ಭಯೋತ್ಪಾದನೆಗೆ ಬೆಂಬಲ ಆರೋಪದಡಿ ಪಿಎಫ್‍ಐನ 45 ಮಂದಿ ಬಂಧನ
News

ಭಯೋತ್ಪಾದನೆಗೆ ಬೆಂಬಲ ಆರೋಪದಡಿ ಪಿಎಫ್‍ಐನ 45 ಮಂದಿ ಬಂಧನ

September 23, 2022

ಬೆಂಗಳೂರು, ಸೆ.22- ಭಯೋತ್ಪಾದನೆಗೆ ಬೆಂಬಲ ಆರೋಪದ ಮೇರೆಗೆ ದೇಶದಲ್ಲಿ ದಾಖಲಾಗಿದ್ದ 5 ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ), ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಹಾಗೂ ರಾಜ್ಯ ಪೊಲೀಸ್ ತಂಡಗಳು ಗುರುವಾರ ಕರ್ನಾಟಕವೂ ಸೇರಿದಂತೆ ದೇಶದ 15 ರಾಜ್ಯಗಳ 93 ಸ್ಥಳಗಳಲ್ಲಿ ಜಂಟಿ ದಾಳಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) 45 ಮಂದಿಯನ್ನು ಬಂಧಿಸಲಾಗಿದೆ.

ಕರ್ನಾಟಕದಲ್ಲಿ 7 ಮಂದಿಯನ್ನು ಬಂಧಿಸಿರುವ ಎನ್‍ಐಎ ಅಧಿಕಾರಿಗಳು ಅತೀ ಹೆಚ್ಚು ಅಂದರೆ ಕೇರಳದಲ್ಲಿ 2 ಪ್ರಕ ರಣಗಳಲ್ಲಿ ಒಟ್ಟು 19 ಮಂದಿ, ತಮಿಳುನಾಡಿನಲ್ಲಿ 2 ಪ್ರಕ ರಣಗಳಲ್ಲಿ ಒಟ್ಟು 11 ಮಂದಿ, ಆಂಧ್ರಪ್ರದೇಶದಲ್ಲಿ ನಾಲ್ವರು, ರಾಜಸ್ಥಾನದಲ್ಲಿ ಇಬ್ಬರು, ಉತ್ತರ ಪ್ರದೇಶ ಮತ್ತು ತೆಲಂ ಗಾಣದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ಎನ್‍ಐಎ ಅಧಿಕೃತ ಪ್ರಕಟಣೆ ತಿಳಿಸಿದೆ.

ಕರ್ನಾಟಕದಲ್ಲಿ ಪಿಎಫ್‍ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಶ್ ಅಹಮದ್, ಕಾರ್ಯದರ್ಶಿ ಮೊಹಮ್ಮದ್ ಶಕೀಬ್ ಅಲಿಯಾಸ್ ಶಕೀಫ್, ಮೈಸೂರು ಜಿಲ್ಲೆಯ ಮಾಜಿ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಉರ್ ರೆಹಮಾನ್, ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾದ ಅಪ್ಸರ್ ಪಾಷ, ಅಬ್ದುಲ್ ವಾಹೀದ್ ಸೇಠ್, ರಾಜ್ಯ ಕಾರ್ಯಕಾರಿ ಸದಸ್ಯರಾದ ಶಾಹೀದ್ ನಾಸೀರ್, ಯಾಸೀರ್ ಅರಾಫತ್ ಹಸನ್ ಬಂಧನಕ್ಕೆ ಒಳಗಾದವರು.

