ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ನನ್ನ ಕುಟುಂಬದ ಯಾರೂ ಸ್ಪರ್ಧಿಸಲ್ಲ
ಮೈಸೂರು

ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ನನ್ನ ಕುಟುಂಬದ ಯಾರೂ ಸ್ಪರ್ಧಿಸಲ್ಲ

August 4, 2019

ಕೆ.ಆರ್.ಪೇಟೆ, ಆ. 3(ಶ್ರೀನಿವಾಸ್,ನಾಗಯ್ಯ)- ಕೆ.ಆರ್. ಪೇಟೆ ವಿಧಾನಸಭೆ ಉಪ ಚುನಾವಣೆ ಯಲ್ಲಿ ನಮ್ಮ ಕುಟುಂಬದವರು ಯಾರೂ ಸ್ಪರ್ಧಿ ಸುವುದಿಲ್ಲ ಎಂದು ಘೋಷಿಸಿದ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಅಭ್ಯರ್ಥಿ ವಿಚಾರದಲ್ಲಿ ಸ್ಥಳೀಯವಾಗಿ ಕಾರ್ಯಕರ್ತರು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದರು.

ಇಲ್ಲಿನ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ಶನಿ ವಾರ ಸಂಜೆ ನಡೆದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆಗಾಗಿ ಇಂದಿನ ಸಭೆ ಕರೆದಿಲ್ಲ. ಕಾರ್ಯಕರ್ತರ ಮನದಾಳವನ್ನು ತಿಳಿಯಲು ಸಭೆ ಕರೆದಿದ್ದೇನೆ. ಈ ಸಭೆಯಲ್ಲಿ ಏನಾ ದರೂ ಕೆಟ್ಟ ನಡವಳಿಕೆ ನಡೆಯಬಹುದು ಎಂದು ಮಾಧ್ಯಮಗಳು ಕಾಯುತ್ತಿವೆ. ಉಪ ಚುನಾವಣೆ ಯಲ್ಲಿ ದೇವೇಗೌಡರ ಕುಟುಂಬದಿಂದ ನಿಖಿಲ್, ಪ್ರಜ್ವಲ್ ಸ್ಪರ್ಧಿಸುತ್ತಾರೆ ಎಂದೆಲ್ಲಾ ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ, ಅವೆಲ್ಲವೂ ಸುಳ್ಳು. ಸ್ಥಳೀಯ ವಾಗಿ ನೀವು (ಕಾರ್ಯಕರ್ತರು) ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದರು. ಕಳೆದ ಎರಡು ಚುನಾವಣೆಗಳಲ್ಲಿ ನಾರಾಯಣಗೌಡರನ್ನು ಅಭ್ಯರ್ಥಿ ಮಾಡಿ ಹಳ್ಳಿ ಹಳ್ಳಿ ಸುತ್ತಿ
ಆತನನ್ನು ಗೆಲ್ಲಿಸಲಾಯಿತು. ಆದರೆ ಸಂಕಷ್ಟ ಕಾಲದಲ್ಲಿ ಆತ ಪಕ್ಷಕ್ಕೆ ದ್ರೋಹ ಮಾಡಿ ನನ್ನ ಸರ್ಕಾರ ಬೀಳಿಸುವವರ ಜೊತೆ ಕೈಜೋಡಿಸಿ ವಿಶ್ವಾಸ ದ್ರೋಹ ಎಸಗಿದ್ದಾನೆ ಎಂದು ಜರಿದರು. ನಾರಾಯಣಗೌಡ ಒಬ್ಬ ಕ್ರಿಮಿನಲ್. ಅಂತಹ ಕ್ರಿಮಿನಲ್ ಈ ಜಿಲ್ಲೆಯೊಳಗೆ ಬೇರೊಬ್ಬ ಸಿಗಲು ಸಾಧ್ಯವಿಲ್ಲ. ನಾನು ಆತನಿಗೆ ಟಿಕೆಟ್ ಕೊಡಲು ಒಪ್ಪಿರಲಿಲ್ಲ. ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಅವರಿಗೆ ಮತ್ತೆ ಟಿಕೆಟ್ ಕೊಡಬೇಕೆಂದು ತೀರ್ಮಾನಿಸಿದ್ದೆ. ಆದರೆ, ಅಂದು ನಾರಾಯಣಗೌಡ ನಮ್ಮ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರನ್ನು ಮರುಳು ಮಾಡಿದ. ನನ್ನ ಕುಟುಂಬ ಅವನ ಪರವಾಗಿ ನಿಂತಿತ್ತು. ಬೇರೆ ದಾರಿ ಇಲ್ಲದೆ ಕುಟುಂಬದ ನಿಲುವಿನಂತೆ ಅವನಿಗೆ ಸ್ಪರ್ಧಿಸಲು ಅವಕಾಶ ಕೊಟ್ಟೆ. ನನ್ನ ಒಡ ಹುಟ್ಟಿದ ತಂಗಿ ಮತ್ತು ಆಕೆಯ ಕುಟುಂಬ ಅಂದು ಹಳ್ಳಿ ಹಳ್ಳಿ ಸುತ್ತಿ ನಾರಾಯಣಗೌಡನನ್ನು ಗೆಲ್ಲಿಸಿತು. ಆದರೆ, ಆ ನನ್ನ ತಂಗಿಗೆ ನಾರಾಯಣಗೌಡ ಕೊಟ್ಟ ಬಳುವಳಿ ಏನು? ಎಂದು ಪ್ರಶ್ನಿಸಿದರಲ್ಲದೆ, ಅಂತಹ ನನ್ನ ತಂಗಿಯ ಮಗಳ ಮದುವೆಗೆ ದುಡ್ಡು ಕೊಟ್ಟೆ ಎಂದು ಊರೆಲ್ಲಾ ಹೇಳಿಕೊಂಡು ತಿರುಗುತ್ತಾ ಆಕೆಯ ಕುಟುಂಬವನ್ನು ಬೀದಿಗೆ ತಂದ ಕ್ರಿಮಿನಲ್ ನಾರಾಯಣಗೌಡ ಎಂದು ಹೇಳಿ ಕುಮಾರಸ್ವಾಮಿ ಕಣ್ಣೀರಿಟ್ಟರು.

