ಸ್ವಚ್ಛ ಭಾರತ ಮಿಷನ್ 2.0;  ಸಂಘ-ಸಂಸ್ಥೆಗಳಿಗೂ ಪ್ರಶಂಸನಾ ಪತ್ರ
ಮೈಸೂರು

ಸ್ವಚ್ಛ ಭಾರತ ಮಿಷನ್ 2.0; ಸಂಘ-ಸಂಸ್ಥೆಗಳಿಗೂ ಪ್ರಶಂಸನಾ ಪತ್ರ

October 5, 2021

ಮೈಸೂರು,ಅ.4(ಪಿಎಂ)-ದೆಹಲಿಯಲ್ಲಿ ಅ.2ರಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಯೋಜನೆ (ನಗರ) ಮತ್ತು ಅಮೃತ್ ಯೋಜನೆ ಸಂಬಂಧ 2ನೇ ಆವೃತ್ತಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀ ಕಾಂತರೆಡ್ಡಿ ಹಾಗೂ ಮೇಯರ್ ಸುನಂದಾ ಪಾಲನೇತ್ರ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಮೇಯರ್ ಸುನಂದಾ ಪಾಲನೇತ್ರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ನಗರಗಳನ್ನು ತ್ಯಾಜ್ಯ ಮುಕ್ತಗೊಳಿಸುವುದೇ ಸ್ವಚ್ಛ ಭಾರತ ಮಿಷನ್ 2.0 ಉದ್ದೇಶ ಎಂಬುದನ್ನು ಪ್ರಧಾನಿಗಳು ಕಾರ್ಯಕ್ರಮದಲ್ಲಿ ಪ್ರಕಟಿಸಿದರು. ಮಿಷನ್ 2.0ದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪರಿ ಣಾಮಕಾರಿಯಾಗಿ ತೊಡಗಿಸಿಕೊಂಡಿರುವ ಸಂಘ-ಸಂಸ್ಥೆಗಳನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡಲಾಗುವ ಬಗ್ಗೆಯೂ ನಮಗೆ ಮಾಹಿತಿ ನೀಡಲಾಯಿತು ಎಂದು ತಿಳಿಸಿದರು.

ಹಾಗಾಗಿ ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿ ರುವ ಸಂಘ-ಸಂಸ್ಥೆಗಳನ್ನು ಗುರುತಿಸಲು ಅವಕಾಶ ದೊರೆಯಲಿದೆ. ದೆಹಲಿಯಿಂದಲೇ ಪ್ರಶಂಸನಾ ಪತ್ರ ಬರಲಿದ್ದು, ಅದನ್ನು ಪಾಲಿಕೆ ಗುರುತಿಸಿ ಕೊಡಲಿದೆ. ಇದರಲ್ಲಿ ಮೇಯರ್ ಸಹಿ ಇರುವುದು ನನಗೆ ಖುಷಿ ತಂದಿತು ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯದಿಂದ ಮೈಸೂರು ಸೇರಿದಂತೆ ಶಿವಮೊಗ್ಗ ಮತ್ತು ದಾವಣಗೆರೆ ಪಾಲಿಕೆಯ ಮೇಯರ್ ಮತ್ತು ಆಯುಕ್ತರಿಗೆ ದೆಹಲಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಅದೇ ರೀತಿ ಇಡೀ ದೇಶದಿಂದ ಆಯ್ದ ವಿವಿಧ ನಗರ ಪಾಲಿಕೆಗಳ ಮೇಯರ್ ಮತ್ತು ಆಯುಕ್ತರಿಗೆ ಆಹ್ವಾನವಿತ್ತು ಎಂದು ಮೇಯರ್ ಸುನಂದಾ ತಿಳಿಸಿದರು.

Translate »