ಭಾರತದ ಕೋವಿಡ್ ಲಸಿಕೆ ತಯಾರಕ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿದ ಚೀನಾ ಹ್ಯಾಕರ್‍ಗಳು
ಮೈಸೂರು

ಭಾರತದ ಕೋವಿಡ್ ಲಸಿಕೆ ತಯಾರಕ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿದ ಚೀನಾ ಹ್ಯಾಕರ್‍ಗಳು

March 2, 2021

ನವದೆಹಲಿ,ಮಾ.1-ದೇಶದಲ್ಲಿನ ಎರಡು ಕೋವಿಡ್-19 ಲಸಿಕೆ ತಯಾರಕ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಹಾಳು ಮಾಡಲು ಚೀನಾದ ಸರ್ಕಾರಿ ಬೆಂಬಲಿತ ಹ್ಯಾಕರ್‍ಗಳ ತಂಡ ಯತ್ನಿಸಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಫರ್ಮಾ ತಿಳಿಸಿದೆ. ಭಾರತ ಹಾಗೂ ಚೀನಾ ಎರಡೂ ದೇಶಗಳು ಕೋವಿಡ್ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೆ ಮಾರಾಟ ಹಾಗೂ ಕೊಡುಗೆಯಾಗಿ ನೀಡುತ್ತಿವೆ. ವಿಶ್ವದಾದ್ಯಂತ ಮಾರಾಟ ವಾಗುತ್ತಿರುವ ಎಲ್ಲ ಲಸಿಕೆಗಳಲ್ಲಿ ಶೇ.60ಕ್ಕಿಂತಲೂ ಹೆಚ್ಚು ಭಾರತದ ಪಾಲಿದೆ.

ಚೀನಾದ `ಎಪಿಟಿ10′ ಎಂಬ ಹ್ಯಾಕರ್‍ಗಳ ತಂಡ ಹ್ಯಾಕ್ ಮಾಡಲು ಯತ್ನಿಸಿದೆ. ಭಾರತ್ ಬಯೋಟೆಕ್ ಮತ್ತು ಸೀರಂ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾದ ಐಟಿ ಮೂಲಸೌಕರ್ಯ, ಪೂರೈಕೆ ಸರಪಳಿ ಮಾಹಿತಿ ಕದಿಯಲು ಯತ್ನಿಸಿದ್ದು, ಕೆಲವು ಅಂಶಗಳನ್ನು ತಿಳಿದುಕೊಂಡಿದೆ ಎಂದು ಸಿಂಗಾಪುರ ಮತ್ತು ಟೋಕಿಯೊ ಮೂಲದ ಗೋಲ್ಡ್‍ಮನ್ ಸ್ಯಾಕ್ಸ್ ಬೆಂಬಲಿತ ಸೈಫರ್ಮಾ ಹೇಳಿದೆ. ಬೌದ್ದಿಕ ಆಸ್ತಿ ಕಳವು ಮತ್ತು ಭಾರತೀಯ ಔಷಧೀಯ ಕಂಪನಿಗಳ ವಿರುದ್ಧ ಸ್ಪರ್ಧಾತ್ಮಕ ಲಾಭ ಪಡೆಯುವ ನಿಟ್ಟಿನಲ್ಲಿ ಹ್ಯಾಕರ್‍ಗಳ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಸೈಫರ್ಮಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ರಿತೀಶ್ ಹೇಳಿದ್ದಾರೆ. ಚೀನಾದ ವಿದೇಶಾಂಗ ಸಚಿವಾಲಯ ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Translate »