ಪುನೀತ್ ರಾಜ್‍ಕುಮಾರ್ ಕನಸು ನನಸು ಶಕ್ತಿಧಾಮ ವಿದ್ಯಾಶಾಲಾಗೆ ಸಿಎಂ ಶಂಕುಸ್ಥಾಪನೆ; 5 ಕೋಟಿ ನೆರವು
ಮೈಸೂರು

ಪುನೀತ್ ರಾಜ್‍ಕುಮಾರ್ ಕನಸು ನನಸು ಶಕ್ತಿಧಾಮ ವಿದ್ಯಾಶಾಲಾಗೆ ಸಿಎಂ ಶಂಕುಸ್ಥಾಪನೆ; 5 ಕೋಟಿ ನೆರವು

April 8, 2022

ಮೈಸೂರಿನ `ಶಕ್ತಿಧಾಮ’ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ ಇನ್‍ಫೋಸಿಸ್ ಫೌಂಡೇಷನ್ ಬ್ಲಾಕ್ ಕಟ್ಟಡದ ಲೋಕಾರ್ಪಣೆ ಹಾಗೂ `ಶಕ್ತಿಧಾಮ ವಿದ್ಯಾಶಾಲಾ’ ಕಟ್ಟಡದ ಶಂಕುಸ್ಥಾಪನೆ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸುತ್ತೂರು ಶ್ರೀಗಳು, ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ವಿಧಾನಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್, ನಟ ಶಿವರಾಜ್‍ಕುಮಾರ್, ಸಂಸ್ಥೆಯ ಅಧ್ಯಕ್ಷೆ ಗೀತಾ ಶಿವರಾಜ್‍ಕುಮಾರ್, ಶಕ್ತಿಧಾಮದ ಉಪಾಧ್ಯಕ್ಷ ಕೆಂಪಯ್ಯ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ಇನ್ನಿತರರಿದ್ದಾರೆ.

ಮೈಸೂರು,ಏ.7(ಎಸ್‍ಬಿಡಿ)-ಮೈಸೂರಿನ `ಶಕ್ತಿಧಾಮ’ -ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರಕ್ಕೆ 5 ಕೋಟಿ ರೂ. ನೆರವು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಗುರುವಾರ `ಶಕ್ತಿಧಾಮ’ದ ಆವರಣದಲ್ಲಿ ನಿರ್ಮಿಸಿ ರುವ ಇನ್‍ಫೋಸಿಸ್ ಫೌಂಡೇಷನ್ ಬ್ಲಾಕ್ ಕಟ್ಟಡದ ಲೋಕಾರ್ಪಣೆ ಹಾಗೂ `ಶಕ್ತಿಧಾಮ ವಿದ್ಯಾಶಾಲಾ’ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾ ಡಿದ ಅವರು, ನಟ ಶಿವರಾಜ್‍ಕುಮಾರ್ ಅವರೊಂ ದಿಗೆ `ಶಕ್ತಿಧಾಮ’ ಸಂಸ್ಥೆ ಬಗ್ಗೆ ಚರ್ಚಿಸಿದ ವೇಳೆ ಇಂತಹ ಸೇವಾ ಸಂಸ್ಥೆಗಳಿಗೆ ಸರ್ಕಾರದ ನೆರವು ನೀಡಬೇ ಕೆಂದು ಪ್ರೇರಣೆ ಆಯಿತು. ಶಕ್ತಿಧಾಮದ ಮ್ಯಾನೇಜಿಂಗ್ ಟ್ರಸ್ಟಿ ಜಿ.ಎಸ್.ಜಯದೇವ ಅವರು ಎಷ್ಟು ಅನುದಾನ ನೀಡುತ್ತೀರಿ ಎಂದು ಕೇಳಿದ್ದನ್ನು ಲೆಕ್ಕ ಹಾಕಿದೆ. ಅವರು ಐದು ಬಾರಿ ಕೇಳಿದರು. ಹಾಗಾಗಿ 5 ಕೋಟಿ ರೂ. ಅನುದಾನ ನೀಡುತ್ತೇನೆ ಎಂದು ನಗುತ್ತಾ ಹೇಳಿದರು.