ಕೇರಳದಲ್ಲಿ ಓಎಂಎ ಸಲಾಂ ಅಲಿಯಾಸ್ ಓಎಂ ಅಬ್ದುಲ್ ಸಲಾಂ, ಕೆ.ಪಿ.ಜಷೀರ್, ವಿ.ಪಿ.ನಜಾರುದ್ದೀನ್ ಎಳಮರಮ್ ಅಲಿಯಾಸ್ ನಜಾರುದ್ದೀನ್ ಎಳಮರಮ್, ಮೊಹಮ್ಮದ್ ಬಷೀರ್, ಕೆ.ಪಿ.ಷಫೀರ್, ಈ ಅಬುಬಕರ್, ಪ್ರೊ. ಪಿ.ಕೋಯಾ ಅಲಿಯಾಸ್ ಖಲೀಂ ಕೋಯಾ, ಇ.ಎಂ. ಅಬ್ದುಲ್ ರೆಹಿಮಾನ್ ಅಲಿಯಾಸ್ ಇ.ಎಂ. ಹಾಗೂ ಮತ್ತೊಂದು ಪ್ರಕರಣದಲ್ಲಿ ನಿಜಾಮುದ್ದೀನ್ ಸನ್ ಆಫ್ ಮುಹಮ್ಮದ್, ಟಿ.ಎಸ್.ಸೈನುದ್ದೀನ್, ಯಹೀಯಾ ಕೋಯಾ ತಂಗಳ್, ಕೆ.ಮುಹಮ್ಮದ್ ಅಲಿ ಅಲಿಯಾಸ್ ಕುನ್ಹಾಪ್ಪೋ, ಸಿ.ಟಿ.ಸುಲೈ ಮಾನ್, ಪಿ.ಕೆ.ಬುಸ್ಮಾನ್ ಅಲಿಯಾಸ್ ಪಳ್ಳಿಕರಂಜಳಿಲ್, ಕುಂಜಿಪ್ಪು ಉಸ್ಮಾನ್ ಅಲಿಯಾಸ್ ಉಸ್ಮಾನ್ ಪೆರುಂಪಿಳವು, ಕಾರವಾನ ಆಶ್ರಫ್ ಮೌಲವಿ, ಸಾದಿಕ್ ಅಹಮ್ಮದ್, ಶಿಹಾಸ್ ಸನ್ ಆಫ್ ಹಸನ್, ಪಿ.ಅನ್ಸಾರಿ, ಎಂ.ಎಂ.ಮುಜೀಬ್ ಸನ್ ಆಫ್ ಮುಹಮ್ಮದ್ ಸೇರಿದಂತೆ ಒಟ್ಟು 19 ಮಂದಿ ಬಂಧಿತರು.

ತಮಿಳುನಾಡಿನಲ್ಲಿ ಒಂದು ಪ್ರಕರಣದಲ್ಲಿ ಎಂ.ಮೊಹಮ್ಮದ್ ಅಲಿ ಜಿನ್ಹಾ, ಮಹಮ್ಮದ್ ಯೂಸಫ್, ಎ.ಎಸ್.ಇಸ್ಮಾಯಿಲ್ ಅಲಿಯಾಸ್ ಅಪ್ಪಮ್ಮ ಇಸ್ಮಾಯಿಲ್, ಮತ್ತೊಂದು ಪ್ರಕರಣದಲ್ಲಿ ಸಯ್ಯದ್ ಇಸಾಕ್, ಅಡ್ವಕೇಟ್ ಖಾಲಿದ್ ಮಹಮ್ಮದ್, ಎ.ಎಂ ಇದ್ರೀಸ್ ಅಲಿಯಾಸ್, ಅಹಮ್ಮದ್ ಇದ್ರೀಸ್, ಮೊಹಮ್ಮದ್ ಅಬುತಾಹೀರ್, ಎಸ್.ಖಾಜಾ ಮೈದೀನ್, ಯಾಸರ್ ಅರಾಫತ್, ಬರ್ಕತ್ ಉಲ್ಲಾ, ಫಯಾಜ್ ಅಹಮ್ಮದ್ ಸೇರಿದಂತೆ ಒಟ್ಟು 11 ಮಂದಿ ಬಂಧಿತರು.
ಆಂಧ್ರಪ್ರದೇಶದಲ್ಲಿ ಅಬ್ದಲ್ ರಹೀಂ, ಅಬ್ದುಲ್ ವಾಹಿದ್ ಅಲಿ, ಶೇಖ್ ಜಹರುಲ್ಲಾ, ರಿಯಾಜ್ ಅಹಮ್ಮದ್, ರಾಜಸ್ಥಾನದಲ್ಲಿ ಮೊಹಮ್ಮದ್ ಆಸೀಫ್ ಅಲಿಯಾಸ್ ಆಸೀಫ್, ಸಾದಿಕ್ ಶರಾಫ್ ತಲಪ್ಪಡ, ಉತ್ತರಪ್ರದೇಶದಲ್ಲಿ ವಾಸೀಂ ಅಹಮ್ಮದ್ ಮತ್ತು ತೆಲಂಗಾಣದಲ್ಲಿ ಅಬ್ದುಲ್ ವಾರೀಸ್ ಅವರನ್ನು ಬಂಧಿಸಲಾಗಿದೆ.

