ಆಂಧ್ರ ಸರ್ಕಾರದ ಮಾದರಿ ರಾಜ್ಯ ತಂಬಾಕು ಬೆಳೆಗಾರರ ನೆರವಿಗೆ ಧಾವಿಸಿ
ಮೈಸೂರು

ಆಂಧ್ರ ಸರ್ಕಾರದ ಮಾದರಿ ರಾಜ್ಯ ತಂಬಾಕು ಬೆಳೆಗಾರರ ನೆರವಿಗೆ ಧಾವಿಸಿ

November 15, 2020

ಮೈಸೂರು, ನ.14(ಪಿಎಂ)- ನೆರೆಯ ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಮಾದರಿಯಲ್ಲಿ ನಮ್ಮ ರಾಜ್ಯ ಸರ್ಕಾರವೂ ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಖರೀದಿಸುವ ಮೂಲಕ ರೈತನ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಂಸದ ಆರ್.ಧ್ರುವ ನಾರಾಯಣ್ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ ಸರ್ಕಾರ ಸುಮಾರು 300 ಕೋಟಿ ರೂ. ಅವರ್ತ ನಿಧಿ ಇಟ್ಟು ಆ ಮೂಲಕ ಕೆಜಿ ತಂಬಾಕಿಗೆ 170 ರೂ. ನೀಡಿ ಖರೀದಿಸುತ್ತಿದೆ. ಅದೇ ಮಾದರಿ ಯಲ್ಲಿ ನಮ್ಮ ರಾಜ್ಯ ಸರ್ಕಾರವೂ ರಾಜ್ಯದ ತಂಬಾಕು ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ತಂಬಾಕಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಲಾ ಶೇ.9ರಷ್ಟು ಜಿಎಸ್‍ಟಿ ತೆರಿಗೆ ಲಭ್ಯವಾಗುತ್ತಿದೆ. ಒಟ್ಟಾರೆ ಶೇ.18ರಷ್ಟು ಜಿಎಸ್‍ಟಿ ತೆರಿಗೆ ವಸೂಲಿ ಮಾಡುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ತಂಬಾಕು ಬೆಳೆಗಾರರ ನೆರವಿಗೆ ಬಂದಿಲ್ಲ. ಜೊತೆಗೆ ತಂಬಾಕು ಮಂಡಳಿಗೂ ಶೇ.1ರಷ್ಟು ಸೇವಾ ಶುಲ್ಕ ಸಂದಾಯವಾಗಲಿದೆ ಎಂದರು.

ತಂಬಾಕು ಬೆಳೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿ ದ್ದರೆ, ಬ್ರೆಜಿಲ್ ನಂತರದ ಸ್ಥಾನದಲ್ಲಿದೆ. ಭಾರತ ತೃತೀಯ ಸ್ಥಾನದಲ್ಲಿದ್ದು, ಆಂಧ್ರಪ್ರದೇಶ ಮತ್ತು ಕರ್ನಾ ಟಕದಲ್ಲಿ ಮಾತ್ರವೇ ತಂಬಾಕು ಬೆಳೆಯಲಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಬೆಳೆಯುವ ತಂಬಾಕು ಉತ್ತಮ ಗುಣಮಟ್ಟದಿಂದ ಕೂಡಿದೆ. ಇದೊಂದು ವಾರ್ಷಿಕ ಬೆಳೆಯಾಗಿದ್ದು, ಸಾಮಾನ್ಯವಾಗಿ ಇಡೀ ಕುಟುಂಬವೇ ಇದರ ಕೃಷಿಯಲ್ಲಿ ತೊಡಗಿಕೊಂಡು ಕಷ್ಟಪಟ್ಟು ಬೆಳೆ ತೆಗೆಯಲಾಗುತ್ತದೆ. ಆದರೆ ಇಂದು ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

2019-2020ರಲ್ಲಿ ದೇಶದಿಂದ ವಿದೇಶಕ್ಕೆ 2,63, 775 ಟನ್ ತಂಬಾಕು ರಫ್ತು ಆಗಿದೆ. ಇದರ ಮೌಲ್ಯ 4,979 ಕೋಟಿ ರೂ. ತಂಬಾಕು ಬೆಳೆಯಿಂದ ವರ್ಷಕ್ಕೆ ಸುಮಾರು 25 ಸಾವಿರ ಕೋಟಿ ರೂ. ಸರ್ಕಾರಕ್ಕೆ ಅಬಕಾರಿ ತೆರಿಗೆ ಪಾವತಿ ಆಗುತ್ತಿದೆ. 1975ರಲ್ಲಿ ಕೇಂದ್ರ ಸರ್ಕಾರ ತಂಬಾಕು ಮಂಡಳಿ ಸ್ಥಾಪಿಸಿದರೂ 1984ರ ವೇಳೆಗೆ ಮಂಡಳಿಯ ತಂಬಾಕು ಹರಾಜು ಫ್ಲಾಟ್‍ಫಾರಂಗಳು ಆರಂಭವಾದವು. ಮೈಸೂರು ಜಿಲ್ಲೆಯಲ್ಲಿ 11 ಫ್ಲಾಟ್ ಫಾರಂಗಳಿವೆ. ತಂಬಾಕು ಒಳಭೂಮಿ ಹಾಗೂ ಮಳೆ ಯಾಶ್ರಿತ ಬೆಳೆಯಾಗಿದೆ. ಜೊತೆಗೆ ಕಾಡುಪ್ರಾಣಿ ಹಾವಳಿ ತೀರಾ ಕಡಿಮೆ. ಹೀಗಾಗಿ ರೈತರು ಇದರಿಂದ ಒಂದಿಷ್ಟು ಲಾಭ ಕಾಣುವ ನಿರೀಕ್ಷೆ ಹೊಂದಿರುತ್ತಾರೆ. ಆದರೆ ಸರ್ಕಾರ ಅವರ ಕೈಹಿಡಿಯುತ್ತಿಲ್ಲ ಎಂದು ಹೇಳಿದರು.

2017-18ರಲ್ಲಿ ಕೆಜಿ ತಂಬಾಕಿಗೆ 139.30 ರೂ. (139 ರೂ. 30 ಪೈಸೆ) ಹಾಗೂ 2018-19ರಲ್ಲಿ 145.25 ರೂ. ಇತ್ತು. ಆದರೆ 2019-20ರಲ್ಲಿ 124 ರೂ.ಗೆ ಇಳಿಕೆ ಯಾಗಿದೆ. ಕೆಜಿಗೆ ತಂಬಾಕು ಬೆಳೆಯಲು 135ರಿಂದ 140 ರೂ.ವೆರೆಗೆ ವೆಚ್ಚ ಮಾಡಬೇಕಾಗುತ್ತದೆ. ತಂಬಾಕು ಕಂಪನಿಗಳು ಕೆಜಿ ತಂಬಾಕಿನಲ್ಲಿ ಸಾವಿರ ಸಿಗರೇಟ್ ತಯಾರಿಸುತ್ತವೆ. ಆದರೆ ಕೆಜಿ ತಂಬಾಕನ್ನು ರೈತರಿಂದ ಕೇವಲ 140ರಿಂದ 150 ರೂ.ಗೆ ಖರೀದಿ ಮಾಡುತ್ತವೆ. ಒಂದು ಪೊಟ್ಟಣ ಸಿಗರೇಟ್‍ಗೆ (10 ಸಿಗರೇಟು) 165 ರೂ. ಅಂದುಕೊಂಡರೂ 16,500 ರೂ. ಕಂಪನಿಗೆ ಬರಲಿದೆ. ಇದರಲ್ಲಿ ತೆರಿಗೆ ಸೇರಿ ಉತ್ಪಾದನಾ ವೆಚ್ಚ ಕಳೆದರೂ 2,887 ರೂ. ಲಾಭವಿದೆ. ಆದರೆ ಕೆಜಿ ತಂಬಾ ಕಿಗೆ ರೈತರಿಗೆ ಇರವರು ಕೊಡುವುದು ಕೇವಲ 135 ರಿಂದ 140 ರೂ. ಮಾತ್ರ ಎಂದು ಆಕ್ಷೇಪ ವ್ಯಕ್ತಪಡಿಸಿ ದರು. ಶಾಸಕರಾದ ಹೆಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ಕಾಂಗ್ರೆಸ್ ಮೈಸೂರು ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್ ಗೋಷ್ಠಿಯಲ್ಲಿದ್ದರು.

