ಕೊರೊನಾ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಂಗಡ ಪತ್ರದಲ್ಲೇ ಮಾರ್ಪಾಡು ಅಭಿವೃದ್ಧಿ ಕಾಮಗಾರಿಗಳಿಗೆ ಕಡಿವಾಣ ಹಾಕಲು ಸಿಎಂ ಯಡಿಯೂರಪ್ಪ ನಿರ್ಧಾರ
ಮೈಸೂರು

ಕೊರೊನಾ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಂಗಡ ಪತ್ರದಲ್ಲೇ ಮಾರ್ಪಾಡು ಅಭಿವೃದ್ಧಿ ಕಾಮಗಾರಿಗಳಿಗೆ ಕಡಿವಾಣ ಹಾಕಲು ಸಿಎಂ ಯಡಿಯೂರಪ್ಪ ನಿರ್ಧಾರ

May 13, 2020

ಬೆಂಗಳೂರು, ಮೇ 12(ಕೆಎಂಶಿ)- ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮುಂಗಡ ಪತ್ರವನ್ನೇ ಮಾರ್ಪಾಡು ಮಾಡಲು ಮುಂದಾಗಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಹಣಕಾಸು ಇಲಾಖಾ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದು, ಕೆಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಿದ್ದಾರೆ.

ಕೋವಿಡ್-19ನ್ನು ಮುಂದಿನ ಡಿಸೆಂಬರ್‍ವರೆಗೆ ಎದುರಿಸಲು ಹತ್ತು ಸಾವಿರ ಕೋಟಿ ರೂ. ಅಗತ್ಯವಿದೆ. ಈ ಹಣ ಹೊಂದಾಣಿಕೆ ಮಾಡುವುದರ ಜೊತೆಗೆ ರೈತರು ಮತ್ತು ಶ್ರಮಿಕ ವರ್ಗಕ್ಕೆ ಮತ್ತಷ್ಟು ಪರಿಹಾರ ಘೋಷಣೆ ಮಾಡುವ ಉದ್ದೇಶ ದಿಂದ ತಮ್ಮ ಮುಂಗಡ ಪತ್ರವನ್ನೇ ಬದಲಾಯಿಸಲಿದ್ದಾರೆ.

ಕಳೆದ ಮಾರ್ಚ್‍ನಲ್ಲಿ 2020-21ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿದ ಮುಖ್ಯಮಂತ್ರಿಯವರು ಯೋಜನಾ ಗಾತ್ರವನ್ನು 2.37 ಲಕ್ಷ ಕೋಟಿಗೆ ನಿಗದಿಪಡಿಸಿ, ಇಡೀ ವರ್ಷಕ್ಕೆ ಸದನದ ಅನುಮೋದನೆ ಪಡೆದುಕೊಂಡರು.

ಅನುಮೋದನೆ ಪಡೆದ ಕೆಲವೇ ದಿನಗಳಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡಿ, ಪ್ರಧಾನಿಯವರೇ ಎರಡು ತಿಂಗಳ ಸಮಯ ಮೂರು ಹಂತದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದರು. ಇದರಿಂದ ರಾಜ್ಯದ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಮಾಹಿತಿ ತಂತ್ರಜ್ಞಾನ ಹೊರತುಪಡಿಸಿದರೆ, ಉಳಿದ ವಾಣಿಜ್ಯ ಮತ್ತು ಕೈಗಾರಿಕೆ ಚಟುವಟಿಕೆ ಸ್ಥಗಿತಗೊಂಡಿತು.