ನಾನು ಆರ್ಥಿಕತೆ ಬಗ್ಗೆ ನಂಬಿಕೆ ಇಟ್ಟಿದ್ದೇನೆ. ಆರ್ಥಿ ಕತೆ ಅಂದರೆ ಹಣವಲ್ಲ, ಜನ ಎನ್ನುವುದು ನನ್ನ ಭಾವನೆ. ದುಡಿಮೆ ಮಾಡಿದರೆ ತಾನಾಗಿಯೇ ಆರ್ಥಿಕ ಅಭಿ ವೃದ್ಧಿಯಾಗುತ್ತದೆ. `ದುಡ್ಡೇ ದೊಡ್ಡಪ್ಪ’ ಎನ್ನುವುದು ಹಳೆಯ ಮಾತು. ಈಗೇನಿದ್ದರು `ದುಡಿಮೆಯೇ ದೊಡ್ಡಪ್ಪ’. ಹಾಗಾಗಿ ದುಡಿಮೆಗೆ ಪ್ರೋತ್ಸಾಹ ನೀಡುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಈ ವರ್ಷ 4 ಲಕ್ಷ ಹೆಣ್ಣು ಮಕ್ಕಳ ಸ್ವಯಂ ಉದ್ಯೋಗಕ್ಕೆ 500 ಕೋಟಿ ರೂ. ಸೇರಿ ಹೆಣ್ಣು ಮಕ್ಕಳ ಅಭಿ ವೃದ್ಧಿಗಾಗಿಯೇ ಒಟ್ಟು 43 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟು, ವಿವಿಧ ಕಾರ್ಯಕ್ರಮಗಳ ರೂಪಿಸಲಾಗಿದೆ. ಇದಕ್ಕೆ ಪೂರಕ ವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ `ಶಕ್ತಿಧಾಮ’ ಒತ್ತಾಸೆಯಾಗಿದೆ. ಈ ಸಂಸ್ಥೆಯ ಯಶಸ್ಸಿನೊಂದಿಗೆ ಇಂತಹ ಹಲವು ಸಂಸ್ಥೆಗಳು ಹುಟ್ಟಲಿ ಎಂದು ಆಶಿಸಿದರು.

ಸ್ತ್ರೀ ಶೋಷಣೆಗೆ ವಿಷಾಧ: ಈ ಕೇಂದ್ರಕ್ಕೆ `ಶಕ್ತಿಧಾಮ’ ಎಂಬ ಹೆಸರು ಸೂಕ್ತವಾಗಿದೆ. ಸ್ತ್ರೀ ಎಂದರೆ ಶಕ್ತಿ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷನೇ ಹೆಚ್ಚು ಶಕ್ತಿಶಾಲಿ ಎನ್ನುವು ದಿದೆ. ಆದರೆ 9 ತಿಂಗಳು ಮಗುವನ್ನು ಹೊರುವ ಶಕ್ತಿ ಮಹಿಳೆಗಷ್ಟೇ ಇದೆ. ತಾಯಿಯದ್ದು ಮಾತ್ರ ಜನ್ಮಪೂರ್ವ ಸಂಬಂಧ. ತಂದೆ, ಅಣ್ಣ-ತಮ್ಮ, ಅಕ್ಕ-ತಂಗಿ, ಸಂಬಂಧಿ, ಗುರು ಹೀಗೆ ಉಳಿದೆಲ್ಲಾ ಸಂಬಂಧಗಳು ಬೆಸೆದುಕೊಳ್ಳುವುದು ಜನ್ಮದ ನಂತರವೇ. ಆದರೆ ನಾವು ಭೂಮಿಗೆ ಬರಲು ಕಾರಣವಾದ ಸ್ತ್ರೀಶಕ್ತಿಯನ್ನೇ ಶೋಷಿಸುತ್ತಿರುವುದು ದುರ್ದೈವ ಹಾಗೂ ವಿಪರ್ಯಾಸ. ಅನಾದಿ ಕಾಲದಿಂದಲೂ ಸ್ತ್ರೀ ಶೋಷಣೆ ನಡೆದು ಬಂದಿದೆ. ಬದುಕಿನಲ್ಲಿ ಅಂತಃಕರಣವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವನೆ ಮೂಡುತ್ತದೆ. ಹೀಗೆ ಅಂತಃಕರಣದ ಕರುಳಬಳ್ಳಿ ಕಳೆದುಕೊಂಡ ಬಹಳಷ್ಟು ಮಕ್ಕಳು ಅನಾಥರಾಗಿ ಶೋಷಣೆಗೊಳಗಾಗಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.