ಇಲ್ಲಿ ಜನರ ವಿಶ್ವಾಸ ಗಳಿಸಲು ನಾನು ಕಣ್ಣೀರಿಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾರಾಯಣಗೌಡ ಮೊದಲ ಚುನಾವಣೆಯಲ್ಲೇ ನನ್ನಿಂದ ಖರ್ಚಿಗೆ ಹಣ ಪಡೆದಿದ್ದಾನೆ. 2013ರಲ್ಲಿ ಪಕ್ಷ ಸಂಕಷ್ಟದಲ್ಲಿದ್ದಾಗ ಚುನಾವಣಾ ಖರ್ಚಿಗೆ ಹಣ ಬೇಡ ‘ಬಿ’ ಫಾರಂ ಕೊಡಿ ಸಾಕು, ಗೆದ್ದು ಬರುತ್ತೇನೆ ಎಂದ ನಾರಾಯಣಗೌಡ ನಾಮಪತ್ರ ಸಲ್ಲಿಸಿದ ಮರು ದಿನವೇ ಹಣಕ್ಕಾಗಿ ಮನೆ ಮುಂದೆ ಬಂದು ಕುಳಿತಿದ್ದ. ದೇವೇಗೌಡರ ಕುಟುಂಬದವರು ತೊಂದರೆ ಕೊಡುತ್ತಿದ್ದಾರೆ. ಅದಕ್ಕಾಗಿ ಪಕ್ಷ ಬಿಡುತ್ತಿದ್ದೇನೆ ಎಂದು ನಾರಾಯಣಗೌಡ ಸುಳ್ಳು ಹೇಳಿದ್ದಾರೆ. ನನ್ನ 14 ತಿಂಗಳ ಅಧಿಕಾರಾವಧಿಯಲ್ಲಿ ಕೆ.ಆರ್.ಪೇಟೆ ಕ್ಷೇತ್ರಕ್ಕೆ 700 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಆದರೆ ಸುಳ್ಳು ಹೇಳುವುದರ ಜೊತೆಗೆ ನನ್ನ ತಂಗಿಯ ಕುಟುಂಬವನ್ನು ಬೀದಿಗೆ ತಂದು ನಾರಾಯಣಗೌಡ ನನ್ನ ಕಣ್ಣಲ್ಲಿ ನೀರು ತರಿಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೆಚ್.ಡಿ.ದೇವೇಗೌಡರಿಗೂ ಕೆ.ಆರ್.ಪೇಟೆಗೂ ಬಿಡಿಸಲಾರದ ನಂಟಿದೆ. ಹೇಮಾವತಿ ನೀರನ್ನು ಕೆ.ಆರ್.ಪೇಟೆಗೆ ತರುವ ಮೂಲಕ ಈ ತಾಲೂಕನ್ನು ಹಸಿರೀಕರಣಗೊಳಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ಈ ವಿಚಾರ ಕೆಲವು ಯುವಕರಿಗೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದೆಲ್ಲಾ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಅನ್ನೋದು ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಶಾಸಕರಾದ ಕೆ. ಸುರೇಶ್‍ಗೌಡ, ಅಪ್ಪಾಜಿಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ವೆಂಕಟಸುಬ್ಬೇಗೌಡ ಹಾಗೂ ಸ್ಥಳೀಯ ಮುಖಂಡರಿದ್ದರು.

ಅಪ್ಪ-ಮಗನ ವಿರುದ್ಧ ಆಕ್ರೋಶ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ 22 ವರ್ಷಗಳಿಂದ ರಾಜಕೀಯ ವನವಾಸದಲ್ಲಿದ್ದರು. ಅವರನ್ನು ಕರೆತಂದು ಸಂಸದನಾಗಿ ಮಾಡಿದೆ. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವರಾಮೇಗೌಡ ಮತ್ತು ಆತನ ಪುತ್ರ ಚೇತನ್‍ಗೌಡ ನಮ್ಮ ವಿರುದ್ಧ ಇಲ್ಲ, ಸಲ್ಲದ ಅಪಪ್ರಚಾರ ಮಾಡುವ ಮೂಲಕ ನಿಖಿಲ್ ಸೋಲಿಗೆ ಕಾರಣರಾದರು ಎಂದು ಕಿಡಿಕಾರಿದರು. ನಾನು ಇಷ್ಟರಲ್ಲೇ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೆ. ಆದರೆ, ಲಕ್ಷಾಂತರ ಕಾರ್ಯಕರ್ತರ ಹಿತದೃಷ್ಟಿಯಿಂದ ರಾಜಕಾರಣದಲ್ಲಿ ಮುಂದುವರೆದಿದ್ದೇನೆ.

Translate »