ಮೈಸೂರು ಜಿಲ್ಲಾಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ
ಮೈಸೂರು

ಮೈಸೂರು ಜಿಲ್ಲಾಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

January 23, 2020

ಮೈಸೂರು, ಜ.22(ಎಂಕೆ)- ಕಾಂಗ್ರೆಸ್ ಸರ್ಕಾ ರದ ಆಡಳಿತಾವಧಿಯಲ್ಲಿ ನಿರ್ಮಿಸಿರುವ ಜಿಲ್ಲಾಸ್ಪತ್ರೆಗೆ ಈಗಿನ ಬಿಜೆಪಿ ಸರ್ಕಾರ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸದೆ ಉದ್ಘಾಟನೆಗೆ ಮುಂದಾಗಿರುವುದು ಸರಿಯಲ್ಲ. ಮೂಲಭೂತ ಸೌಕರ್ಯ ಕಲ್ಪಿಸುವವ ರೆಗೂ ಉದ್ಘಾಟನಾ ಕಾರ್ಯಕ್ರಮ ಮುಂದೂಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೆಆರ್‍ಎಸ್ ರಸ್ತೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2016-17ನೇ ಸಾಲಿನ ಆಯವ್ಯಯದಲ್ಲಿ 64 ಕೋಟಿ ರೂ. ವೆಚ್ಚದಲ್ಲಿ 5 ಅಂತಸ್ತಿನ ಜಿಲ್ಲಾಸ್ಪತ್ರೆ ಕಟ್ಟಡವನ್ನು ಕಟ್ಟಿಸಿದ್ದು. ಅಲ್ಲದೆ ವೈದ್ಯಕೀಯ ಪರಿಕರಗಳಿಗಾಗಿ 14 ಕೋಟಿ ರೂ. ಮೀಸಲಿ ಟ್ಟಿದ್ದರು. ಆದರೆ ಈಗಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಪರಿಕರಗಳಿಗಾಗಿ ಮೀಸಲಿಟ್ಟಿದ್ದ ಹಣವನ್ನು ಬಿಡುಗಡೆ ಮಾಡದೆ ಕೇವಲ ಖಾಲಿ ಕಟ್ಟಡ ವನ್ನಷ್ಟೇ ಉದ್ಘಾಟಿಸಲು ಮುಂದಾಗಿದೆ. ಖಾಲಿ ಕಟ್ಟಡ ದಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗ ವಿಲ್ಲ. ಜಿಲ್ಲಾಸ್ಪತ್ರೆ ಸಂಪೂರ್ಣವಾಗಿ ಸಜ್ಜಾದ ಬಳಿಕವೇ ಉದ್ಘಾಟಿಸುವುದು ಒಳಿತು ಎಂದರು.

ಸಿದ್ದರಾಮಯ್ಯ ಸಿಎಂ ಆದ ನಂತರ ಮೈಸೂರು ನಗ ರಕ್ಕೆ ಸುಮಾರು 3263 ಕೋಟಿ ಅನುದಾನ ನೀಡಿ ದ್ದಾರೆ. 40 ವಿವಿಧ ಕಾಮಗಾರಿ ಯೋಜನೆಗಳನ್ನು ಹಮ್ಮಿ ಕೊಳ್ಳಲಾಗಿತ್ತು. ಮಹಾರಾಜರ ನಂತರ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳಾಗಿದ್ದು, ಸಿದ್ದರಾಮಯ್ಯ ಸರ್ಕಾರ ದಿಂದ ಮಾತ್ರ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮತ್ತು ಮಾಜಿ ಶಾಸಕ ವಾಸು ಅವರಿಂದ ಚಾಮರಾಜ ಕ್ಷೇತ್ರದಲ್ಲಿ ಹೆಚ್ಚು ಕೆಲಸಗಳಾಗಿವೆ. ಇದೆಲ್ಲವನ್ನು ತಾವು ಮಾಡಿದ್ದೆವೆಂದು ಹೇಳಿಕೊಳ್ಳಲು ಏಕಾಏಕಿ ಜಿಲ್ಲಾಸ್ಪತ್ರೆ ಉದ್ಘಾಟಿಸಲು ಮುಂದಾಗುತ್ತಿರುವುದು ಸರಿಯಲ್ಲ. ಈ ಸಂಬಂಧ ವಾಸು ಸಹ ಸಚಿವ ವಿ.ಸೋಮಣ್ಣಗೆ ಪತ್ರ ಬರೆದು ಕಾರ್ಯಕ್ರಮ ಮುಂದೂಡುವಂತೆ ಕೋರಿದ್ದಾರೆ. ಹೀಗಾಗಿ ಸಕಲ ಸಜ್ಜಿನೊಂದಿಗೆ ಜಿಲ್ಲಾಸ್ಪತ್ರೆ ಉದ್ಘಾಟಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಕ್ಷೇಮ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ವಕ್ತಾರೆ ಮಂಜುಳಾ ಮಾನಸ, ಮುಖಂಡರಾದ ಹೆಡ ತಲೆ ಮಂಜುನಾಥ್, ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Translate »