ವಿಶ್ವನಾಥ್ ಸಂಪುಟ ಸೇರ್ಪಡೆ ಸಾಧ್ಯತೆ
ಮೈಸೂರು

ವಿಶ್ವನಾಥ್ ಸಂಪುಟ ಸೇರ್ಪಡೆ ಸಾಧ್ಯತೆ

June 12, 2019

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ಅಡ ಗೂರು ಎಚ್.ವಿಶ್ವನಾಥ್ ಅವರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.

ಅವರ ರಾಜೀನಾಮೆ ಅಂಗೀಕರಿಸಿ, ಆ ಸ್ಥಾನಕ್ಕೆ ಅವರದೇ ಸಮುದಾಯದ ಸಹಕಾರಿ ಸಚಿವರಾಗಿ ರುವ ಬಂಡೆಪ್ಪ ಕಾಶೆಂಪೂರ್ ಅವರನ್ನು ತರುವುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಲೋಚನೆ ಇದ್ದಂತಿದೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರೊಂದಿಗೆ ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದು, ಈ ಬೆಳವಣಿಗೆ ನಂತರ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಸಹ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ರಾಜೀನಾಮೆ ಹಿಂದೆ ಪಡೆಯುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಅವರು ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಅಲ್ಪಸಂಖ್ಯಾತರೊಬ್ಬರಿಗೆ ಅವಕಾಶ ಮಾಡಿಕೊಡ ಬೇಕೆಂದು ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಮಂತ್ರಿ ಮಂಡಲದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿದ್ದಾರೆ. ನೆರೆಯ ಆಂಧ್ರ ಮತ್ತು ತೆಲಂಗಾಣದಲ್ಲಿ ಆಯಾ ಪಕ್ಷಗಳೂ ಈ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಮತ ನೀಡಿಲ್ಲ ಎಂದು ಆ ಸಮುದಾಯ ವನ್ನು ದೂರ ಇಡುವುದು ಬೇಡ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳೇ ಜೆಡಿಎಸ್‍ನಿಂದ ಹೆಚ್ಚು ಆಯ್ಕೆಗೊಂಡಿದ್ದಾರೆ. ಈ ವಿಷಯವನ್ನು ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರೇ, ಸ್ಥಳೀಯ ಸಂಸ್ಥೆಗಳಲ್ಲಿ ವಿಜಯಿಯಾದವರ ಸನ್ಮಾನ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಮೈತ್ರಿ ಸರ್ಕಾರದಲ್ಲಿ ನಮ್ಮ ವತಿಯಿಂದ ಮುಸ್ಲೀಮರಿಗೆ ಮಂತ್ರಿ ಸ್ಥಾನ ನೀಡಿಲ್ಲ. ದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ, ಇದನ್ನು ಅರ್ಥ ಮಾಡಿಕೊಂಡು ಮುಖ್ಯ ಮಂತ್ರಿ ಅವರು ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Translate »