ಮೈಸೂರು, ಫೆ.14(ಎಸ್‍ಬಿಡಿ)- ದಸರಾ ಮಹೋತ್ಸವದ ವೇಳೆ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ರಥೋತ್ಸವ ದಲ್ಲಿ ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸುರಕ್ಷಿತವಾಗಿ ರಥದ ಮೇಲೆ ಪ್ರತಿಷ್ಠಾಪಿಸಲು ನೂತನ ಲಿಫ್ಟ್(ಕ್ರೇನ್) ಸಿದ್ಧಗೊಂಡಿದ್ದು, ಕೆಲ ದಿನಗಳಲ್ಲೇ ರೈಲ್ವೆ ಇಲಾಖೆಯಿಂದ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿಗೆ ಹಸ್ತಾಂತರವಾಗಲಿದೆ.
ಸುಮಾರು 35 ರಿಂದ 40 ಅಡಿ ಎತ್ತರ ವಿರುವ ರಥದ ಮಧ್ಯ ಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲು ಪೀಠದ ವ್ಯವಸ್ಥೆ ಮಾಡಲಾಗಿದೆ. ಆಭರಣ ಗಳಿಂದ ಅಲಂಕೃತಗೊಂಡ ಉತ್ಸವ ಮೂರ್ತಿಯನ್ನು ಸುಮಾರು 20 ಅಡಿ ಮೇಲೆತ್ತಿ ಸುರಕ್ಷಿತವಾಗಿ ಪ್ರತಿಷ್ಠಾಪಿಸಲು ನೂರಾರು ವರ್ಷದ ಹಿಂದಿನ ಮರದ ಲಿಫ್ಟ್ ಬಳಸಲಾಗುತ್ತಿತ್ತು. ಶಿಥಿಲಾವಸ್ಥೆ ಯಲ್ಲಿದ್ದ ಆ ಲಿಫ್ಟ್ ಅನ್ನು ಪ್ರತೀ ವರ್ಷ ದುರಸ್ಥಿ ಮಾಡಿಸಿ, ಬಳಸಲಾಗುತ್ತಿ ತ್ತಾದರೂ ಆತಂಕವಂತೂ ಇದ್ದೇ ಇತ್ತು. ಹಾಗಾಗಿ ದುರಸ್ಥಿ ಮಾಡಿಕೊಡುತ್ತಿದ್ದ ನೈರುತ್ಯ ರೈಲ್ವೆಯ ಸಿಡಬ್ಲ್ಯುಎಂ ಸೆಂಟ್ರಲ್ ವರ್ಕ್‍ಶಾಪ್‍ನ ಮೆಕ್ಯಾನಿಕಲ್ ಮಿಲ್ ರೈಟ್‍ಶಾಪ್‍ಗೇ ಹೊಸದಾಗಿ ಕಬ್ಬಿಣದ ಲಿಫ್ಟ್ ನಿರ್ಮಾಣ ಮಾಡಿಕೊಡುವಂತೆ ಕೋರಿ, ಇದಕ್ಕೆ ವೆಚ್ಚವಾಗುವ 5.20 ಲಕ್ಷ ರೂ. ನೀಡಲು ದೇವಾಲಯ ಆಡಳಿತ ಮಂಡಳಿ ಒಪ್ಪಿತ್ತು.
45 ದಿನದಲ್ಲಿ ಸಿದ್ಧ: ಈ ಸಂಬಂಧ ನೈಋತ್ಯ ರೈಲ್ವೆ ಪ್ರಕಟಣೆ ನೀಡಿದ್ದು, ಶತ ಮಾನದಷ್ಟು ಹಳೆಯದಾದ ಟೆಂಪಲ್ ಕ್ಯಾರೇಜ್ ಕಮ್ ಲಿಫ್ಟ್‍ನ ಮೂಲ ರೇಖಾ ಚಿತ್ರಗಳು ಲಭ್ಯವಿಲ್ಲದಿದ್ದರೂ ಇದನ್ನು ಸವಾಲಾಗಿ ಸ್ವೀಕರಿಸಿ, ನೈಋತ್ಯ ರೈಲ್ವೆಯ ಮೆಕ್ಯಾನಿಕಲ್ ಮಿಲ್‍ರೈಟ್ ಮೈಸೂರು ವಿಭಾಗೀಯ ಕೇಂದ್ರ ವರ್ಕ್‍ಶಾಪ್ ಮೂಲಕ ಪಾರಂಪರಿಕ ಶೈಲಿಯ ಹೊಸ ಲಿಫ್ಟ್ ಅನ್ನು 45 ದಿನಗಳಲ್ಲಿ ಸಿದ್ಧಗೊಳಿಸಲಾ ಗಿದೆ. ತೊಟ್ಟಿಲು ಎತ್ತಲು ಅನುವಾಗು ವಂತೆ ಲಾಕಿಂಗ್ ಹಾಗೂ ಆ್ಯಂಟಿಫಾಲ್ ವ್ಯವಸ್ಥೆ, ಹೊಸ ಏಣಿ, ಆ್ಯಂಟಿಸ್ಕಿಡ್ ಪ್ಲೇಟ್‍ಗಳು, ಹ್ಯಾಂಡ್ ರೈಲ್‍ನೊಂದಿಗೆ ಲಿಫ್ಟ್ ತಯಾರಿಸಲಾಗಿದೆ. ಮರದ ಲಿಫ್ಟ್ ಮಾದರಿಯಲ್ಲೇ ಕಬ್ಬಿಣದ ಹೊಸ ಲಿಫ್ಟ್ ನಿರ್ಮಿಸಲಾಗಿದೆ. ಇದು 5-6 ಟನ್ ತೂಕ ಹಾಗೂ 5.5 ಮೀಟರ್ ಎತ್ತರ ವಿದ್ದು, ಸುಮಾರು 300 ಕೆ.ಜಿ. ಭಾರ ಎತ್ತುವ ಸಾಮಥ್ರ್ಯ ಹೊಂದಿದೆ. ಚಾಮುಂಡೇಶ್ವರಿ ದೇವಾಲಯದ ಮುಖ್ಯ ಅರ್ಚಕರ ನೇತೃ ತ್ವದ ತಂಡ ಸುಗಮ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಲಾಗಿದೆ.