ಮಗನಿಗೆ ತಾಯಿ ಪ್ರೀತಿ ಸಿಗದಿದ್ದಾಗ ಆದಂತೆ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಸೋಲು ನೋವುಂಟು ಮಾಡಿದೆ
ಮೈಸೂರು

ಮಗನಿಗೆ ತಾಯಿ ಪ್ರೀತಿ ಸಿಗದಿದ್ದಾಗ ಆದಂತೆ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಸೋಲು ನೋವುಂಟು ಮಾಡಿದೆ

December 21, 2020

ಮೈಸೂರು, ಡಿ.20(ಎಂಟಿವೈ)- ರಾಜಕೀಯ ಪುನರ್‍ಜನ್ಮ ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದ ರಾಮಯ್ಯ ಅವರಿಗೆ ಆದ ಸೋಲು, ತಾಯಿ ಯಿಂದ ಮಗನಿಗೆ ಪ್ರೀತಿ ಸಿಗದೇ ಇದ್ದರೆ ಆಗುವ ನೋವಿನಂತೆ ಭಾಸವಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಭಾನು ವಾರ ಮಾತನಾಡಿದ ಅವರು, ಚಾಮುಂಡೇ ಶ್ವರಿ ಕ್ಷೇತ್ರದಲ್ಲಿ ಉಂಟಾದ ಸೋಲು ಆಘಾತವನ್ನುಂಟು ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚು ಪ್ರೀತಿಸಿದ್ದು ಸಿಗಲಿಲ್ಲವೆಂದರೆ ನೋವು ಆಗುವುದು ಸಹಜ. ತಾಯಿ ಮಗನನ್ನು ಪ್ರೀತಿಸದಿದ್ದರೆ ಆಗುವ ನೋವಿನ ಅನುಭವ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನಿಂದ ಸಿದ್ದರಾಮಯ್ಯ ಅವರಿಗೆ ಉಂಟಾಗಿದೆ. ಚಾಮುಂಡೇಶ್ವರಿ ತನ್ನ ಪ್ರೀತಿಯ ಕ್ಷೇತ್ರ. ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ. ನಿರಂತರವಾಗಿ ಗೆಲ್ಲಿಸಿರುವ ಕ್ಷೇತ್ರ. ಉಪಚುನಾವಣೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿಗಳು ರಾಜಕೀಯ ನಡೆಸಿದರೂ, ನನ್ನನ್ನೂ ಗೆಲ್ಲಿಸಿದ್ದೀರಿ. ಮುಖ್ಯಮಂತ್ರಿಯಾಗಿದ್ದ ಸಂದರ್ಭ ಈ ಕ್ಷೇತ್ರದಲ್ಲಿ ಗೆದ್ದು ಕ್ಷೇತ್ರದ ಋಣ ತೀರಿಸಿ ನಿವೃತ್ತಿಯಾಗಬೇಕೆಂದು ಕನಸು ಕಂಡಾಗ ಸೋಲಿಸಿ ದ್ದೀರಿ ಎಂಬ ನೋವು ಅವರನ್ನು ಕಾಡುತ್ತಿದೆ. ಅದಕ್ಕಾಗಿ ಕಾರ್ಯ ಕರ್ತರ ಸಭೆಯಲ್ಲಿ ನೋವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಈ ಮೊದಲು ವರುಣಾ ಮತ್ತು ಚಾಮುಂಡೇಶ್ವರಿ ಒಂದೇ ಕ್ಷೇತ್ರ ವಾಗಿತ್ತು. ತಾಲೂಕು ಬೋರ್ಡ್ ಮೆಂಬರ್‍ನಿಂದ ಹಿಡಿದು ಉಪ ಮುಖ್ಯಮಂತ್ರಿ ಆಗುವವರೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಇದ್ದರು. ವರುಣ ಕ್ಷೇತ್ರ ಉದಯವಾದ ನಂತರ ಅಲ್ಲಿ ಗೆದ್ದು, ವಿಪಕ್ಷ ನಾಯಕ ರಾಗಿ, ಮುಖ್ಯಮಂತ್ರಿಯಾದರು. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದು ಬಯಸಿದ್ದರು. ಆದರೆ ಜನ ಅವರನ್ನು ಕೈ ಹಿಡಿಯಲಿಲ್ಲ. ಆದ್ದರಿಂದ `ನೀವೇ ನನ್ನನ್ನು ಕೈ ಬಿಟ್ಟಿರಿ’ ಎಂದು ಕಾರ್ಯ ಕರ್ತರ ಬಳಿ ಅವರು ನೋವನ್ನು ಹೇಳಿಕೊಂಡಿದ್ದಾರೆ ಎಂದರು.

ಒಳ ಒಪ್ಪಂದ ನಡೆದಿಲ್ಲ: ಜೆಡಿಎಸ್-ಬಿಜೆಪಿ ಒಳಒಪ್ಪಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, 2018 ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ವೈರತ್ವ ಇರ ಲಿಲ್ಲ. ರಾಜ್ಯದ ನಾಯಕರ ಮೇಲೆ ಬಿಜೆಪಿ ಹೈಕಮಾಂಡ್‍ಗೆ ವಿಶೇಷ ಪ್ರೀತಿ ಇದೆ. ಆದರೆ ಅದು ನನ್ನ ಕ್ಷೇತ್ರದಲ್ಲಿ ಪರಿಣಾಮ ಬೀರಲ್ಲ ಎಂದು ಸ್ಪಷ್ಟಪಡಿಸಿದರು. 2013ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಂದು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಹೇಮಂತ್‍ಕುಮಾರ್‍ಗೌಡ 8 ಸಾವಿರ ಮತ ಪಡೆದಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಗೋಪಾಲ್‍ರಾವ್ 15 ಸಾವಿರ ಮತ ಪಡೆದಿದ್ದಾರೆ. ಇವೆರಡು ಅವಧಿಗೆ ಹೋಲಿಸಿದರೆ ಸಿದ್ದರಾಮಯ್ಯ ವಿರುದ್ಧ ನಾನು ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಡಬಲ್ ಓಟ್ ಪಡೆದುಕೊಂಡಿದೆ ಎಂದು ಪರೋಕ್ಷವಾಗಿ ಜೆಡಿಎಸ್-ಬಿಜೆಪಿ ಒಳ ಒಪ್ಪಂದವಾಗಿತ್ತು ಎಂಬುದನ್ನು ಅಲ್ಲಗಳೆದರು.

Translate »