ಲಾಲು ಪ್ರಸಾದ್ ಆರೋಗ್ಯ ಕ್ಷೀಣ
ಮೈಸೂರು

ಲಾಲು ಪ್ರಸಾದ್ ಆರೋಗ್ಯ ಕ್ಷೀಣ

December 21, 2020

ಪಾಟ್ನಾ,ಡಿ.20-ಆರ್‍ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಮತ್ತಷ್ಟು ಕ್ಷೀಣವಾಗಿದ್ದು, ಅವರ ಕಿಡ್ನಿಯ ಶೇ.25 ರಷ್ಟು ಭಾಗ ಮಾತ್ರ ಕಾರ್ಯ ನಿರ್ವ ಹಿಸುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸ್ವತಃ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ಮಾಹಿತಿ ನೀಡಿದ್ದು, ಬಿಹಾರದ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. `ಲಾಲು ಪ್ರಸಾದ್ ಯಾದವ್ ಅವರ ಕಿಡ್ನಿಗಳು ಶೇ.25ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅವರು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚುನಾವಣೆಯಲ್ಲಿ ಕಾರ್ಯನಿರತನಾಗಿದ್ದ ನಾನು ಕಳೆದ 4-5 ತಿಂಗಳಿನಿಂದ ಅವರನ್ನು ಭೇಟಿ ಮಾಡಿರಲಿಲ್ಲ. ಹೀಗಾಗಿ ಇಂದು ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಇನ್ನು ಪ್ರಸ್ತುತ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಸ್ಥಿರವಾಗಿದೆ. ತಂದೆ ಯವರ ಆರೋಗ್ಯದ ಕುರಿತು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ. ರಿಮ್ಸ್ ವೈದ್ಯರೊಂದಿಗೆ ಮಾತ್ರವಲ್ಲದೆ ದೆಹಲಿಯ ಕೆಲವು ಪ್ರಖ್ಯಾತ ವೈದ್ಯರು ಮತ್ತು ನಮ್ಮ ಕುಟುಂಬ ವೈದ್ಯರೊಂದಿಗೆ ಮಾತನಾಡುತ್ತಿದ್ದೇವೆ. ಮೂತ್ರಪಿಂಡಗಳ ಕಾರ್ಯನಿರ್ವಹಣೆ ಶೇ.25ಕ್ಕೆ ಕುಸಿದಿದೆ. ಇದು ಗಂಭೀರವಾದ ಪರಿಸ್ಥಿತಿ. ಹೀಗಾಗಿ ಲಾಲು ಅವರನ್ನು ಭೇಟಿ ಮಾಡಲು ವೈದ್ಯರೊಂದಿಗೆ ಮನವಿ ಮಾಡಿದ್ದೆವು ಎಂದು ತೇಜಸ್ವಿ ಹೇಳಿದ್ದಾರೆ. ಇನ್ನು ಬಿಹಾರ ಚುನಾವಣೆಯಲ್ಲಿ ಕೆಲವೇ ಸ್ಥಾನಗಳ ಅಂತರದಲ್ಲಿ ಮಹಾಘಟ್ ಬಂಧನ್ ಅಧಿಕಾರದಿಂದ ದೂರ ಉಳಿಯುವಂತಾಗಿತ್ತು. ಈ ಬೆಳವಣಿಗೆ ಬಳಿಕ ಇದೇ ಮೊದಲ ಬಾರಿಗೆ ತೇಜಸ್ವಿ ಯಾದವ್ ಅವರು ಲಾಲು ಪ್ರಸಾದ್ ಅವರನ್ನು ಭೇಟಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಲಾಲು ಪ್ರಸಾದ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಬ್ಬರು ಲಾಲು ಪ್ರಸಾದ್ ಅವರ ಕಿಡ್ನಿಗಳು ಶೇ.25ರಷ್ಟು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದರು. –

Translate »