2446 ಮನೆ ನಿರ್ಮಾಣಕ್ಕೆ ನಾಳೆ ಶಂಕುಸ್ಥಾಪನೆ
ಮೈಸೂರು

2446 ಮನೆ ನಿರ್ಮಾಣಕ್ಕೆ ನಾಳೆ ಶಂಕುಸ್ಥಾಪನೆ

July 22, 2022

ಮೈಸೂರು,ಜು.21(ಎಂಟಿವೈ)- ಚಾಮುಂಡೇ ಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿಯಲ್ಲಿ ನೆಲೆಸಿರುವ 2446 ಮಂದಿ ವಸತಿಹೀನರಿಗೆ `ಪ್ರಧಾನಮಂತ್ರಿ ಆವಾಜ್ ಯೋಜನೆ-ಸರ್ವರಿಗೂ ಸೂರು’ ಯೋಜನೆ ಯಡಿ ಮನೆ ನಿರ್ಮಿಸಲು ಜು.23ರಂದು ಸಂಜೆ 4ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ವಸತಿ ಹೀನರಿಗೆ ಮನೆ ಮಂಜೂರು ಮಾಡುವ ನಿಟ್ಟಿನಲ್ಲಿ 2005ರಲ್ಲಿ ಅಂದು ಕ್ಷೇತ್ರದ ಶಾಸಕರೂ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಮೈಸೂರು ತಾಲೂಕಿನ ಮಂಡಕಳ್ಳಿ ಬಳಿ 40 ಎಕರೆ 32 1/2 ಗುಂಟೆ ಭೂಮಿಯನ್ನು ಆಶ್ರಯ ಯೋಜನೆ ಯಡಿಯಲ್ಲಿ ಖರೀದಿಸಿದ್ದರು. 2007 ರಲ್ಲಿ ಆಶ್ರಯ ಮನೆಗಾಗಿ ಖರೀದಿಸಲಾಗಿದ್ದ ಭೂಮಿ ಯಲ್ಲಿ 1410 ಮಂದಿಗೆ ನಿವೇಶನ ನೀಡಲು ಸಿದ್ದ ರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಕ್ಷೇತ್ರದ ಶಾಸಕನಾಗಿ ನಾನು ಆಯ್ಕೆಯಾದ ಬಳಿಕ 2012ರಲ್ಲಿ ಮಂಡಕಳ್ಳಿಯಲ್ಲಿ ಖರೀದಿಸಿದ್ದ ಜಾಗದಲ್ಲಿ ವಸತಿಹೀನರಿಗೆ ಜಿ+1, ಜಿ+2 ಮಾದರಿಯಲ್ಲಿ ಮನೆ ನಿರ್ಮಿಸಲು ಕ್ರಮ ಕೈಗೊಳ್ಳು ವಂತೆ ಪತ್ರ ಬರೆದಿದ್ದೆ. 2015ರಲ್ಲಿ ಮನೆ ನಿರ್ಮಾ ಣಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು ಎಂದು ತಿಳಿಸಿದರು.

ಎರಡು ವರ್ಷದಲ್ಲಿ ಫಲಾನುಭವಿಗಳ ಆಯ್ಕೆ: ವಸತಿ ಸೌಲಭ್ಯಕ್ಕಾಗಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈ ಹಿಂದೆ 2005ರಿಂದ 07ರ ಅವಧಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ದಾಗ ಸಲ್ಲಿಕೆಯಾಗಿದ್ದ 1500 ಅರ್ಜಿಯಲ್ಲಿ 750 ಮಂದಿ ಮಾತ್ರ ಮನೆ ಪಡೆಯಲು ಅರ್ಹರಾ ಗಿದ್ದರು. ಅರ್ಜಿ ಸಲ್ಲಿಸಿದ್ದ ಹೊರ ಜಿಲ್ಲೆ, ವಿವಿಧ ಗ್ರಾ.ಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಈ ಯೋಜನೆ ಅನ್ವಯವಾಗದ ಕಾರಣ ಆ ಅರ್ಜಿಗಳನ್ನೆಲ್ಲಾ ತಿರಸ್ಕರಿಸಲಾಯಿತು. 2446 ಮಂದಿ ಅರ್ಹರನ್ನು ಆಯ್ಕೆ ಮಾಡಲು 2 ವರ್ಷ ಪರಿಶೀಲಿಸಲಾಗಿದೆ. ಈ ಫಲಾನುಭವಿಗಳಲ್ಲಿ ಪೌರಕಾರ್ಮಿಕರು, ಮಂಗಳಮುಖಿಯರು ಹಾಗೂ ಜನತಾನಗರದಲ್ಲಿ ವಾಸಿಸುತ್ತಿರುವ ಮೇದರ ಜನಾಂಗದ 42 ಕುಟುಂಬಗಳಿಗೂ ಮನೆ ಮಂಜೂರು ಮಾಡಲಾ ಗಿದೆ ಎಂದು ವಿವರಿಸಿದರು.

