ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ಲಾಕ್‍ಡೌನ್ ಅವಧಿ ಗೌರವಧನ ಬಿಡುಗಡೆಗೆ ಸಿಎಂ ಸಮ್ಮತಿ
ಮೈಸೂರು

ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ಲಾಕ್‍ಡೌನ್ ಅವಧಿ ಗೌರವಧನ ಬಿಡುಗಡೆಗೆ ಸಿಎಂ ಸಮ್ಮತಿ

November 15, 2020

ಮೈಸೂರು,ನ.14(ಪಿಎಂ)-ಕಾಲೇಜು ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿ ರುವ ಅತಿಥಿ ಉಪನ್ಯಾಸಕರ ಲಾಕ್‍ಡೌನ್ ಅವಧಿ ಗೌರವ ಧನ ಬಿಡು ಗಡೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆ.

ಸದರಿ ಅತಿಥಿ ಉಪನ್ಯಾಸಕರ ಲಾಕ್‍ಡೌನ್ ಅವಧಿ ಗೌರವ ಧನ ಬಿಡುಗಡೆ ಸಂಬಂಧ ಆಡಳಿತ ಇಲಾಖೆ ವತಿಯಿಂದ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದನ್ನು ಪರಿಶೀಲಿಸಿ ಗೌರವಧನ ಬಿಡುಗಡೆಗೆ ಆರ್ಥಿಕ ಇಲಾಖೆ ಕ್ರಮ ಕೈಗೊಂಡಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ.ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಆರ್ಥಿಕ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎನ್.ಮೂರ್ತಿ ಪತ್ರ ಬರೆದಿದ್ದಾರೆ.

ಆಡಳಿತ ಇಲಾಖೆ ಪ್ರಸ್ತಾವನೆ ಪರಿಶೀಲಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕಿ ನಿಂದ ಜಾರಿಯಲ್ಲಿದ್ದ ಲಾಕ್‍ಡೌನ್ ಅವಧಿಯನ್ನು ಕಾಲೇಜು ಶಿಕ್ಷಣ ಇಲಾಖೆಯ ಅತಿಥಿ ಉಪನ್ಯಾಸಕರಿಗೆ ಸಂಬಂಧಿಸಿದಂತೆ 5 ತಿಂಗಳ ಅವಧಿಗೆ (ಮಾರ್ಚ್‍ನಿಂದ ಆಗಸ್ಟ್) `ಕರ್ತವ್ಯನಿರತರು’ ಎಂದು ವಿಶೇಷ ಪ್ರಕರಣದಡಿ ಪರಿಗಣಿಸಲಾಗಿದೆ. ಆ ಮೂಲಕ ಒಟ್ಟು 14,447 ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸಲು ಕ್ರಮ ವಹಿಸಲಾಗಿದೆ.

ಇದಕ್ಕಾಗಿ 2020-21ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆಯಲ್ಲಿ ಅತಿಥಿ ಉಪನ್ಯಾಸಕರ ಗೌರವಧನ ಅಡಿಯಲ್ಲಿ ಒದಗಿಸಲಾಗಿರುವ 11209.00 ಲಕ್ಷ ರೂ.ಗಳಲ್ಲಿ ಪ್ರಸ್ತುತ ಲಭ್ಯವಿರುವ 55.70 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಸಹಮತಿಸಿದೆ. ಮುಂದುವರೆದಂತೆ, ಒಟ್ಟಾರೆ ಬಿಡುಗಡೆ ಮಾಡಬೇಕಾಗಿರುವ 85.92 ಕೋಟಿ ರೂ. ಪೈಕಿ ಬಾಕಿ 30.22 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದೆಂದು ಆಡಳಿತ ಇಲಾಖೆಗೆ ತಿಳಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಗೌರವಧನಕ್ಕಾಗಿ ಹೋರಾಟ ನಡೆಸುತ್ತಿದ್ದ ಅತಿಥಿ ಉಪನ್ಯಾಸಕ ರಿಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಬೆಂಬಲವಾಗಿ ನಿಂತಿದ್ದರು. ಅಲ್ಲದೆ, ಉನ್ನತ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳನ್ನು ಪತ್ರ ಮುಖೇನ ಹಾಗೂ ಖುದ್ದು ಭೇಟಿ ಮಾಡಿ ಗೌರವಧನ ಬಿಡುಗಡೆಗೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »