ ರಥೋತ್ಸವ ನಡೆಯಿತು. ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ನಡೆದ ಬಳಿಕ ಚಾಮುಂಡಿಬೆಟ್ಟದಲ್ಲಿ ಆಶ್ವಯುಜ ಶುಕ್ಲ ಪೂರ್ಣಿಮೆ ಉತ್ತರಾಭಾದ್ರ ನಕ್ಷತ್ರದ ದಿನ ಮಹಾರಥೋತ್ಸವ ನಡೆಸುವ ಪದ್ಧತಿಯಿದ್ದು, ಅದರಂತೆ ಭಾನುವಾರ ಬೆಳಗ್ಗೆ 7.50ರಿಂದ 8.10 ಗಂಟೆ ಒಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಮಹಾರಥೋತ್ಸವವನ್ನು ಅಪಾರ ಸಂಖ್ಯೆ ಭಕ್ತರ ಹರ್ಷೋದ್ಘಾರದ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ರಾಜವಂಶಸ್ಥರಿಂದ ಚಾಲನೆ:ಚಾಮುಂಡಿ ಬೆಟ್ಟದಲ್ಲಿ ನಡೆದ ರಥೋತ್ಸವಕ್ಕೆ ಇಂದು ಬೆಳಗ್ಗೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಅವರು ಪೂಜೆ ಸಲ್ಲಿಸಿ, ರಥ ಎಳೆಯುವ ಮೂಲಕ ಚಾಲನೆ ನೀಡಿದರು. ಇದಕ್ಕೂ ಮುನ್ನ ದೇವಾ ಲಯದಲ್ಲೇ ಪ್ರಧಾನ ಆಗಮಿಕ ಡಾ.ಎನ್. ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ನಡೆದ ವಿಶೇಷ ಪೂಜಾ ಕಾರ್ಯದಲ್ಲಿ ರಾಜ ವಂಶಸ್ಥರು ಭಾಗಿಯಾಗಿದ್ದರು. ನಂತರ ಮಂಗಳವಾದ್ಯ, ಛತ್ರಿ-ಚಾಮರ ಹಾಗೂ ವಿವಿಧ ಬಿರುದು ಬಾವಲಿಯೊಂದಿಗೆ ಉತ್ಸವ ಮೂರ್ತಿಯನ್ನು ದೇವಾಲಯದ ಹೊರಗೆ ತಂದು, ರಥದಲ್ಲಿ ಪ್ರತಿಷ್ಠಾಪಿಸ ಲಾಯಿತು. ಬಳಿಕ ಮಂಗಳವಾದ್ಯ, ವಿವಿಧ ಸಾಂಸ್ಕøತಿಕ ಕಲಾತಂಡ, ಪೊಲೀಸ್ ಬ್ಯಾಂಡ್ ವಾದನ ತಂಡದೊಂದಿಗೆ ದೇವಾಲಯದ ಸುತ್ತಲೂ ಒಂದು ಸುತ್ತು ದೊಡ್ಡ ರಥ ಎಳೆ ಯುವ ಮೂಲಕ ನಾಡದೇವಿಯ ಉತ್ಸವ ವನ್ನು ವೈಭವದಿಂದ ಆಚರಿಸಲಾಯಿತು.

ಸಿಡಿಮದ್ದು ಸಿಡಿತ: ಪ್ರತಿವರ್ಷದಂತೆ ರಥೋತ್ಸವದ ವೇಳೆ ನಗರ ಸಶಸ್ತ್ರ ಮೀಸಲು ಪಡೆಯ ಫಿರಂಗಿ ದಳದ ಸಿಬ್ಬಂದಿ ವಿಜ ಯದ ಸಂಕೇತವಾಗಿ ಸಿಡಿಮದ್ದು ಸಿಡಿಸಿ ದರು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿ ದ್ದಂತೆಯೇ ಫಿರಂಗಿ ದಳದ ಸಿಬ್ಬಂದಿ ಸಿಡಿಮದ್ದು ಸಿಡಿಸಿ, ನಾಡದೇವಿಗೆ ಗೌರವ ಸಮರ್ಪಿಸಿದರು.

ಜನಜಂಗುಳಿ: ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಚಾಮುಂಡಿಬೆಟ್ಟದ ದೇವಾಲಯದ ಆವರಣದಲ್ಲಿ ರಥೋತ್ಸವ ಸೀಮಿತಗೊಳಿಸಲಾಗಿತ್ತು. ಚಿಕ್ಕ ರಥದಲ್ಲಿ ದೇವಾಲಯದ ಪ್ರಾಂಗಣದಲ್ಲೇ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಗಿತ್ತು. ಭಕ್ತರಿಗೆ ಅವಕಾಶ ನೀಡದೇ ರಥೋತ್ಸವ ಪೂಜಾ ಕೈಂಕರ್ಯ ನಡೆಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ದಸರಾ ಮಹೋತ್ಸವ ನಡೆಸಿದ್ದರಿಂದ ಚಾಮುಂಡಿಬೆಟ್ಟದ ಮಹಾರಥೋತ್ಸವವನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿತ್ತು. ರಥೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಚಾಮುಂಡಿಬೆಟ್ಟದಲ್ಲಿ ಜನಜಾತ್ರೆ ನೆರೆದಿತ್ತು. ರಥೋತ್ಸವ ಸಾಗುವ ರಸ್ತೆಯಲ್ಲಿ, ದೇವಾಲಯದ ಮುಂದೆ ಸೇರಿದಂತೆ ಬೆಟ್ಟದಲ್ಲಿ ಅಪಾರ ಸಂಖ್ಯೆಯ ಭಕ್ತರು ನೆರೆದು ರಥೋತ್ಸವವನ್ನು ಕಣ್ತುಂಬಿಕೊಂಡರು.

ಹಣ್ಣು-ಜವನ ಸಮರ್ಪಣೆ: ರಥೋತ್ಸವದ ವೇಳೆ ಸಂಪ್ರದಾಯದಂತೆ ಭಕ್ತರು ಬಾಳೆಹಣ್ಣು, ಹೂವು, ಜವನವನ್ನು ರಥಕ್ಕೆ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ದೇವಾಲಯದ ಒಂದು ಸುತ್ತು ರಥ ಎಳೆಯಲು ಒಂದು ಗಂಟೆ ಬೇಕಾಯಿತು. ದಾರಿಯುದ್ಧಕ್ಕೂ ಭಕ್ತರು ರಥಕ್ಕೆ ದೂರದಿಂದಲೇ ಕೈ ಮುಗಿದು ಪ್ರಾರ್ಥಿಸುತ್ತಿದ್ದರು. ಭಕ್ತರ ಎಸೆಯುವ ಹೂವು-ಹಣ್ಣು-ಜವನದಿಂದ ದೇವಿ ವಿಗ್ರಹಕ್ಕೆ ಅಲಂಕಾರ ಮಾಡಲಾಗಿದ್ದ ಬಂಗಾರದ ಆಭರಣಗಳಿಗೆ ಧಕ್ಕೆಯಾಗದಂತೆ ಕಟ್ಟೆಚ್ಚರವಹಿಸುವ ನಿಟ್ಟಿನಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದ ಮಂಟಪದ ಸುತ್ತಲೂ ಬಲೆ ಮಾದರಿಯಲ್ಲಿ ಪರದೆ ಬಿಡಲಾಗಿತ್ತು. ಇದರಿಂದ ಭಕ್ತರಿಂದ ತೂರಲ್ಪಡುತ್ತಿದ್ದ ಹೂವು-ಹಣ್ಣು ನೇರವಾಗಿ ಉತ್ಸವ ಮೂರ್ತಿಗೆ ಬಡಿಯುವುದನ್ನು ತಡೆಗಟ್ಟಿದಂತಾಗಿತ್ತು.

ರಾರಾಜಿಸಿದ ಪುನೀತ್ ರಾಜ್‍ಕುಮಾರ್ ಬಾವುಟ: ಯುವ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ನಟ ಪುನೀತ್ ರಾಜ್‍ಕುಮಾರ್ ಸ್ಮರಣೆಯಾದಂತೆ ಚಾಮುಂಡಿ ಬೆಟ್ಟದಲ್ಲಿ ನಡೆದ ರಥೋತ್ಸವದಲ್ಲೂ ಪುನೀತ್ ರಾಜ್‍ಕುಮಾರ್ ಚಿತ್ರವುಳ್ಳ ಬಾವುಟ ರಾರಾ ಜಿಸಿತು. ರಥೋತ್ಸವ ಮುಂದೆ ಮಂಗಳವಾಧ್ಯ, ಪೊಲೀಸ್ ಬ್ಯಾಂಡ್ ವಾದನದ ತಂಡ ದೊಂದಿಗೆ ಸಾಗುತ್ತಿದ್ದ ಯುವಕರ ಗುಂಪೊಂದು ಪುನೀತ್ ರಾಜ್‍ಕುಮಾರ್ ಚಿತ್ರವಿದ್ದ ಕನ್ನಡದ ಧ್ವಜ ಬೀಸುತ್ತಾ ಸಾಗಿ ಗಮನ ಸೆಳೆದರು.

ಬಿಗಿ ಪೊಲೀಸ್ ಬಂದೋಬಸ್ತ್: ರಥೋ ತ್ಸವದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪ ಡಿಸಲಾಗಿತ್ತು. ರಥದ ಸುತ್ತಲೂ ಕಮಾಂಡೋ ಪಡೆ ಹಗ್ಗವನ್ನಿಡಿದು ರಕ್ಷಾ ಕವಚದಂತೆ ಕಟ್ಟೆ ಚ್ಚರ ವಹಿಸಿದರು. ಇದರಿಂದ ಚಕ್ರದ ಬಳಿ ಯಾರೂ ನುಸುಳದಂತೆ ಕ್ರಮ ಕೈಗೊಂಡಿ ದ್ದರಿಂದ ಸರಾಗವಾಗಿ ರಥೋತ್ಸವ ಜರುಗಿತು. ಅಲ್ಲದೆ ರಥ ಸಾಗುವ ಮಾರ್ಗದಲ್ಲಿ ಗುಂಪು ಗೂಡದಂತೆ ಕಟ್ಟೆಚ್ಚರವಹಿಸುವ ನಿಟ್ಟಿನಲ್ಲಿ ಮೌಂಟೆಡ್ ಪೊಲೀಸರನ್ನು ನಿಯೋಜಿಸ ಲಾಗಿತ್ತು. ಬಸ್ ನಿಲ್ದಾಣ, ಮಹಿಷಾಸುರನ ಪ್ರತಿಮೆ, ದಾಸೋಹ ಭವನ, ದೇವಾಲಯದ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.

ಅ.14ರವರೆಗೆ ಪೂಜೆ: ಚಾಮುಂಡಿಬೆಟ್ಟದಲ್ಲಿ ರಥೋತ್ಸವದ ಅಂಗವಾಗಿ ಅ.14ರವ ರೆಗೂ ವಿವಿಧ ಪೂಜಾ ಕಾರ್ಯ ಜರುಗಲಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ಚಾಮುಂಡೇಶ್ವರಿ ದೇವಾಲಯದ ವತಿಯಿಂದ ವಿವಿಧ ಪೂಜಾ ಕಾರ್ಯ ಆಯೋಜಿಸ ಲಾಗಿದೆ. ಇಂದು ಬೆಳಗ್ಗೆ ರಥೋತ್ಸವ ಜರುಗಿದ ಬಳಿಕ ಸಂಜೆ ಸಿಂಹ ವಾಹನೋತ್ಸವ, ಹಂಸವಾಹನೋತ್ಸವ, ಮಂಟಪೆÇೀತ್ಸವ ಜರುಗಿದವು. ಅ.10ರಂದು ಆಶ್ವಯುಜ ಶುಕ್ಲ ಕೃಷ್ಣ್ಣಪಾಡ್ಯ ರೇವತಿ ನಕ್ಷತ್ರ ಅಶ್ವರೋಹಣ ಜರುಗಲಿದೆ. ಅ.11ರಂದು ಅಶ್ವಿನಿ ನಕ್ಷತ್ರದಲ್ಲಿ ಬೆಳಗ್ಗೆ ವಸಂತ ಪೂಜೆ ಅವಭೃತ ತೀರ್ಥಸ್ನಾನ, ಮಂಟಪೆÇೀತ್ಸವ ಜರುಗಿದರೆ, ಅಂದು ಸಂಜೆ 7ಕ್ಕೆ ದೇವಿಕೆರೆಯಲ್ಲಿ ತೆಪೆÇ್ಪೀತ್ಸವ ಹಾಗೂ ಆಂದೋಳಿ ರೋಹಣ, ಧ್ವಜಾರೋಹಣ ಜರುಗಲಿದೆ. ಅ.12ರಂದು ಸಂಜೆ ಪಂಚೋಪಚಾರ ಪೂಜೆ, ಕೈಲಾಸ ವಾಹನೋತ್ಸವ, ಶಯನೋತ್ಸವ ನಡೆಯಲಿದೆ. ಅ.13ರಂದು ಕೃತಿಕಾ ನಕ್ಷತ್ರದಲ್ಲಿ ಮಹಾಭಿಷೇಕ, ಸಿಂಹವಾಹನ, ಮಂಟಪೆÇೀತ್ಸವ ನಡೆಯಲಿದೆ. ಅ.14ರಂದು ಕೃಷ್ಣ ಪಂಚಮಿ ರೋಹಿಣಿ ನಕ್ಷತ್ರದಲ್ಲಿ ಸಂಜೆ ಮುಡಿ ಉತ್ಸವ (ಜವಾಹಿರಿ ಉತ್ಸವ) ಮಂಟಪೆÇೀತ್ಸವ ಜರುಗಲಿದೆ. ರಥೋತ್ಸವದದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಚಾಮುಂಡಿಬೆಟ್ಟ ಗ್ರಾ.ಪಂ ಅಧ್ಯಕ್ಷ ಭರತ್ ಕೆ.ಕಾಳಯ್ಯ, ಎಡಿಸಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಡಿಸಿಪಿ ಗೀತಾ ಪ್ರಸನ್ನ, ಚಾಮುಂಡಿಬೆಟ್ಟದ ದೇವಾಲಯಗಳ ಆಡಳಿತಾಧಿಕಾರಿ ಗೋವಿಂದ ರಾಜ್, ಮುಜರಾಯಿ ತಹಶೀಲ್ದಾರ್ ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »