ಸ್ವಚ್ಛ ಸರ್ವೇಕ್ಷಣಾ ವೇಳೆಯ ವರ್ಷಪೂರ್ತಿ ಸ್ವಚ್ಛತಾ ಕಾರ್ಯ: ಮೇಯರ್
ಮೈಸೂರು

ಸ್ವಚ್ಛ ಸರ್ವೇಕ್ಷಣಾ ವೇಳೆಯ ವರ್ಷಪೂರ್ತಿ ಸ್ವಚ್ಛತಾ ಕಾರ್ಯ: ಮೇಯರ್

January 23, 2020

ಮೈಸೂರು, ಜ.22(ಪಿಎಂ)- ಸ್ವಚ್ಛ ಸರ್ವೇಕ್ಷಣಾ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ನಡೆಸುವ ಸ್ವಚ್ಛತಾ ಚಟುವಟಿಕೆಗಳನ್ನು ವರ್ಷಪೂರ್ತಿ ನಡೆ ಸಲು ಉದ್ದೇಶಿಸಲಾಗಿದೆ ಎಂದು ಮೇಯರ್ ತಸ್ನೀಂ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಸರ್ವೇಕ್ಷಣಾ ಸಮಯದಲ್ಲಿ ಮಾತ್ರ ಸ್ವಚ್ಛತೆಗೆ ಹೆಚ್ಚು ಗಮನ ಕೊಡಲಾ ಗುತ್ತದೆ. ಉಳಿದ ಸಮಯದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತದೆ ಎಂಬ ದೂರಿದೆ. ಈ ಅಪವಾದವನ್ನು ದೂರ ಮಾಡಬೇಕಿದೆ. ಜೊತೆಗೆ ಇದು ನಿರಂತರವಾಗಿ ಮುಂದುವರೆದರೆ ನಗರದಲ್ಲಿ ಸ್ವಚ್ಛತೆ ನೆಲೆಸಲಿದೆ ಎಂದರು.

ನಾನು ಈ ಹಿಂದೆ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯೆಯಾಗಿ ದ್ದಾಗಲೂ ಸ್ವಚ್ಛತಾ ಚಟುವಟಿಕೆ ನಿರಂತರವಾಗಿ ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಈಗ ಇದನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಈಗಾಗಲೇ ಆಯುಕ್ತರು ಹಾಗೂ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

ಸ್ವಚ್ಛ ಸರ್ವೇಕ್ಷಣಾ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳನ್ನು ಮಾತ್ರ ಸ್ವಚ್ಛಗೊಳಿಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಹೀಗಾಗಿ ನಗರದ ಪ್ರತಿ ರಸ್ತೆ ಮತ್ತು ಬಡಾವಣೆಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ನೆನ್ನೆ ನಾನೇ ಖುದ್ದು ನಿಂತು ಗಾಂಧಿನಗರದಲ್ಲಿ ಸಣ್ಣ ಸಣ್ಣ ರಸ್ತೆಗಳನ್ನೂ ಸ್ವಚ್ಛ ಮಾಡಿಸಿದ್ದೇನೆ ಎಂದು ಹೇಳಿದರು.

ಯುಜಿಡಿ, ಕೇಬಲ್ ಅಳವಡಿಕೆ ಕಾಮಗಾರಿ ಕೈಗೊಂಡರೆ ನಗರದ ಅಂದ ಹಾಳಾಗಲಿದೆ. ಈಗಾಗಲೇ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷಾ ಕಾರ್ಯಕ್ಕಾಗಿ ನಗರದಲ್ಲಿ ತಂಡ ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲು ಸೂಚನೆ ನೀಡಲಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿ ಯುವ ಹಾಗೂ ಕಸ ಸುಡುವ ಸಂಬಂಧ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ ಎಂದು ತಿಳಿಸಿದರು.

ಸಕಾರಾತ್ಮಕ ಪ್ರತಿಕ್ರಿಯೆ ಬೇಕು: ಸ್ವಚ್ಛ ಸರ್ವೇಕ್ಷಣಾದಲ್ಲಿ ಮೈಸೂರು ದೇಶದ ಮೊದಲ ಸ್ವಚ್ಛ ನಗರವಾಗಿ ಹೊರಹೊಮ್ಮಲು ನಾಗರಿಕರ ಸಕಾರಾತ್ಮಕ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದೆ. ಸದ್ಯ 40 ಸಾವಿರ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು 60 ಸಾವಿರ ಮಂದಿ ಪ್ರತಿಕ್ರಿಯೆ ನೀಡುವ ಅಗತ್ಯವಿದೆ. ಮೈಸೂರಿನ ನಾಗರಿಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು. ನಗರ ಪಾಲಿಕೆ ಮಾಜಿ ಸದಸ್ಯ ನಸಿರುದ್ದೀನ್‍ಬಾಬು, ಜೆಡಿಎಸ್ ಮುಖಂಡ ರಾದ ಸೈಯದ್ ರೆಹಮತ್‍ಉಲ್ಲಾ, ಇಮ್ರಾನ್ ಗೋಷ್ಠಿಯಲ್ಲಿದ್ದರು.

ಕಸಾಯಿಖಾನೆ ನಿರ್ಮಾಣ ಸಂಬಂಧ ಶೀಘ್ರ ಮಾತುಕತೆ
ಹಳೇ ಕೆಸರೆ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಕಸಾಯಿಖಾನೆ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಶಾಸಕ ಜಿ.ಟಿ.ದೇವೇಗೌಡರೊಂದಿಗೆ ಮಾತನಾಡಲಿದ್ದೇನೆ. ಈ ಹಿಂದೆ ಗುರುತಿಸಿದ್ದ ಸ್ಥಳದಿಂದ ಯೋಜನೆ ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ಎಲ್ಲ ಕಡೆಯೂ ಬೇಡವೆಂದರೆ ಮಾಡುವುದಾ ದರೂ ಎಲ್ಲಿ? ಹಳೇ ಕೆಸರೆ ಸಮೀಪ ಮಾಡದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಶಾಸಕ ಜಿ.ಟಿ. ದೇವೇಗೌಡರಿಗೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಶೀಘ್ರದಲ್ಲಿ ಜಿ.ಟಿ.ದೇವೇಗೌಡರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚೆ ನಡೆಸಲಿದ್ದೇನೆ. ಇದೊಂದು ಉತ್ತಮ ಯೋಜನೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪರಿಸರದ ಮೇಲೆ ಯಾವುದೇ ಹಾನಿಯಾಗದಂತೆ ಕ್ರಮ ವಹಿಸುವುದರಿಂದ ಯಾವುದೇ ಸಮಸ್ಯೆ ಇಲ್ಲ.-ಮೇಯರ್ ತಸ್ನೀಂ