ಮೈಸೂರಿನ ನಾಲ್ಕು ಕಡೆ 2000 ಗುಂಪು ಮನೆ ನಿರ್ಮಿಸಲು ಮುಡಾ ತಯಾರಿ
ಮೈಸೂರು

ಮೈಸೂರಿನ ನಾಲ್ಕು ಕಡೆ 2000 ಗುಂಪು ಮನೆ ನಿರ್ಮಿಸಲು ಮುಡಾ ತಯಾರಿ

June 12, 2019

ಮೈಸೂರು: ನಿರಾಶ್ರಿತರಿಗೆ ಕೈಗೆಟಕುವ ದರದಲ್ಲಿ ಆಶ್ರಯ ಒದಗಿಸಲು ಮುಂದಾ ಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಇದಕ್ಕಾಗಿ ಗುಂಪು ಮನೆ ಯೋಜನೆ ಜಾರಿಗೊಳಿಸಲು ತಯಾರಿ ನಡೆಸಿದೆ.

ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 20-25 ವರ್ಷ ಗಳಿಂದ ಸಾವಿರಾರು ಮಂದಿ ಕಾಯುತ್ತಿದ್ದರೂ, ವಸತಿ ಬಡಾವಣೆ ನಿರ್ಮಿಸಲು ಭೂಮಿ ಅಲಭ್ಯತೆ ಯಿಂದಾಗಿ ಸಾಧ್ಯವಾಗುತ್ತಿಲ್ಲವಾದ್ದರಿಂದ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿರುವ ಮುಡಾ ಜಾಗವನ್ನೇ ಬಳಸಿಕೊಂಡು ಬಹುಮಹಡಿ ಕಟ್ಟಡ ನಿರ್ಮಿಸಿ ಅಲ್ಲಿ ಸುಮಾರು 2000 ಮನೆಗಳನ್ನು ಕೈಗೆಟಕುವ ದರ (ಓo Pಡಿoಜಿiಣ-ಓo ಐoss)ದಲ್ಲಿ ಪ್ರಾಧಿಕಾರಕ್ಕೂ ಹೊರೆಯಾಗದಂತೆ ನಿಯಮಾ ನುಸಾರ ಫಲಾನುಭವಿಗಳಿಗೆ ಹಂಚಿಕೆ ಮಾಡು ವುದೇ ಗುಂಪು ಮನೆ ಯೋಜನೆಯ ಉದ್ದೇಶವಾಗಿದೆ.

ಮೈಸೂರು ಸುತ್ತಮುತ್ತ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘಗಳು, ಡೆವಲಪರ್‍ಗಳು, ರಿಯಲ್ ಎಸ್ಟೇಟ್ ಕುಳಗಳು ರೈತರಿಂದ ಭೂಮಿ ಖರೀದಿಸಿ ಜಿಲ್ಲಾಧಿಕಾರಿಗಳಿಂದ ಅಲಿನೇಷನ್ ಮಾಡಿಸಿಕೊಂಡು ಸಕ್ಷಮ ಪ್ರಾಧಿಕಾರದಿಂದ ನಕ್ಷೆಗೆ ಅನುಮೋದನೆ ಪಡೆದು ತರಾತುರಿಯಲ್ಲಿ ವಸತಿ ಬಡಾವಣೆ ರಚಿಸಿ, ನಿವೇಶನ ಮಾರಾಟ ಮಾಡುತ್ತಿದ್ದಾರಲ್ಲದೆ, ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿ ಮನೆಗಳನ್ನು ಬಿಕರಿ ಮಾಡುತ್ತಿರುವುದರಿಂದ ಮುಡಾದವರಿಗೆ ಭೂಮಿ ಅಲಭ್ಯವಾಗುತ್ತಿದೆ. ವಸತಿ ಯೋಜನೆ ಅನುಷ್ಠಾನಗೊಳಿಸಲು ಮುಂದಾದರೆ 50:50 ಅನುಪಾತ ದಲ್ಲಿ ಮುಡಾಗೆ ಭೂಮಿ ನೀಡಲು ರೈತರು ಮೀನಾ ಮೇಷಾ ಎಣಿಸುತ್ತಿರುವುದರಿಂದ ಹೊಸ ಬಡಾ ವಣೆ ನಿರ್ಮಾಣವು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಅದೇ ಕಾರಣಕ್ಕೆ ಪ್ರಾಧಿಕಾರವು ಭೂಮಿ ಖರೀದಿಸುವ ಬದಲು ಮೈಸೂರು ನಗರದ ವಿಜಯನಗರ 1, 3, 4ನೇ ಹಂತ ಹಾಗೂ ದಟ್ಟಗಳ್ಳಿಯಲ್ಲಿ ಪ್ರಾಧಿಕಾರಕ್ಕೆ ಸೇರಿದ ಖಾಲಿ ಜಾಗದಲ್ಲಿ 4 ಕಡೆ ಗುಂಪು ಮನೆಗಳನ್ನು ನಿರ್ಮಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಯೋಜನೆಗೆ ಜನರಿಂದ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಡಿ. ಧೃವಕುಮಾರ್ ಅಧ್ಯಕ್ಷರಾಗಿದ್ದಾಗ ಸರ್ವೆ ಮಾಡಲು ಅರ್ಜಿ ಆಹ್ವಾನಿಸಿದಾಗ ಸುಮಾರು 82,000 ಮಂದಿ ಅರ್ಜಿ ಸಲ್ಲಿಸಿದ್ದರು. ಮೈಸೂರಿನ 4 ಕಡೆಗಳಲ್ಲಿ 2000 ಗುಂಪು ಮನೆಗಳನ್ನು ನಿರ್ಮಿಸುವ ಈ ಯೋಜನೆಗೆ ಮುಡಾ ಸಭೆಯು ಅನುಮತಿಸಿದ್ದು, ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆಯಾದರೂ, ಮನೆ ಹಂಚಿಕೆ ಹಾಗೂ ಗುಂಪು ಮನೆಗಳ ನಿರ್ಮಾಣಕ್ಕೆ ಸ್ಪಷ್ಟ ನಿಯಮ ರೂಪಿಸಬೇಕಿರುವುದರಿಂದ ಮುಡಾ ಎದುರು ನೋಡುತ್ತಿದೆ. ಡ್ರಾಫ್ಟ್ ರೂಲ್ಸ್ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಅಂತಿಮ ನಿಯಮ ರೂಪಿಸಿ ಅಭಿಪ್ರಾಯಕ್ಕಾಗಿ ಕಾನೂನು ಶಾಖೆಗೆ ಕಳುಹಿಸಿದೆ. ಅಲ್ಲಿಂದ ಕ್ಲಿಯರ್ ಆದ ತಕ್ಷಣ ಗುಂಪು ಮನೆ ಯೋಜನೆಗೆ ಮುಡಾ ಚಾಲನೆ ನೀಡಲಿದೆ.

Translate »