ವಿವಿಧ ವಸತಿ ಯೋಜನೆಯ ನೈಜ ಫಲಾನುಭವಿಗಳಿಗೆ ವಂಚನೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜಿಟಿಡಿ ಸೂಚನೆ
ಮೈಸೂರು

ವಿವಿಧ ವಸತಿ ಯೋಜನೆಯ ನೈಜ ಫಲಾನುಭವಿಗಳಿಗೆ ವಂಚನೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜಿಟಿಡಿ ಸೂಚನೆ

July 22, 2022

ಮೈಸೂರು,ಜು.21(ಎಂಟಿವೈ)-ನಕಲಿ ದಾಖಲೆ ಸೃಷ್ಟಿಸಿ, ಮೈಸೂರು ನಗರದಲ್ಲಿ ವಸತಿಹೀನರಿಗೆ ವಿವಿಧ ಯೋಜನೆಯಡಿ ಮಂಜೂರಾಗಿರುವ ಮನೆಗಳ ನೈಜ ಫಲಾನುಭವಿಗಳನ್ನು ಒಕ್ಕಲೆಬ್ಬಿಸುವ ಸಂಚು ನಡೆಯುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಮೈಸೂರಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಬಡವರಿಗಾಗಿ ಆಶ್ರಯ ಯೋಜನೆ ಸೇರಿ ದಂತೆ ವಿವಿಧ ವಸತಿ ಯೋಜನೆಗಳಡಿ ಮನೆ ಹಾಗೂ ನಿವೇಶನ ಮಂಜೂರು ಮಾಡಲಾಗಿದ್ದು, ಆ ಯೋಜನೆಗಳ ಕೆಲ ಫಲಾನುಭವಿಗಳ ಹೆಸರಲ್ಲಿ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಮನೆ, ನಿವೇಶನ ಕಬಳಿಸಿರುವುದು ಕಂಡು ಬಂದಿದೆ. ಈಗಾಗಲೇ 4-6 ಪ್ರಕರಣ ಪತ್ತೆಯಾಗಿದ್ದು, ನಿಜವಾದ ಫಲಾನು ಭವಿಗಳಿಗೆ ಆಗಿರುವ ತೊಂದರೆ ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ತನಿಖೆಯಾಗಬೇಕು. ಈ ದಂಧೆ ಯಲ್ಲಿ ಪಾಲಿಕೆಯ ಕೆಲ ಸಿಬ್ಬಂದಿಗಳೂ ಶಾಮೀಲಾಗಿರುವ ಶಂಕೆ ಇದೆ. ಸಿಬ್ಬಂದಿಯ ಸಹಕಾರವಿಲ್ಲದೇ, ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಹೀಗಾಗಿ ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸುವಂತೆ ಸೂಚಿಸಿದ್ದೇನೆ ಎಂದರು. ರಾಜರಾಜೇಶ್ವರಿ ಆಶ್ರಯ ಬಡಾವಣೆಯಲ್ಲಿ 1992ರಲ್ಲಿ ಬಸವೇಗೌಡ ಅವರ ಪತ್ನಿ ಮಂಜುಳಾ ಅವರಿಗೆ ಮನೆ ಮಂಜೂರಾಗಿತ್ತು. ಮಂಜುಳಾ ಸೇರಿದಂತೆ ಸಾಕಷ್ಟು ಫಲಾನುಭವಿಗಳು ಮೂಲಸೌಕರ್ಯದ ಕೊರತೆ ಹಿನ್ನೆಲೆಯಲ್ಲಿ ಇಂತಹ ಮನೆಗಳಲ್ಲಿ ವಾಸ ಮಾಡುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅದೇ ಹೆಸರಿನ ಬೇರೊಬ್ಬರಿಗೆ ಮನೆಯನ್ನು ಖಾತೆ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ನಗರದಲ್ಲಿ ವಿವಿಧ ಆಶ್ರಯ ಬಡಾವಣೆಗಳಲ್ಲಿ ಈ ರೀತಿ ಸಾಕಷ್ಟು ಪ್ರಕರಣಗಳು ನಡೆದಿರುವ ಸಾಧ್ಯತೆ ಇದೆ. ಹಾಗಾಗಿ ತನಿಖೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ನೈಜ ಫಲಾನುಭವಿಯ ಹೆಸರು, ನಕಲಿ ಫಲಾನುಭವಿಯ ಹೆಸರು ಒಂದೇ ರೀತಿ ಇರುವ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸುಲಭವಾಗಿ ನಕಲಿ ವ್ಯಕ್ತಿಗೆ ಖಾತೆ ಮಾಡಿಕೊಡಲಾಗುತ್ತಿದೆ ಎಂದರು. ರಾಜರಾಜೇಶ್ವರಿ ಆಶ್ರಯ ಬಡಾವಣೆಯಲ್ಲಿ 20×30 ನಿವೇಶನದ ಬೆಲೆ 25 ಲಕ್ಷ ರೂ.ವರೆಗೆ ಇದೆ. ಹೀಗಾಗಿ ಕೆಲವು ಫಲಾನುಭವಿಗಳಿಗೆ ಬೆದರಿಕೆಯೊಡ್ಡಿ ಅವರನ್ನು ಆಶ್ರಯ ಮನೆಯಿಂದ ಖಾಲಿ ಮಾಡಿಸಿ, ನಕಲಿ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿಕೊಡಲಾಗುತ್ತಿದೆ. ಈ ಕುರಿತು ತನಿಖೆ ನಡೆಸಿ ನೈಜ ಫಲಾನುಭವಿಗಳಿಗೆ ಮನೆ ದೊರೆಯುವಂತೆ ಮಾಡಬೇಕು ಎಂದರು.

Translate »