ಉಪ ಮುಖ್ಯಮಂತ್ರಿ ಸ್ಥಾನವೇ ಬೇಕು: ಎಂ.ಬಿ. ಪಾಟೀಲ್ ಪಟ್ಟು
ಮೈಸೂರು

ಉಪ ಮುಖ್ಯಮಂತ್ರಿ ಸ್ಥಾನವೇ ಬೇಕು: ಎಂ.ಬಿ. ಪಾಟೀಲ್ ಪಟ್ಟು

June 9, 2018

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಬೇಡ, ನನಗೆ ಮಂತ್ರಿ ಸ್ಥಾನವೂ ಬೇಕಿಲ್ಲ, ಉಪಮುಖ್ಯಮಂತ್ರಿ ಸ್ಥಾನವೇ ಬೇಕು ಎಂದು ಬಂಡಾಯ ನಾಯಕ ಎಂ.ಬಿ.ಪಾಟೀಲ್ ಇಂದಿಲ್ಲಿ ಖಡಕ್ಕಾಗಿ ಪಕ್ಷದ ನಾಯಕ ರಿಗೆ ತಿಳಿಸಿದ್ದಾರೆ. ಮಂತ್ರಿಮಂಡಲ ರಚನೆ ಆಗುತ್ತಿದ್ದಂತೆ ಪಾಟೀಲ್ ನೇತೃತ್ವದಲ್ಲಿ ಎದ್ದಿರುವ ಬಂಡಾಯ ಶಮನಗೊಳಿ ಸಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಹಿರಿಯ ಸಚಿವರಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ದುಡಿದು, ತ್ಯಾಗ ಮಾಡಿದವರು, ಈಗ ಬರಿಗೈಲಿ ನಿಂತಿದ್ದೇವೆ ನಮ್ಮ ಬೇಡಿಕೆಗಳಿಗೆ ವರಿಷ್ಠರು ಸ್ಪಂದಿಸದಿದ್ದರೆ, ನಮ್ಮ ದಾರಿ ನಮಗೆ. ನನಗೆ ನಿಮ್ಮ ಯಾವುದೇ ಸಲಹೆ ಬೇಕಿಲ್ಲ. ವರಿಷ್ಠರು ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಸಂಧಾನಕ್ಕೆ ಬಂದವರಿಗೆ ಖಡಕ್ಕಾಗಿ ಹೇಳಿ ದ್ದಾರೆ. ಚುನಾವಣೆಗೆ ಫಂಡ್ ಬೇಕಾದಾಗ ಎಂ.ಬಿ. ಪಾಟೀಲ್ ಬೇಕು, ಈಗ ನನ್ನ ನೆನಪಿಲ್ಲವೇ? ನಿಮ್ಮ ಸಲಹೆಗಳ ಅಗತ್ಯ ನನಗಿಲ್ಲ, ನಿಮ್ಮಂತೆ ಅಧಿಕಾರ ಬೇಕಷ್ಟೇ, ನಿಮ್ಮ ಯಾವ ಮಾತನ್ನೂ ಕೇಳುವ ವ್ಯವಧಾನ ನನಗಿಲ್ಲ ಎಂದು ಹೇಳಿ ದ್ದಾರೆ. ನಾನು ಮಾಡಿದ ತಪ್ಪಾದರೂ ಏನು? ನನ್ನನ್ನು ಸಂಪುಟ ದಿಂದ ಹೊರಗಿಟ್ಟ ಕಾರಣವೇನು? ಕಾಂಗ್ರೆಸ್ ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದೆ, ನಾನು ನನ್ನ ಮತದಾರರಿಗೆ, ಕ್ಷೇತ್ರದ ಜನರಿಗೆ ಏನು ಹೇಳಲಿ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ.

ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡಿ, ಮೂರನೇ ಹಂತದಲ್ಲಿ ನಿಮಗೆ ಸಚಿವರನ್ನಾಗಿ ಮಾಡುತ್ತೇವೆ ಎಂದು ಡಾ. ಪರಮೇಶ್ವರ್ ಹೇಳಿದ್ದಾರೆ ಎನ್ನಲಾಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪಾಟೀಲ್, ಇದ್ಯಾವುದೂ ಬೇಕಾಗಿಲ್ಲ, ನಾನು ಶಾಸಕನಾಗಿಯೇ ಮುಂದುವರೆಯುತ್ತೇನೆ ಎಂದರು. ಕಳೆದ ಬಾರಿ ಐದು ವರ್ಷ ಮಂತ್ರಿ ಪದವಿಯಲ್ಲಿ ದ್ದಿರಿ. ನಾವೇ ನಿಮಗೆ ಬೆಂಬಲ ನೀಡಿದ್ದೆವು. ಈ ಬಾರಿ ಸ್ವಲ್ಪ ಹೊಂದಾಣ ಕೆ ಮಾಡಿಕೊಳ್ಳಬೇಕು ಎಂದು ಪರಮೇಶ್ವರ್ ಮಾಡಿದ ಮನವಿಯನ್ನು ಎಂ.ಬಿ.ಪಾಟೀಲ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಸಂಧಾನಕ್ಕೆ ಬಂದಿದ್ದ ನಾಯಕರಿಗೆ ಪಾಟೀಲ್ ನಿವಾಸದ ಬಳಿ ಇದ್ದ ಅವರ ಬೆಂಬಲಿಗರು ಹರಿಹಾಯ್ದರು.

ನಮ್ಮ ನಾಯಕರು ಮಾಡಿದ ತಪ್ಪಾದರೂ ಏನು? ಅವರನ್ನು ಸಂಪುಟದಿಂದ ಕೈಬಿಟ್ಟ ಕಾರಣವೇನು? ಎಂದು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ನಾಯಕರಿಗೆ ಘೇರಾವ್ ಹಾಕಿ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದರು. ಪಾಟೀಲ್ ನಿವಾಸದಿಂದ ಡಾ. ಪರಮೇಶ್ವರ್ ಹೊರಬಂದಾಗ, ಬೆಂಬಲಿಗನೊಬ್ಬ ಅವರ ಕಾಲು ಹಿಡಿದು ಪಾಟೀಲ್‍ರನ್ನು ಸಚಿವರನ್ನಾಗಿ ಮಾಡಬೇಕೆಂದು ಮನವಿ ಮಾಡಿದ. ಅಲ್ಲದೆ, ಜಾರ್ಜ್, ಪರಮೇಶ್ವರ್, ದೇಶಪಾಂಡೆ ಯವರು ಕಾರು ಹತ್ತಲು ಆಗದಂತೆ ಎಲ್ಲರೂ ಮುತ್ತಿಗೆ ಹಾಕಿ ಒತ್ತಾಯಿಸಿದರು. ಕಾರಿನ ಮುಂದೆ ಮಲಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪಾಟೀಲ್ ಬೆಂಬಲಿಗರನ್ನು ಸಮಾಧಾನಪಡಿಸಿದರು. ಅನಾಗರಿಕರಂತೆ ವರ್ತಿಸುವುದು ಬೇಡ, ಅವರು ದೊಡ್ಡವರು, ನಮ್ಮ ಮನೆಗೆ ಬಂದಿದ್ದಾರೆ, ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಈ ರೀತಿ ಅಡ್ಡಿಪಡಿಸುವುದು ಬೇಡ ಎಂದು ತಾವೇ ಸ್ವತಃ ಪ್ರಯಾಸ ಪಟ್ಟು ಕಾರಿನ ತನಕ ಹೋಗಿ ಕಳುಹಿಸಿಕೊಟ್ಟರು. ಆದರೂ ಬೆಂಬಲಿಗರು ನಾಯಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದುದು ಕೇಳಿ ಬಂತು.

Translate »