ಜು.23 ರಂದು ಶಂಕುಸ್ಥಾಪನೆ: ಮಂಡಕಳ್ಳಿ ವಿಮಾನ ನಿಲ್ದಾಣದ ಹಿಂಭಾಗ ದಡದಹಳ್ಳಿ ರಸ್ತೆಯಲ್ಲಿ ಖರೀದಿಸಲಾಗಿರುವ ಭೂಮಿಯಲ್ಲಿ ಜು.23ರಂದು ಸಂಜೆ 4 ಗಂಟೆಗೆ 2446 ಮನೆಗಳ ನಿರ್ಮಾಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ ನೆರವೇರಿ ಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಸದರಾದ ಸುಮಲತಾ ಅಂಬರೀಷ್, ವಿ.ಶ್ರೀನಿವಾಸ ಪ್ರಸಾದ್, ಮೇಯರ್ ಸುನಂದಾ ಪಾಲನೇತ್ರ, ಶಾಸಕರು, ವಿಧಾನಪರಿಷತ್ ಸದಸ್ಯರು, ಪಾಲಿಕೆ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಗುಣಮಟ್ಟ ಕಾಯ್ದುಕೊಂಡು ಮನೆ ನಿರ್ಮಾಣ ಕಾಮಗಾರಿಯನ್ನು ಒಂದೂವರೆ ವರ್ಷದೊಳಗೆ ಪೂರ್ಣಗೊಳಿಸಿ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಅಲ್ಲದೇ, ನೂತನವಾಗಿ ಕಟ್ಟಲಾದ ಮನೆಗಳಿಗೆ ಮೂಲಭೂತ ಸೌಲಭ್ಯವನ್ನೂ ಕಲ್ಪಿಸುವುದರಿಂದ ಫಲಾನುಭವಿಗಳು ಹೊಸ ಮನೆಯಲ್ಲಿ ಜೀವನ ಸಾಗಿಸಲು ಸಹಕಾರಿಯಾಗಲಿದೆ. ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಫಲಾನುಭವಿಗಳು ಸರ್ಕಾರ ನಿಗದಿಪಡಿಸಿದ ಹಣವನ್ನು ಹೊರತುಪಡಿಸಿ ಹೆಚ್ಚುವರಿ ಮೊತ್ತವನ್ನು ಫಲಾನುಭವಿಗಳು ಯಾರಿಗೂ ನೀಡಬಾರದು. ಕೆಲವರು ಮನೆ ಕೊಡಿಸುವ ಭರವಸೆ ನೀಡಿ ಜನರಿಂದ ಹಣ ವಸೂಲಾತಿ ಮಾಡುತ್ತಿದ್ದು, ಯಾರು ಸಹ ಆಮಿಷಗಳಿಗೆ ಒಳಗಾಗಿ ಹಣ ನೀಡಬೇಡಿ ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮೇಯರ್ ಸುನಂದಾ ಪಾಲನೇತ್ರ, ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಪಾಲಿಕೆ ಸದಸ್ಯರು ಇದ್ದರು.

Translate »