ಮಂತ್ರಿ ಸ್ಥಾನ ವಂಚಿತ ಅತೃಪ್ತ ಕಾಂಗ್ರೆಸ್ ಶಾಸಕರ ಬಂಡಾಯ ತಾರಕಕ್ಕೆ: ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಕ್ಕೆ ಭಾರೀ ಕಂಟಕ
ಮೈಸೂರು

ಮಂತ್ರಿ ಸ್ಥಾನ ವಂಚಿತ ಅತೃಪ್ತ ಕಾಂಗ್ರೆಸ್ ಶಾಸಕರ ಬಂಡಾಯ ತಾರಕಕ್ಕೆ: ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಕ್ಕೆ ಭಾರೀ ಕಂಟಕ

June 9, 2018

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಕಾಂಗ್ರೆಸ್ ಶಾಸಕರ ಬಂಡಾಯ ತಾರಕಕ್ಕೇರಿದ್ದು, ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಭಾರೀ ಕಂಟಕ ಎದುರಾದಂತಿದೆ. ವೀರಶೈವ ಹಾಗೂ ಉತ್ತರ ಕರ್ನಾಟಕ ಭಾಗದ ಅತೃಪ್ತ ಸುಮಾರು 15-20 ಶಾಸಕರ ನಾಯಕತ್ವ ವಹಿಸಿಕೊಂಡಿರುವ ಎಂ.ಬಿ. ಪಾಟೀಲ್, ಪಕ್ಷದ ವರಿಷ್ಠರ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವುದರಿಂದ ಮೈತ್ರಿ ಸರ್ಕಾರದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ, ರಂಗ ಪ್ರವೇಶ ಮಾಡಿ ಅತೃಪ್ತರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿ ದರಲ್ಲದೆ, ಭಿನ್ನರು ಹಾಗೂ ವರಿಷ್ಠರ ಮಧ್ಯೆ ಸಂಪರ್ಕವಾಗಿ ಕಾರ್ಯನಿರ್ವಹಿಸುವ ಭರವಸೆ ಇತ್ತಿದ್ದಾರೆ. ತಮ್ಮ ಪಕ್ಷದ ಅತೃಪ್ತರನ್ನು ಸಮಾಧಾನಪಡಿಸಲು ಉಪಮುಖ್ಯ ಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಹಾಗೂ ಆರ್.ವಿ. ದೇಶಪಾಂಡೆ ಇಂದು ಪಾಟೀಲ್ ನಿವಾಸಕ್ಕೆ ತೆರಳಿ ನಡೆಸಿದ ಪ್ರಯತ್ನ ಯಶಸ್ಸು ನೀಡಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಮುಖ್ಯ ಮಂತ್ರಿ ಅವರನ್ನೇ ಪಾಟೀಲ್ ನಿವಾಸಕ್ಕೆ ಕಳುಹಿಸಿ ಸಂಧಾನ ನಡೆಸಿದ್ದಲ್ಲದೆ, ರಾಜ್ಯದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜೊತೆ ದೂರವಾಣ ಮೂಲಕ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ, ತಮ್ಮನ್ನು ವಿಧಾನಸಭೆಗೆ ಆಯ್ಕೆ ಮಾಡಿದ ಬಾದಾಮಿ ಕ್ಷೇತ್ರದ ಮತದಾರ ರಿಗೆ ಕೃತಜ್ಞತೆ ಸಲ್ಲಿಸಲು ಐದು ದಿನಗಳ ಪ್ರವಾಸದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಬಾದಾಮಿಗೆ ತೆರಳುತ್ತಿದ್ದಂತೆ, ಬಂಡಾಯ ತಾರಕಕ್ಕೇರಿದ್ದು, ಅವರ ಆಡಳಿತಾವಧಿಯಲ್ಲಿ ಅವರೊಂದಿಗೆ ಗುರುತಿಸಿಕೊಂಡಿದ್ದ ಶಾಸಕರು ಈಗ ಒಂದಾಗಿದ್ದಾರೆ. ಅತೃಪ್ತರ ಗುಂಪು ಬೆಳೆಯುತ್ತಿದ್ದಂತೆ ಎಂ.ಬಿ. ಪಾಟೀಲ್, ನಾನು ಏಕಾಂಗಿ ಯಲ್ಲ, ನನ್ನದೇ ಒಂದು ಪಡೆ ಇದೆ ಎಂಬ ಸಂದೇಶವನ್ನು ವರಿಷ್ಠರಿಗೆ ಮುಟ್ಟಿಸಿರುವುದಲ್ಲದೆ, ನನಗೆ ಸಚಿವ ಸ್ಥಾನ ಬೇಕಾಗಿಲ್ಲ, ನೀಡಿದರೆ ಉಪಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಭಿನ್ನರನ್ನು ಸಮಾಧಾನ ಪಡಿಸಲು ಸದಾಶಿವನಗರದ ಪಾಟೀಲ್ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಅವರು, ಸುಮಾರು ಒಂದು ಗಂಟೆ ಕಾಲ ಚರ್ಚೆ ಮಾಡಿದ್ದಾರೆ. ಚರ್ಚೆಯ ಆಂತರಿಕ ಮಾಹಿತಿ ಲಭ್ಯವಿಲ್ಲ. ಆದರೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದು ಅವರ ಪಕ್ಷದ ಆಂತರಿಕ ವಿಷಯ, ಅದಕ್ಕೂ ನನಗೂ ಸಂಬಂಧವಿಲ್ಲ, ಮೈತ್ರಿ ಸರ್ಕಾರದ ಮುಖ್ಯಸ್ಥನಾಗಿ ಇಲ್ಲಿಗೆ ಬಂದು ಚರ್ಚೆ ಮಾಡಿದ್ದೇನೆ. ಹದಿನೈದರಿಂದ ಇಪ್ಪತ್ತು ಶಾಸಕರು ಒಂದೆಡೆ ಸೇರಿದ್ದಾರೆ, ಅವರ ಅಭಿಪ್ರಾಯ ನನ್ನ ಬಳಿ ವ್ಯಕ್ತಪಡಿಸಿದ್ದಾರೆ. ನಾನು ಇದನ್ನು ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತರುವುದಾಗಿ ತಿಳಿಸಿದರು. ನಂತರ ಮಾತನಾಡಿದ ಭಿನ್ನರ ನಾಯಕ ಎಂ.ಬಿ.ಪಾಟೀಲ್, ‘ಈಗ ನಾನು ಏಕಾಂಗಿಯಲ್ಲ’ ಸ್ವತಂತ್ರವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹಿರಿಯರು, ಕಿರಿಯರು ಎನ್ನದೇ 15ರಿಂದ 20 ಶಾಸಕರು ಒಟ್ಟಾಗಿದ್ದೇವೆ ಎಂದರು.

ದೆಹಲಿಗೆ ಬುಲಾವ್: ವರಿಷ್ಠರು ಎಂ.ಬಿ. ಪಾಟೀಲ್‍ಗೆ ಬುಲಾವ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರು ಇಂದು ರಾತ್ರಿ ದೆಹಲಿ ತಲುಪಿದ್ದು, ನಾಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

Translate »