ತಾಯಿ ಕರುಳಿನ ಫಲ: ಒಂದು ಕಡೆ ಎಲ್ಲವೂ ಸೃಷ್ಟಿಕರ್ತನ ಪರೀಕ್ಷೆ ಅನ್ನಿಸುತ್ತದೆ. ಈ ಪರೀಕ್ಷೆಯಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕೆಂಪಯ್ಯ ಹಾಗೂ ಸಮಾನ ಮನಸ್ಕರು ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿನ ಸನ್ನಿವೇಶಗಳಿಂದ ಪೊಲೀಸರು ಕಠಿಣ ಹೃದಯಿ ಗಳಾಗುವುದು ಸಹಜ. ಆದರೆ ಅವರಿಗೂ ಭಾವನೆಗಳಿರುತ್ತವೆ. ಹೀಗೆ ತಾಯಿ ಕರುಳಿನ ಕೆಂಪಯ್ಯ ನೊಂದ ಹೆಣ್ಣುಮಕ್ಕಳ ಕಂಡು ಮರುಗಿ ಸುಮ್ಮನಾಗಲಿಲ್ಲ. ಶೋಷಿತ, ಅನಾಥ ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸುವ ಚಿಂತನೆಯನ್ನು ಡಾ.ರಾಜ್‍ಕುಮಾರ್ ಎಂಬ ಶಕ್ತಿ ಎದುರು ನಿವೇದಿಸಿಕೊಂಡರು. ಜೊತೆಯಲ್ಲಿದ್ದ ಮಾತೃ ಪಾರ್ವತಮ್ಮ ರಾಜ್‍ಕುಮಾರ್ ಮನಸ್ಸು ಮಿಡಿಯಿತು. ಆ ಎರಡೂ ಶಕ್ತಿಗಳೂ ಕೆಂಪಯ್ಯ ಅವರ ಅಂತಃಕರಣಕ್ಕೆ ಒತ್ತಾಸೆಯಾಗಿದ್ದರಿಂದ `ಶಕ್ತಿಧಾಮ’ ಸಂಸ್ಥೆ ಹುಟ್ಟಿ, ಬೆಳೆದಿದೆ. ಸದ್ಯ ಗೀತಾ ಹಾಗೂ ಶಿವರಾಜ್‍ಕುಮಾರ್ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.

ಅನಾಥರೆನ್ನಬೇಡಿ: ಸುತ್ತೂರು ಶ್ರೀಗಳ ಆಶೀರ್ವಾದದೊಂದಿಗೆ ಆರಂಭವಾದ `ಶಕ್ತಿಧಾಮ’ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿದೆ. ನೊಂದ ಮಕ್ಕಳಿಗೆ ಆತ್ಮ ವಿಶ್ವಾಸ ತುಂಬುತ್ತಿರು ವುದು ಬಹಳ ದೊಡ್ಡ ಸೇವೆ. ದೇವರನ್ನು ಎಲ್ಲೋ ಹುಡುಕಬೇಕಿಲ್ಲ. ಮಕ್ಕಳೇ ದೇವರು. ಅನೇಕ ಕಾರಣಗಳಿಂದ ಪೋಷಕರಿಂದ ದೂರವಾಗಿರುವ ಮಕ್ಕಳನ್ನು ಅನಾಥರೆನ್ನಬೇಡಿ. ಇವರನ್ನು ದೇವರ ಮಕ್ಕಳೆಂದು ಕರೆಯಿರಿ. ಹಿಂದೆ ಡಾ.ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕಮಾರ್, ಈಗ ಶಿವರಾಜ್‍ಕುಮಾರ್ ಹಾಗೂ ಗೀತಾ ಶಿವರಾಜ್‍ಕುಮಾರ್ ತಂದೆ-ತಾಯಿಯಾಗಿ ಸಿಕ್ಕಿರುವುದು ಈ ಮಕ್ಕಳ ಪುಣ್ಯ. ಇಂತಹ ಹಲವು ಮಕ್ಕಳಿಗೆ ಸಹಾಯ ಮಾಡಿದ್ದ ನಮ್ಮ ಅಪ್ಪು, ಪುನೀತ್, `ಶಕ್ತಿಧಾಮ’ಕ್ಕೆ ಸದಾ ಶಕ್ತಿ ತುಂಬುತ್ತಾರೆ ಎಂದರು.

