ಬೆಂಗಳೂರು: ವಿಧಾನಸಭಾ ಚುನಾ ವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳ ಮಾಹಿತಿ ಆಧಾರದ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಚುನಾವಣಾ ಕಾರ್ಯತಂತ್ರವನ್ನೇ ಬದಲಿಸಿದ್ದಾರೆ.
ರಾಜ್ಯ ನಾಯಕರಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ ಎಂದು ಮನದಟ್ಟು ಮಾಡಿಕೊಂಡಿರುವ ಶಾ, ಉತ್ತರ ಭಾರತದ ತಮ್ಮ ಆಪ್ತ ಮುಖಂಡರಿಗೆ ಚುನಾ ವಣಾ ಹೊಣೆಗಾರಿಕೆಯನ್ನು ವಹಿಸಿದ್ದಾರೆ. ಚುನಾವಣಾ ಕಾರ್ಯತಂತ್ರ ರೂಪಿಸಲೆಂದೇ ನಗರಕ್ಕೆ ಧಾವಿಸಿರುವ ಅವರು ಇಂದು ಇಡೀ ದಿನ ವಿವಿಧ ವಲಯದ ಮುಖಂಡರ ಜೊತೆ ಹಾಗೂ ಪಕ್ಷದ ಪ್ರಮುಖರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು.
ನಂತರ ಈ ಹಿಂದೆ ಉತ್ತರ ಪ್ರದೇಶ, ಉತ್ತರಖಂಡ್,ತ್ರಿಪುರ ಸೇರಿದಂತೆ ದೇಶದ ನಾನಾ ಭಾಗದಲ್ಲಿ ನಡೆದ ಚುನಾವಣಾ ವೇಳೆ ಬಳಸಿದ ಪ್ರಯೋಗವನ್ನೇ ಕರ್ನಾಟಕದಲ್ಲೂ ಬಳಸಲು ಮುಂದಾಗಿದ್ದಾರೆ. ಇದೀಗ ರಾಜ್ಯಕ್ಕೂ ಆಗಮಿಸಿರುವ ಈ ತಂಡ ರಾಜಧಾನಿ ಬೆಂಗಳೂರು, ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಹೈದರಾಬಾದ್ ಹಾಗೂ ಮುಂಬೈ ಕರ್ನಾಟಕ ಸೇರಿದಂತೆ ಮತ್ತಿತರ ಕಡೆ ಅಲ್ಲಿನ ಸ್ಥಿತಿಗತಿ, ವಿರೋಧ ಪಕ್ಷಗಳ ದೌರ್ಬಲ್ಯದ ಮಾಹಿತಿ ಸಂಗ್ರಹಿಸಿ ಚುನಾವಣಾ ಪ್ರಚಾರ ಸೇರಿದಂತೆ ನಾನಾ ರೀತಿಯ ರಣತಂತ್ರವನ್ನು ರೂಪಿಸಲಿದ್ದಾರೆ. ಇವರು ನೀಡುವ ಸಲಹೆ, ಮಾರ್ಗದರ್ಶನದ ಮೇರೆಗೆ ಪ್ರಚಾರ ನಡೆಯಲಿದೆ. ಬಿಹಾರದ ಆರೋಗ್ಯ ಸಚಿವ ಮಂಗಲಪಾಂಡ್ಯ ಇವರು ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ದೆಹಲಿ ಬಿಜೆಪಿ ಶಾಸಕರಾಗಿರುವ ಸತೀಶ್ ಉಪಾಧ್ಯಾಯ ಅವರಿಗೆ ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಗುಜರಾತ್ನ ಸಂಸದರಾಗಿರುವ ಸಿ.ಆರ್.ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ನಂಬಿಕಸ್ಥ. ಇವರನ್ನು ಕರ್ನಾಟಕದಲ್ಲಿ ಮೈಸೂರು ವಿಭಾಗಕ್ಕೆ ಉಸ್ತುವಾರಿ ಯನ್ನಾಗಿ ನೇಮಿಸಲಾಗಿದೆ. ರಾಜಸ್ಥಾನದ ಸಂಸದರಾಗಿರುವ ಓಂಪ್ರಕಾಶ್ ಮಾಥುರ್ ಕೂಡ ಪಕ್ಷ ವಹಿಸಿರುವ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲೂ ಪಕ್ಷದ ಪರ ಕೆಲಸ ಮಾಡಿದ ಅನುಭವವಿದೆ. ಕರಾವಳಿ ಜಿಲ್ಲೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿರುವ ಮಹೇಂದ್ರ ಸಿಂಗ್ ಅವರಿಗೂ ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘಟನೆಯ ಚತುರನೆಂದೇ ಕರೆಯಲ್ಪಡುವ ಎಂಥದ್ದೇ ಕ್ಲಿಷ್ಟಕರ ಪರಿಸ್ಥಿತಿಯನ್ನು ತನ್ನ ಚಾಕಚಕ್ಯತೆಯಿಂದಲೇ ನಿಭಾಯಿಸುವ ರಾಮ್ ಮಾಧವ್ ಹೆಗಲಿಗೆ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ. ಇವರು ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ವಿಜಾಪುರ ಮತ್ತು ಕಲ್ಬುರ್ಗಿ ಜಿಲ್ಲೆಗಳ ಹೊಣೆಗಾರಿಕೆ ನೋಡಿಕೊಳ್ಳುವರು. ಉತ್ತರ ಪ್ರದೇಶದ ಪ್ರಮುಖ ಬಿಜೆಪಿ ನಾಯಕರಾಗಿರುವ ಸತ್ಯೇಂದ್ರ ದೇವಸಿಂಗ್ ಹೈದರಾಬಾದ್ ಕರ್ನಾಟಕದಲ್ಲಿ ರಾಮ್ಮಾಧವ್ ಜೊತೆ ಕೈ ಜೋಡಿಸಲಿದ್ದಾರೆ. ಭೂಪೇಂದ್ರ ಯಾದವ್ ಅವರನ್ನು ಮುಂಬೈ ಕರ್ನಾಟಕಕ್ಕೆ ನೇಮಿಸಲಾಗಿದೆ. ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಮಹಾರಾಷ್ಟ್ರದ ಬಿಜೆಪಿಯ ಪ್ರಮುಖ ನಾಯಕರಾಗಿರುವ ಚಂದ್ರಕಾಂತ್ ದಾದಾ ಪಾಟೀಲ್ ಮುಂಬೈ ಕರ್ನಾಟಕದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವರು. ಮುಂಬೈ ಮಹಾನಗರದ ಬಿಜೆಪಿ ಅಧ್ಯಕ್ಷರಾಗಿರುವ ಆಸೀಸ್ ಸೆಲ್ಲಾರ್ ಅವರನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಮಹಾರಾಷ್ಟ್ರದ ಶಾಸಕರಾಗಿರುವ ಗೋಪಾಲ ಶೆಟ್ಟಿ ಅವರಿಗೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಷಾ ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಅನಂತಕುಮಾರ್ ಹೆಗಡೆ ಹಾಗೂ ಆರ್. ಅಶೋಕ್ ಸೇರಿದಂತೆ ಅನೇಕ ಮುಖಂಡರ ಜೊತೆ ವಿಧಾನಸಭೆ ಚುನಾವಣೆ ಕುರಿತಂತೆ ಮಾತುಕತೆ ನಡೆಸಿದರು.