ನ.೨ಕ್ಕೆ ಕೆಆರ್‌ಎಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಸಿದ್ಧತಾ ಕ್ರಮಗಳ ಪರಿಶೀಲಿಸಿದ ಜಿಲ್ಲಾಧಿಕಾರಿ
ಮೈಸೂರು

ನ.೨ಕ್ಕೆ ಕೆಆರ್‌ಎಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಸಿದ್ಧತಾ ಕ್ರಮಗಳ ಪರಿಶೀಲಿಸಿದ ಜಿಲ್ಲಾಧಿಕಾರಿ

October 31, 2021

ಶ್ರೀರಂಗಪಟ್ಟಣ,ಅ.೩೦(ವಿನಯ್‌ಕಾರೇಕುರ)-ತಾಲೂಕಿನ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ತುಂಬಿದ್ದು, ನ.೨ರಂದು ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಯಾಗಿದ್ದರಿಂದ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ನಲ್ಲಿ ಜಲಾಶಯ ಭರ್ತಿ ಯಾಗುತ್ತಿತ್ತು. ೧೧ ವರ್ಷದ ಬಳಿಕ ಅಕ್ಟೋ ಬರ್ ಅಂತ್ಯದಲ್ಲಿ ಜಲಾಶಯ ತುಂಬಿದೆ. ಈ ಬಾರಿ ಕೆಆರ್‌ಎಸ್ ಭರ್ತಿ ಯಾಗದು ಎಂಬ ಆತಂಕದ ಹಿನ್ನೆಲೆಯಲ್ಲಿ ಅ.೭ರಂದು ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಕೆಆರ್‌ಎಸ್ ಡ್ಯಾಂ ಬಳಿ ಹೋಮ-ಹವನ ನಡೆಸಲಾಗಿತ್ತು. ಪೂಜೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಟುಂಬ ಸಮೇತ ಪಾಲ್ಗೊಂಡಿದ್ದರು. ನಂತರ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಈಗ ಕೆಆರ್‌ಎಸ್ ಭರ್ತಿಯಾಗಿದೆ.
ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲು ಕೆಆರ್‌ಎಸ್‌ಗೆ ಆಗಮಿಸುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಅಶ್ವಥಿ ಜಲಾಶಯಕ್ಕೆ ಭೇಟಿ ನೀಡಿ, ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು. ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಡಾ.ಅಶ್ವಥಿ, ಕೆ.ಆರ್.ಸಾಗರ ಹೆಲಿಪ್ಯಾಡ್, ಬೃಂದಾವನದ ಕಾವೇರಿ ಪ್ರತಿಮೆ ಆವರಣ, ಬಾಗಿನ ಅರ್ಪಿಸುವ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಕಂದಾಯ ಮತ್ತು ಕಾವೇರಿ ನೀರಾವರಿನಿಗಮದ ಅಧಿಕಾರಿಗಳಿಂದ ಹಿಂದಿನ ಬಾಗಿನ ಕಾರ್ಯಕ್ರಮದ ಕುರಿತು ಮಾಹಿತಿ ಪಡೆದರು. ಶೀಘ್ರವಾಗಿ ಕೆ.ಆರ್.ಸಾಗರ-ಶ್ರೀರಂಗಪಟ್ಟಣ ರಸ್ತೆ ದುರಸ್ತಿಗೆ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.

ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿ ಡಾ.ಶಿವಾನಂದಮೂರ್ತಿ, ನ.೨ರಂದು ಮುಖ್ಯಮಂತ್ರಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಇಂದು ಜಿಲ್ಲಾಧಿಕಾರಿಗಳು ಕೆಆರ್‌ಎಸ್‌ಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದು, ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಈಗಾಗಲೇ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಕೈಗೊಂಡಿದ್ದು, ಸಿಎಂ ಬಂದಿಳಿಯುವ ಕೆ.ಆರ್.ಸಾಗರದ ಹೆಲಿಪ್ಯಾಡ್ ಪ್ರದೇಶವನ್ನು ಶುಚಿಗೊಳಿಸಲಾಗಿದೆ. ಮುಖ್ಯಮಂತ್ರಿಗಳ ಆಗಮನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ನ.೨ ರಂದು ಬೆಳಗ್ಗೆ ೧೧ ಗಂಟೆಗೆ ಮೊದಲು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ೧ ಗಂಟೆಗೆ ಕೆಆರ್‌ಎಸ್‌ನಲ್ಲಿ ಕಾವೇರಿ ಮಾತೆಗೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸ ಲಿದ್ದು, ಸಂಪ್ರಾದಾಯದAತೆಯೇ ಈ ಬಾರಿಯೂ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವೇದ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವೈದಿಕರು ಪೂಜಾ ವಿಧಿ-ವಿಧಾನ ನೆರವೇರಿಸುವರು ಎಂದು ಅಧೀಕ್ಷಕ ಇಂಜಿನಿಯರ್ ವಿಜಯ್‌ಕುಮಾರ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಶ್ವೇತಾ, ಕಾವೇರಿ ನೀರಾವರಿ ನಿಗಮದ ಕಾರ್ಯ ಪಾಲಕ ಅಭಿಯಂತರ ರಾಮಮೂರ್ತಿ, ರಾಜಸ್ವ ನಿರೀಕ್ಷಕ ಉಮೇಶ್ ಇದ್ದರು.

Translate »