ಮೈಸೂರು, ಸೆ. 22(ಆರ್‍ಕೆ)- ಈ ಸಾಲಿನ ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಗುರುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪುಷ್ಪಗುಚ್ಛ, ಫಲತಾಂಬೂಲದೊಂದಿಗೆ ಅಭಿನಂದಿಸಿ, ಆಹ್ವಾನಿಸಲಾಯಿತು.
ಬುಧವಾರ ಬೆಳಗ್ಗೆ ವಿಮಾನದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಪತಿ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಶಂಕರ ಜೊಲ್ಲೆ, ಮೈಸೂರು ಮೇಯರ್ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ದೆಹಲಿಗೆ ತೆರಳಿದ ಉಸ್ತುವಾರಿ ಸಚಿವರು, ಪೂರ್ವನಿಗದಿಯಂತೆ ಮಧ್ಯಾಹ್ನ 12.15 ಗಂಟೆ ವೇಳೆಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.
ಸೆಪ್ಟೆಂಬರ್ 26ರಿಂದ ಆರಂಭವಾಗುವ ವಿಶ್ವಪ್ರಸಿದ್ಧ ನಾಡ ಹಬ್ಬ ದಸರಾ ಮಹೋತ್ಸವ ಉದ್ಘಾಟಿಸುವಂತೆ ಸಚಿವ ಸೋಮ ಶೇಖರ್, ಸಂಸದ ಪ್ರತಾಪ್ ಸಿಂಹ ಮನವಿ ಮಾಡಿ, ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು, ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತದಿಂದ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ವಿವರಿಸಿದರು.
ಆಹ್ವಾನ ಸ್ವೀಕರಿಸಿದ ದ್ರೌಪದಿ ಮುರ್ಮು ಅವರು, ದಸರಾ ಉದ್ಘಾಟನೆಗೆ ಸಮ್ಮತಿಸಿ, ಅಧಿದೇವತೆ ತಾಯಿ ಚಾಮುಂ ಡೇಶ್ವರಿ ದೇವಿ ನಾಡಿನ ಜನತೆಗೆ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು ಎಂದು ನಿಯೋಗ ತಿಳಿಸಿದೆ. ರಾಷ್ಟ್ರ ಪತಿಗಳಿಂದ ಈ ಬಾರಿಯ ದಸರಾ ಉದ್ಘಾಟನೆ ನೆರವೇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆಪ್ಟೆಂಬರ್ 10ರಂದು ಘೋಷಿಸಿದ್ದರು.
ಸೆ.26ರಂದು ಬೆಳಗ್ಗೆ ದೆಹಲಿಯಿಂದ ನೇರವಾಗಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಲಿರುವ ರಾಷ್ಟ್ರಪತಿಗಳನ್ನು ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮೀಯವಾಗಿ ಬರಮಾಡಿಕೊಳ್ಳುವರು. ನಂತರ ಕಾರಿನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳಲಿರುವ ಮುರ್ಮು ಅಂದು ಬೆಳಗ್ಗೆ 9.45 ರಿಂದ 10.05 ಗಂಟೆಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಬಳಿಕ ಅವರು ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಗೆ ತೆರಳಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿರುವ ಪೌರ ಸನ್ಮಾನ ಸ್ವೀಕರಿಸಿ, ಸಂಜೆ ನವದೆಹಲಿಗೆ ಹಿಂದಿರುಗುವರು ಎಂದು ಮೂಲಗಳು ತಿಳಿಸಿವೆ.