ಪಿರಿಯಾಪಟ್ಟಣ ಮಸಣಿಕಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ನಕಲಿ ರಸೀದಿ ಮೂಲಕ ಹಣ ಸಂಗ್ರಹ
ಮೈಸೂರು

ಪಿರಿಯಾಪಟ್ಟಣ ಮಸಣಿಕಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ನಕಲಿ ರಸೀದಿ ಮೂಲಕ ಹಣ ಸಂಗ್ರಹ

May 14, 2019

ಪಿರಿಯಾಪಟ್ಟಣ: ತಾಲೂಕಿನ ಶಕ್ತಿ ದೇವತೆ ಇತಿಹಾಸ ಪ್ರಸಿದ್ಧ ಮಸಣಿಕಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯು ನಕಲಿ ರಸೀದಿ ಮೂಲಕ ಭಕ್ತರಿಂದ ಹಣ ವಸೂಲಿ ಮಾಡುತ್ತಿ ರುವುದು ಬೆಳಕಿಗೆ ಬಂದಿದ್ದು, ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಅವರು ನಕಲಿ ರಸೀದಿ ಪುಸ್ತಕ ವಶಪಡಿಸಿ ಕೊಂಡಿದ್ದಾರೆ. ನಕಲಿ ರಸೀದಿ ಪುಸ್ತಕ ದೊರೆತ ಹಿನ್ನೆಲೆ ಯಲ್ಲಿ ಇಂದು ಸಂಜೆ ತಹಸೀಲ್ದಾರರು ತಾಲೂಕು ಆಡ ಳಿತ ಭವನದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಕರೆದು ಸಮಿತಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ನಾಳೆ ಮಧ್ಯಾಹ್ನ 3 ಗಂಟೆ ಯೊಳಗಾಗಿ ನಕಲಿ ರಸೀದಿ
ಪುಸ್ತಕಗಳ ಮೂಲಕ ಸಂಗ್ರಹವಾಗಿರುವ ಹಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದರು. ಈ ವೇಳೆ ಹಣ ಸಂಗ್ರಹದ ಸಂಪೂರ್ಣ ಮಾಹಿತಿಯನ್ನು ಒದಗಿಸುವುದಾಗಿ ಸಮಿತಿ ಅಧ್ಯಕ್ಷ ಎಸ್.ಆರ್.ಎಸ್. ಗೌಡ ಮತ್ತು ಕಾರ್ಯದರ್ಶಿ ಕಾಂತರಾಜು ಅವರು ತಹಸೀಲ್ದಾರರಿಗೆ ತಿಳಿಸಿದರು.

ವಿವರ: ತಾಲೂಕಿನ ಇತಿಹಾಸ ಪ್ರಸಿದ್ಧ ಮಸಣಿಕಮ್ಮನವರ ದೇವಸ್ಥಾನದ ಜೀರ್ಣೋ ದ್ಧಾರಕ್ಕಾಗಿ ಯೋಜನೆ ರೂಪಿಸಿ ಸರ್ಕಾರಕ್ಕೆ ನೀಡಲಾಗಿತ್ತು. ಸ್ಥಳೀಯ ಶಾಸಕರ ನೇತೃತ್ವ ದಲ್ಲಿ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿತ್ತು. ಅದಕ್ಕಾಗಿ ಎಸ್.ಆರ್.ಎಸ್. ಗೌಡ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು. ಜೀರ್ಣೋದ್ಧಾರಕ್ಕೆ ಭಕ್ತರಿಂದಲೂ ಹಣ ಸಂಗ್ರಹಿಸುವ ಪ್ರಸ್ತಾವನೆಯನ್ನು ಮುಂದಿಟ್ಟಾಗ ತಾಲೂಕು ಆಡಳಿತದಿಂದ ಜೀರ್ಣೋ ದ್ಧಾರ ಸಮಿತಿಗೆ ತಹಸೀಲ್ದಾರರ ಮೊಹರು ಮತ್ತು ಸಹಿ ಇರುವ 13 ರಸೀದಿ ಪುಸ್ತಕಗಳನ್ನು ನೀಡಲಾಗಿತ್ತು. ಆದರೆ, ಸಮಿತಿಯವರು ನಕಲಿ ರಸೀದಿಗಳನ್ನು ನೀಡಿ ಹಣ ಸಂಗ್ರಹಿಸುತ್ತಿ ದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದವು. ಇಂದು ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಅವರು, ದೇವಸ್ಥಾನಕ್ಕೆ ಭೇಟಿ ನೀಡಿದಾಗ 21ನೇ ಸಂಖ್ಯೆಯ ರಸೀದಿ ಪುಸ್ತಕದ ಮೂಲಕ ಹಣ ಸಂಗ್ರಹಿಸುತ್ತಿರುವುದು ಪತ್ತೆಯಾಯಿತು. ತಕ್ಷಣವೇ ಆ ರಸೀದಿ ಪುಸ್ತಕವನ್ನು ವಶಪಡಿಸಿಕೊಂಡ ತಹಸೀಲ್ದಾರರು ಸಂಜೆ ಸಮಿತಿಯ ಸಭೆ ಕರೆದರು.