ಭಯೋತ್ಪಾದನೆ ಹಾಗೂ ಭಯೋತ್ಪಾದಕ ಚಟುವಟಿಕೆಗಳು, ಸಶಸ್ತ್ರ ತರಬೇತಿಗಾಗಿ ತರಬೇತಿ ಕೇಂದ್ರಗಳ ಆಯೋಜನೆ, ನಿಷೇದಿತ ಸಂಘಟನೆಗಳಿಗೆ ಸೇರ್ಪಡೆಗೊಳ್ಳುವಂತೆ ಜನರಿಗೆ ಪ್ರಚೋದನೆ ಆರೋಪದ ಮೇರೆಗೆ ದಾಖಲಾಗಿರುವ 5 ಪ್ರಕರಣಗಳಲ್ಲಿ ಲಭ್ಯವಾದ ಸಾಕ್ಷ್ಯಾಧಾರಗಳನ್ನು ಆಧರಿಸಿ ಇಂದು ಭಾರತದ 15 ರಾಜ್ಯಗಳ 93 ಸ್ಥಳಗಳಲ್ಲಿ, ಪಿಎಫ್‍ಐ ನಾಯಕರು ಹಾಗೂ ಸದಸ್ಯರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಯಿತು ಎಂದು ಎನ್‍ಐಎ ಪ್ರಕಟಣೆ ತಿಳಿಸಿದೆ.

ತೆಲಂಗಾಣದ ನಿಜಾಮಾಬಾದ್ ಪೊಲೀಸ್ ಠಾಣೆಯಲ್ಲಿ 25 ಮಂದಿ ಪಿಎಫ್‍ಐ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರ ಸಾಕ್ಷ್ಯ ಪುರಾವೆ ಹಾಗೂ ಸುಳಿವು ಆಧರಿಸಿ ಪಿಎಫ್‍ಐ ಉನ್ನತ ನಾಯಕರು, ಸದಸ್ಯರ ಮನೆ ಹಾಗೂ ಕಚೇರಿಗಳ ಮೇಲೆ ಇಂದು ದಾಳಿ ನಡೆಸಲಾಗಿದೆ. ಮಾಹಿತಿಗಳನ್ವಯ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲ ವರ್ಷಗಳಿಂದ ಪಿಎಫ್‍ಐ ನಾಯಕರು ಹಾಗೂ ಸದಸ್ಯರ ವಿರುದ್ಧ ಭಾರೀ ಪ್ರಮಾಣದಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ಇನ್ನಿತರ ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವವರನ್ನು ಗುರಿಯಾಗಿಸಿ ಕೊಂಡು ದಾಳಿ, ಇಸ್ಲಾಮಿಕ್ ಸ್ಟೇಟ್ ಬೆಂಬಲಿಸಿ ವಿದ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಇವರ ಉದ್ದೇಶವಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಇಂದಿನ ದಾಳಿ ವೇಳೆ ಕೆಲ ಮಹತ್ವದ ದಾಖಲೆ ಪತ್ರಗಳು, ನಗದು, ಮಾರಕಾಸ್ತ್ರಗಳು, ಅಪಾರ ಪ್ರಮಾಣದ ಡಿಜಿಟಲ್ ಡಿವೈಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‍ಐಎ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪಿಎಫ್‍ಐಗೆ ಸಂಬಂಧಿಸಿದಂತೆ ಎನ್‍ಐಎ 19 ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಅದರಲ್ಲಿ 5 ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದಿನ ದಾಳಿ ನಡೆದಿದೆ.

ಇಂದು ಇಡಿ ಮತ್ತು ಆಯಾ ರಾಜ್ಯಗಳ ಪೊಲೀಸರ ಸಹಕಾರದೊಂದಿಗೆ ಎನ್‍ಐಎ ಜಂಟಿ ಕಾರ್ಯಾಚರಣೆಯನ್ನು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ, ರಾಜಾಸ್ಥಾನ್, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಣಿಪುರ ರಾಜ್ಯಗಳಲ್ಲಿ ನಡೆಸಿದೆ.

Translate »