ಬದುಕಿನ ಬ್ಯಾಲೆನ್ಸ್: ಸರ್ಕಾರ ಹಾಗೂ ಸಮಾಜ ಶೋಷಿತರು, ದುರ್ಬಲರನ್ನು ಮೇಲೆತ್ತಿ ಮುನ್ನಡೆಸಬೇಕು. ಸಾಮಾಜಿಕ ನ್ಯಾಯ ಎನ್ನುವುದು ರಾಜಕಾರಣ ಹಾಗೂ ಮಾತಿಗಷ್ಟೇ ಸೀಮಿತವಾಗಬಾರದು. ತಾಯಿ-ತಂದೆ, ಬಂಧುಗಳು, ಗುರುಗಳು ಹೀಗೆ ಹಲವರ ಸಹಾಯ, ಸಹಕಾರ, ಮಾರ್ಗದರ್ಶನದಿಂದ ಉತ್ತಮ ಜೀವನ ಕಟ್ಟಿಕೊಳ್ಳುವ ನಾವು, ಅದೆಲ್ಲವನ್ನೂ ಪ್ರೀತಿ, ವಿಶ್ವಾಸ, ವಾತ್ಸಲ್ಯ ಸಹಿತವಾಗಿ ಸಮಾಜಕ್ಕೆ ಹಿಮ್ಮರಿಳಿಸಿದಾಗ ಮಾತ್ರ ಬದುಕಿನ ಬ್ಯಾಲೆನ್ಸ್ ಶೀಟ್ ಸರಿಯಾಗುತ್ತದೆ. ಅಪ್ಪು ಇದಕ್ಕೆ ಉದಾಹರಣೆ. ನಾನು ಕಲಿತ ಶಿಕ್ಷಣ ಸಂಸ್ಥೆಯ ಮೊದಲ ಮಹಿಳಾ ಇಂಜಿನಿಯರ್ ಸುಧಾಮೂರ್ತಿಯವರೂ ಹಲವು ಸಂಸ್ಥೆ ಗಳಿಗೆ ನೆರವಾಗಿದ್ದಾರೆ. ಅವರ ಪತಿ ನಾರಾಯಣಮೂರ್ತಿ ಮೈಸೂರಿನವರಾಗಿ ರುವ ಕಾರಣ ಈ ಊರಿನ ಬಗ್ಗೆ ವಿಶೇಷ ಪ್ರೀತಿ ಇದೆ ಎಂದು ಅವರ ಸೇವೆಯನ್ನು ಶ್ಲಾಘಿಸಿದರು.

ಅಂತಃಕರಣದ ಬಜೆಟ್: ನಮ್ಮ ಸರ್ಕಾರ ಅಂತಃಕರಣದ ಸೂಕ್ಷ್ಮತೆಯ ಬಜೆಟ್ ನೀಡಿದೆ. ದೊಡ್ಡ ಯೋಜನೆಗಳು ಮಾತ್ರವಲ್ಲ, ವೃದ್ಧರ ಆರೋಗ್ಯ ಸೇವೆ, ಕಣ್ಣಿನ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ರೋಗಿಗಳಿಗೆ, ಕಿಡ್ನಿ ವೈಫಲ್ಯಕ್ಕೆ ಡಯಾಲಿಸಿಸ್, ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳ ಮಾಸಾಶನ 3ರಿಂದ 10 ಸಾವಿರಕ್ಕೆ ಹೆಚ್ಚಳ, ತೃತೀಯ ಲಿಂಗಿಗಳಿಗೆ ಆಶ್ರಯ ಮನೆ ಯೋಜನೆಯಲ್ಲಿ ಮೀಸಲಾತಿ, ಮಕ್ಕಳ ಆರೋಗ್ಯಕ್ಕೆ ಆದ್ಯತೆ, ಹೀಗೆ ಅಂತಃ ಕರಣದ ನೆಲೆಗಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಮೈಸೂರಿನ ಕೆ.ಆರ್. ಆಸ್ಪತ್ರೆ ನವೀಕರಣಕ್ಕೆ 85 ಕೋಟಿ ರೂ., ವಿಮಾನ ನಿಲ್ದಾಣ ರನ್‍ವೇ ವಿಸ್ತರಣೆಗೆ ಭೂಸ್ವಾಧೀನಕ್ಕೆ 185 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಎಸ್.ಎ.ರಾಮದಾಸ್ ಮಾತನಾಡಿ, ಸಂಸ್ಥೆಯ ಸೇವೆಯನ್ನು ಬಣ್ಣಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಎಲ್.ನಾಗೇಂದ್ರ, ಸಿ.ಎಸ್.ನಿರಂಜನಕುಮಾರ್, ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್, ಇನ್ಫೋಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಷಾಜಿ ಮ್ಯಾಥ್ಯೂ, ಶಕ್ತಿಧಾಮದ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್, ಉಪಾಧ್ಯಕ್ಷ ಕೆಂಪಯ್ಯ, ಟ್ರಸ್ಟಿ ಜಿ.ಎಸ್.ಜಯದೇವ, ನಟ ಶಿವರಾಜ್‍ಕುಮಾರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಕಾಡಾ ಅಧ್ಯಕ್ಷ ಎನ್.ಶಿವಲಿಂಗಯ್ಯ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಲಿ ಅಧ್ಯಕ್ಷ ಕೃಷ್ಣಪ್ಪಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್‍ಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಡಿಸಿ ಡಾ.ಬಗಾದಿ ಗೌತಮ್, ನಟ ಸಾಧು ಕೋಕಿಲಾ ಸೇರಿದಂತೆ ಹಲವು ಗಣ್ಯರು, ಡಾ.ರಾಜ್ ಕುಟುಂಬದವರು, ಕಲಾವಿದರು ಸಮಾರಂಭದಲ್ಲಿದ್ದರು.

Translate »