ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆಗೆ ಮುಖ್ಯಮಂತ್ರಿ ಆದೇಶ
ಮೈಸೂರು

ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆಗೆ ಮುಖ್ಯಮಂತ್ರಿ ಆದೇಶ

August 4, 2019

ಬೆಂಗಳೂರು, ಆ. 3(ಕೆಎಂಶಿ)- ರಾಜ್ಯದ ಕಾವೇರಿ ಜಲಾನಯನ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ವಾಡಿಕೆ ಗಿಂತ ಕಡಿಮೆ ಪ್ರಮಾಣದ ಮಳೆಯಾಗಿರುವುದರಿಂದ ಇಂದಿನಿಂದಲೇ ಮೋಡ ಬಿತ್ತನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಮುಂಬೈ ಹಾಗೂ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗಿದೆ, ಅಲ್ಲದೆ ಅಲ್ಲಿನ ನದಿಗಳೂ ತುಂಬಿ ಹರಿಯುತ್ತಿವೆ. ಆದರೆ ಕಾವೇರಿ ಜಲಾನಯನ, ಮಲೆನಾಡು ಮತ್ತು ಒಳನಾಡು ಪ್ರದೇಶದಲ್ಲಿ ಮಳೆ ಇಲ್ಲದೆ ಜನ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಪ್ರದೇಶದಲ್ಲಿ ಬೆಳೆ ಉಳಿಸುವುದು ಮತ್ತು ರಾಸುಗಳಿಗೆ ಮೇವು ಬೆಳೆಸಲು ಹಾಗೂ ಭೂಗರ್ಭ ಜಲವೃದ್ಧಿ ಉದ್ದೇಶದಿಂದ ಮೋಡ ಬಿತ್ತನೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮೊದಲು ಮೈಸೂರು ಮತ್ತು ಹುಬ್ಬಳ್ಳಿ ಕೇಂದ್ರವಾಗಿಟ್ಟುಕೊಂಡು ಏಕಕಾಲಕ್ಕೆ ಮೋಡ ಬಿತ್ತನೆ ಮಾಡುವ ಉದ್ದೇಶ ಹೊಂದಲಾ ಗಿತ್ತು, ಆದರೆ ಮೈಸೂರು ಕೇಂದ್ರದಿಂದ ಮಾತ್ರ ಕಾರ್ಯ ಆರಂಭಗೊಳ್ಳಲಿದೆ ಎಂದರು.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿ ಮಾಹಿತಿ ಪಡೆದುಕೊಂಡಿದ್ದೇನೆ, ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ ಉಂಟಾಗಿದೆ. ಇದನ್ನು ನಿಭಾಯಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಬರ ಮತ್ತು ಅತಿವೃಷ್ಟಿ ಪರಿಹಾರಕ್ಕಾಗಿ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ತಮ್ಮದೆಹಲಿ ಭೇಟಿ ಸಂದರ್ಭದಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಈ ತಿಂಗಳ 6ರಂದು ರಾಜ್ಯದ ಸಂಸದರ ಸಭೆಯನ್ನು ದೆಹಲಿಯಲ್ಲಿ ಕರೆದಿದ್ದೇನೆ. ರಾಜ್ಯಕ್ಕೆ ಕೇಂದ್ರದಿಂದ ಮಂಜೂರಾಗಿರುವ ಯೋಜನೆಗಳ ಅನುಷ್ಠಾನ, ಬಾಕಿ ಯೋಜ ನೆಗಳ ತ್ವರಿತ ಅನುಷ್ಠಾನ ಹಾಗೂ ಕೇಂದ್ರ ದಿಂದ ರಾಜ್ಯಕ್ಕೆ ಆರ್ಥಿಕ ನೆರವು ನೀಡು ವಂತೆ ಮನವಿ ಮಾಡುವುದಾಗಿ ಹೇಳಿದರು.

ಪ್ರತಿ ಶಾಸಕನಿಂದ 50 ಸಾವಿರ ಸದಸ್ಯತ್ವ ನೋಂದಣಿ: ಇದಕ್ಕೂ ಮುನ್ನ ಪಕ್ಷದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬೊಬ್ಬ ಶಾಸಕರು 50 ಸಾವಿರ ಸದಸ್ಯರನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಪ್ರತಿ ಬೂತ್‍ನಲ್ಲೂ 100 ಮಂದಿಯನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕು, ಸಂಘಟನೆ ಬಲವಾದರೆ ಪಕ್ಷ ಸದೃಢವಾಗಿರುತ್ತದೆ ಎಂದು ಕಿವಿಮಾತು ಹೇಳಿದರು. ಈ ತಿಂಗಳಲ್ಲಿ ನಾಲ್ಕು ದಿನ ನಡೆಯಲಿರುವ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನಾನೂ ಸಾಧ್ಯವಾದಷ್ಟು ಒತ್ತು ನೀಡುತ್ತೇನೆ. ಈ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು. ಪಕ್ಷ ಸಂಘಟನೆ ಪ್ರಬಲವಾಗಿರುವುದರಿಂದ ಬಿಜೆಪಿ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಯಿತು, ಬಿಬಿಎಂಪಿಯಲ್ಲೂ ಅಧಿಕಾರ ಹಿಡಿಯಲು ಮುಖಂಡರು ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.

 

Translate »