ನನ್ನನ್ನು ಸೋಲಿಸಿದವರ ಕೊಡುಗೆ ಏನು?
ಆರ್.ಧ್ರುವನಾರಾಯಣ್ ಪ್ರಶ್ನೆ
ಮೈಸೂರು, ನ.14(ಪಿಎಂ)- ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಸಂಬಂಧ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಆರ್.ಧ್ರುವನಾರಾಯಣ್, ಇದೇ ವೇಳೆ ಸಿದ್ದ ರಾಮಯ್ಯ ಹಾಗೂ ನನ್ನನ್ನು ಸೋಲಿಸಿದ್ದೇವೆ ಎಂಬ ಗುಂಗಿನಲ್ಲೇ ಇದ್ದಾರೆ. ಒಂದೂ ವರೆ ವರ್ಷ ಅವಧಿಯಲ್ಲಿ ನನ್ನನ್ನು ಸೋಲಿಸಿದವರ ಕೊಡುಗೆ ಏನು? ಕೇಂದ್ರ ಹಾಗೂ ರಾಜ್ಯದಲ್ಲೂ ಅವರದೇ ಸರ್ಕಾರವಿದೆ. ಈಗ ಅವರ ಸಾಧನೆ ಏನು? ಎಂದು ಹೆಸರೇಳದೇ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಕುಟುಕಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸೋತಿರಬಹುದು. ಆದರೆ ಅವಿತು ಕುಳಿತವನಲ್ಲ. ಸಕ್ರಿಯ ರಾಜಕಾರಣದಲ್ಲಿದ್ದೇನೆ. ಫಲಿತಾಂಶ ಬಂದ ಮಾರನೇ ದಿನದಿಂದಲೇ ನಿರಂತರವಾಗಿ ಜನಸಂಪರ್ಕದಲ್ಲೇ ಇದ್ದೇನೆ. ರಾಜ್ಯದಲ್ಲಿ ಪ್ರವಾಹದಿಂದ ಹಾನಿಯಾಗಿದ್ದರೂ ಪರಿಹಾರ, ಜಿಎಸ್‍ಟಿ ಪಾಲನ್ನು ಸಂಸದರು ಕೇಂದ್ರ ಸರ್ಕಾರದಲ್ಲಿ ಕೇಳುತ್ತಲೇ ಇಲ್ಲ. ತಾವು ಹಿರಿಯ ಸದಸ್ಯರು. ಇದರಲ್ಲಿ ತಮ್ಮ ವಿದ್ವತ್ತು ತೊರಿಸಿ ಎಂದರು.

ಶಿರಾ ಹಾಗೂ ಆರ್‍ಆರ್ ನಗರ ಉಪಚುನಾವಣೆ ಸೋಲಿನ ಹೊಣೆಯನ್ನು ಕೇವಲ ಇಬ್ಬರ ಮೇಲೆ ಹಾಕುವುದಿಲ್ಲ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರು ಹೊಣೆ ಹೊತ್ತುಕೊಳ್ಳು ತ್ತೇವೆ. ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ವ್ಯವಸ್ಥಿತವಾಗಿ ಪ್ರಚಾರ ಮಾಡಿದ್ದೆವು. ಆದರೆ ಸೋಲಾಯಿತು. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೂ ನಾನಾ ಕಾರಣ ಇರುತ್ತದೆ. ಅದನ್ನು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮೇಲಾಕಲಾಗದು ಎಂದು ಪ್ರತಿಕ್ರಿಯಿಸಿದರು.

ಅವರು ರಾಮ ಮಂದಿರ ಕಟ್ಟಿಸದೇ ಇರಬಹುದು: ಸೋತಿದ್ದೇವೆ ಎಂದು ನಾವು ತಲೆ ತಗ್ಗಿಸುವುದಿಲ್ಲ. ಕಾರಣ ನಮ್ಮ ಪಕ್ಷದ ಆಡಳಿತಾವಧಿಯಲ್ಲಿ ಜನಪರ ಕಾರ್ಯಕ್ರಮ ಗಳನ್ನು ನೀಡಿದ್ದೇವೆ. ಹೀಗಾಗಿ ನಮ್ಮ ಸೋಲು ತಾತ್ಕಾಲಿಕ. ದೇಶದ ಹಣಕಾಸು ಪರಿಸ್ಥಿತಿ ಸುಧಾರಿಸುವಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊಡುಗೆ ಅಪಾರ. ಅವ ರನ್ನೂ ಟೀಕಿಸುತ್ತಾರೆ. ಗಾಂಧಿ-ನೆಹರು ಅವರನ್ನೂ ಟೀಕೆ ಮಾಡುತ್ತಾರೆ. ನೆಹರು ಅವರು ಪಂಚ ವಾರ್ಷಿಕ ಯೋಜನೆ ಜಾರಿಗೊಳಿಸದಿದ್ದರೆ ದೇಶ ಇಷ್ಟು ಅಭಿವೃದ್ಧಿ ಸಾಧಿಸಲಾಗುತ್ತಿತ್ತೇ? ಅವರು ರಾಮಮಂದಿರ ಕಟ್ಟಿಸದೇ ಇರಬಹುದು. ಆದರೆ ಅವರು ಅಭಿವೃದ್ಧಿಪರ ಕಾಳಜಿ ಹೊಂದಿದ್ದವರು. ಅವರು ಅಣೆಕಟ್ಟು, ಆಸ್ಪತ್ರೆ, ವಿಶ್ವವಿದ್ಯಾನಿಲಯಗಳೇ ನಿಜವಾದ ದೇವಾಲಯ ಎನ್ನುತ್ತಿದ್ದರು ಎಂದು ತಿಳಿಸಿದರು.

 

 

Translate »