ದ್ವೇಷ, ಕಿಡಿಗೇಡಿತನ ನನ್ನ ರಕ್ತದಲ್ಲಿಲ್ಲ: ಸಿದ್ದರಾಮಯ್ಯಗೆ ವಿಶ್ವನಾಥ್ ತಿರುಗೇಟು
ಮೈಸೂರು

ದ್ವೇಷ, ಕಿಡಿಗೇಡಿತನ ನನ್ನ ರಕ್ತದಲ್ಲಿಲ್ಲ: ಸಿದ್ದರಾಮಯ್ಯಗೆ ವಿಶ್ವನಾಥ್ ತಿರುಗೇಟು

May 14, 2019

ಬೆಂಗಳೂರು: ರಾಜಕೀಯ ದ್ವೇಷ ಮತ್ತು ಕಿಡಿಗೇಡಿತನ ಬುದ್ಧಿ ತಮ್ಮ ರಕ್ತದಲ್ಲಿಲ್ಲ. ಒಂದು ವೇಳೆ ಇಂತಹ ಬುದ್ಧಿ ಇದ್ದಿದ್ದರೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುತ್ತಿರಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಸುಭದ್ರ ಸರ್ಕಾರ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂಬ ಬಗ್ಗೆ ಕಾಂಗ್ರೆಸ್ಸಿಗರು ಕೂಗೆಬ್ಬಿಸಿದ್ದರಿಂದ ಮೈತ್ರಿ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ. ಮೈತ್ರಿಗೆ ಧಕ್ಕೆಯಾಗುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದ್ದಲ್ಲಿ ಆ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಿ ಎಂದರು.

ಸಮನ್ವಯ ಸಮಿತಿ ಅಪೂರ್ಣ ವಾಗಿದೆ. ಕಾಂಗ್ರೆಸ್, ಜೆಡಿಎಸ್ ಅಧ್ಯಕ್ಷರಿಲ್ಲದ ಸಮಿತಿಯಲ್ಲಿ ಸಮನ್ವಯತೆಯೇ ಇಲ್ಲ. ರಾಜಕಾರಣದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಸಿದ್ದರಾಮಯ್ಯ ಸಮಿತಿಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಬೇಕು. ಎರಡೂ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒಟ್ಟಿಗೆ ಚರ್ಚೆ ನಡೆಸಿ ಮೈತ್ರಿ ಸರ್ಕಾರವನ್ನು ನಡೆಸಿಕೊಂಡು ಹೋಗಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು. ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ದೇವೇಗೌಡರ ಮನೆ ಬಾಗಿಲನ್ನು ತಟ್ಟಿದ್ದು ಕಾಂಗ್ರೆಸ್ಸಿಗರೇ. 20:30 ಸೂತ್ರದಡಿ ಸಚಿವರು, ಅಧಿಕಾರಿಗಳ ನೇಮಕ ಮಾಡಿದ್ದು ಕಾಂಗ್ರೆಸ್ ಪಕ್ಷವೇ.

ಹೀಗಿದ್ದರೂ ವಿನಾಕಾರಣ ಜೆಡಿಎಸ್ ನಾಯಕರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರಿಗೆ ಏನು ಸಮಸ್ಯೆ ಯಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಬಜೆಟ್‍ನಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಸಮಿತಿ ರಚಿಸಲಾಗಿದ್ದು, ಇನ್ನೂ ಕಾರ್ಯಕ್ರಮಗಳ ರೂಪರೇಷೆ ಸಿದ್ಧವಾಗಿಲ್ಲ ಎಂದರು.

ಕುಮಾರಸ್ವಾಮಿ, ದೇವೇಗೌಡರ ಮೂಲಕ ವಿಶ್ವನಾಥ್ ಹೇಳಿಕೆಗಳನ್ನು ನೀಡುತ್ತಿದ್ದಾರೆಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, 40 ವರ್ಷದಿಂದ ರಾಜಕೀಯದಲ್ಲಿರುವ ತಾವು ದಡ್ಡರಲ್ಲ. ದೇವರಾಜ ಅರಸು ಗರಡಿಯಲ್ಲಿ ಬೆಳೆದು ಬಂದಿರುವ ತಮಗೆ ಯಾರಿಂದಲೂ ಹೇಳಿಸಿಕೊಂಡು ಮಾತನಾಡುವ ಅಗತ್ಯವಿಲ್ಲ. ಯಾರನ್ನೋ ಮೆಚ್ಚಿಸಲೆಂದೂ ಹೇಳಿಕೆಗಳನ್ನು ಕೊಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಮೇ 24 ರಂದು ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸಮನ್ವಯ ಸಮಿತಿ ಪುನಾರಚನೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸೇರಿದಂತೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಜೆಡಿಎಸ್ ನಾಯಕರ ಸಭೆ ಕರೆಯಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.

Translate »