ಈ ಸಭೆಯಲ್ಲಿ ಚರ್ಚೆ ನಡೆದಾಗ ತಾಲೂಕು ಆಡಳಿತ ನೀಡಿದ್ದ 13 ರಸೀದಿ ಪುಸ್ತಕಗಳು ಖಾಲಿಯಾದ ನಂತರ ಸಮಿತಿಯವರೆ ನಕಲಿ ಪುಸ್ತಕಗಳನ್ನು ಮುದ್ರಿಸಿ, ಅದಕ್ಕೆ ತಹಸೀಲ್ದಾರರ ನಕಲಿ ಮೊಹರನ್ನು ಹಾಕಿ ಭಕ್ತರಿಂದ ಹಣ ಸಂಗ್ರಹಿಸುತ್ತಿದ್ದ ವಿಚಾರ ಬೆಳಕಿಗೆ ಬಂತು. ಈ ವೇಳೆ ತಹಸೀಲ್ದಾರರು ‘ರಸೀದಿ ಪುಸ್ತಕ ಮುದ್ರಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು? ತಹಶೀಲ್ದಾರರ್ ಸೀಲ್ ಅನ್ನು ನೀವು ಹೇಗೆ ಬಳಸಿದ್ದೀರಿ? ಎಂದು ಸಮಿತಿಯವರನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ತಪ್ಪೊಪ್ಪಿಕೊಂಡ ಸಮಿತಿ ಅಧ್ಯಕ್ಷ ಎಸ್.ಆರ್.ಎಸ್. ಗೌಡ ‘ನಮ್ಮದು ತಪ್ಪಾಗಿದೆ. ನಾವು ದೇವಾಲಯದ ಅಭಿವೃದ್ಧಿಗಾಗಿ ಸ್ವಂತ ಹಣವನ್ನೂ ಖರ್ಚು ಮಾಡಿಕೊಂಡಿ ದ್ದೇವೆ. ತಿಳಿಯದೇ ಸಣ್ಣ ತಪ್ಪು ಮಾಡಿದ್ದೇವೆ. ದಯವಿಟ್ಟು ಕ್ಷಮಿಸಿ’ ಎಂದು ಕೇಳಿ ಕೊಂಡರು. ಇದೇ ವೇಳೆ ಮಾತನಾಡಿದ ಸಮಿತಿ ಸದಸ್ಯ ಪಿ.ಎಸ್. ವಿಷಕಂಠಯ್ಯ ‘ಈ ವಿಷಯ ಸಮಿತಿ ಸದಸ್ಯರ ಗಮನಕ್ಕೆ ಬರಲೇ ಇಲ್ಲ. ನಮಗೆ ಈಗ ತಾನೇ ಗೊತ್ತಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ಸಮಿತಿಯ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡಬೇಡಿ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿ’ ಎಂದು ಹೇಳಿದರು.

ಅಂತಿಮವಾಗಿ ತಹಸೀಲ್ದಾರ್ ಶ್ವೇತಾ ಅವರು, ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಗಳಿಗೆ ಮಾಹಿತಿ ರವಾನಿಸಲಾಗಿದೆ. ನಕಲಿ ಸೀಲ್ ಮತ್ತು 21ನೇ ಸಂಖ್ಯೆಯ ರಸೀದಿ ಪುಸ್ತಕದವರೆಗೆ ಸಂಗ್ರಹವಾಗಿರುವ ಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾಳೆ ಮಧ್ಯಾಹ್ನ 3 ಗಂಟೆಯೊಳಗೆ ನೀಡಬೇಕು. ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡಲಾಗು ವುದು ಎಂದು ಎಚ್ಚರಿಕೆ ನೀಡಿದರು. ಅದಕ್ಕೆ ಸಮಿತಿ ಅಧ್ಯಕ್ಷ ಎಸ್‍ಆರ್‍ಎಸ್ ಗೌಡ ಮತ್ತು ಕಾರ್ಯದರ್ಶಿ ಕಾಂತರಾಜು ಒಪ್ಪಿಕೊಂಡರು. ಸಭೆಯಲ್ಲಿ ಸಮಿತಿ ಸದಸ್ಯರಾದ ಪುರಸಭಾ ಸದಸ್ಯ ರವಿ, ಷಣ್ಮುಖರಾವ್, ನಾಗಪ್ಪ, ಗ್ರಾಮಸ್ಥರಾದ ಸುಬ್ರಹ್ಮಣ್ಯ, ಚಂದ್ರು, ಮಹೇಶ್, ಶಿರಸ್ತೇದಾರ್ ಪ್ರಕಾಶ್, ರೆವಿನ್ಯೂ ಇನ್ಸ್‍ಪೆಕ್ಟರ್ ಮಂಜು ಮತ್ತಿತರರಿದ್ದರು.

Translate »