ಕೃಷಿ ವಲಯ ಹೊರತುಪಡಿಸಿದರೆ, ಉಳಿದ ಎಲ್ಲಾ ವಲಯವನ್ನು ಲಾಕ್‍ಡೌನ್ ವ್ಯಾಪ್ತಿಗೆ ತಂದಿದ್ದರಿಂದ ಸಂಪನ್ಮೂಲ ಕ್ರೋಢೀಕರಣ ಶೇ.5ಕ್ಕೆ ಕುಸಿಯಿತು. ಮೊದಲ ಬಾರಿಗೆ ಮುಖ್ಯಮಂತ್ರಿಯವರೇ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದನ್ನು ಬಹಿರಂಗ ಪಡಿಸಿದ್ದಲ್ಲದೆ, ತಮಗೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿಯಾಗಿ ಸಾಲ ಪಡೆದು, ತಾತ್ಕಾಲಿಕವಾಗಿ ಸಂಕಷ್ಟದಿಂದ ಹೊರ ಬರುವ ಪ್ರಯತ್ನ ಮಾಡಿದರು.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಮತ್ತು ಈ ರೋಗಕ್ಕೆ ಸಿಲುಕಿದವರ ಚಿಕಿತ್ಸೆಗಾಗಿ ಪ್ರತ್ಯೇಕ ನಿಧಿಯನ್ನೇ ಸ್ಥಾಪಿಸಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ. ಅವರು ಮಾಡಿರುವ ಅಂದಾಜಿನ ಪ್ರಕಾರವೇ ಮುಂದಿನ ಡಿಸೆಂಬರ್‍ವರೆಗೆ ಇದರ ಖರ್ಚು-ವೆಚ್ಚವೇ ಹತ್ತು ಸಾವಿರ ಕೋಟಿ ರೂ. ಆಗಬಹುದು. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೃಷಿ ಮತ್ತು ಶ್ರಮಿಕ ವರ್ಗಕ್ಕೆ ಒಂದಿಷ್ಟು ಪರಿಹಾರ ನೀಡಬೇಕಾಗಿದೆ. ಇದಕ್ಕೆ ಹಣ ಜೋಡಿಸಲು ಅವರ ಬಳಿ ಬೇರೆ ಬಾಬ್ತು ಇಲ್ಲ. ಹೀಗಾಗಿ ತಮ್ಮ ಮುಂಗಡ ಪತ್ರದಲ್ಲೇ ಕೆಲವು ಬದಲಾವಣೆ ಮಾಡಿ, ಬೇರೆ ಇಲಾಖೆಗೆ ನಿಗದಿಪಡಿಸಿದ ಹಣವನ್ನು ಆರೋಗ್ಯ, ಕೃಷಿ, ಹಾಗೂ ಪರಿಹಾರ ಕಲ್ಪಿಸುವ ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.

ಲಾಕ್‍ಡೌನ್ ನಂತರ ಎಲ್ಲಾ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿವೆ. ಅಷ್ಟೇ ಅಲ್ಲ ಮುಂಗಡ ಪತ್ರದಲ್ಲಿ ಹಣ ನಿಗದಿಪಡಿಸಿದ್ದರೂ, ಆರೋಗ್ಯ ಮತ್ತು ಕೃಷಿ ವಲಯ ಹೊರತುಪಡಿಸಿ, ಉಳಿದ ಯೋಜನೆಗಳಿಗೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ.

ಸರ್ಕಾರಿ ನೌಕರರ ವೇತನ, ಪಿಂಚಣಿ, ಸಾಲ ಮತ್ತು ಬಡ್ಡಿ ಪಾವತಿ, ಕಚೇರಿ ನಿರ್ವಹಣಾ ವೆಚ್ಚಗಳಿಗೆ ಮಾತ್ರ ಹಣ ಬಿಡುಗಡೆಯಾಗಿದೆ. ಕಳೆದ ತಿಂಗಳಲ್ಲೇ ಸರ್ಕಾರಿ ನೌಕರರ ವೇತನ ಕಡಿತ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಮುಖ್ಯಮಂತ್ರಿಯವರು ನನ್ನ ಆಡಳಿತಾವಧಿಯಲ್ಲಿ ಈ ವರ್ಗಕ್ಕೆ ವೇತನ ಕಡಿತ ಮಾಡಬಾರದೆಂದು ಆರ್‍ಬಿಐನಿಂದ ಸಾಲ ಪಡೆದುಕೊಂಡರು.

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕರ್ನಾಟಕದಲ್ಲಿ ಲಾಕ್‍ಡೌನ್ ತೆರವುಗೊಳಿಸುವಂತೆ ಪ್ರಧಾನಿಯವರನ್ನು ನಿನ್ನೆ ಕೋರಿದ ಬೆನ್ನಿಂದೆ ಅಧಿಕಾರಿಗಳ ಜೊತೆ ಸಮಾಲೋಚಿಸಿ, ಮುಂಗಡ ಪತ್ರದಲ್ಲಿ ಆಂತರಿಕ ಬದಲಾವಣೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದರು. ಇದರಿಂದ ನೀರಾವರಿ, ಲೋಕೋಪಯೋಗಿ, ಶಿಕ್ಷಣ ಸೇರಿದಂತೆ ಕೆಲವು ಇಲಾಖೆಗಳ ಯೋಜನೆಯ ಹಣವನ್ನು ಬೇರೆ ಇಲಾಖೆಗಳಿಗೆ ಮರು ವಿಂಗಡಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಣವನ್ನು ಮಾರ್ಪಡಿಸಲು ಸಾಧ್ಯವಾಗದ ಕಾರಣ ಅದರಲ್ಲಿಯೇ ಆರೋಗ್ಯ ಮತ್ತು ಶ್ರಮಿಕ ವರ್ಗಕ್ಕೆ ಪರಿಹಾರ ಕಲ್ಪಿಸುವ ತೀರ್ಮಾನಕ್ಕೆ ಬಂದಿದ್ದಾರೆ.

Translate »