ಮಂಡ್ಯ: ಭಾರೀ ಮಳೆ, ಬಿರುಗಾಳಿಗೆ ವಿದ್ಯುತ್ ತಂತಿ ತುಂಡರಿಸಿ ರೈಲ್ವೆ ಹಳಿ ಮೇಲೆ ಬಿದ್ದ ಪರಿಣಾಮ ಇಂದು ಸಂಜೆ ಸುಮಾರು 1 ಗಂಟೆ ಕಾಲ ಮೈಸೂರು-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಮದ್ದೂರು-ಚನ್ನಪಟ್ಟಣ ನಡುವೆ ವಿದ್ಯುತ್ ತಂತಿ ಹಳಿ ಮೇಲೆ ಬಿದ್ದ ಪರಿ ಣಾಮವಾಗಿ ಈ ಮಾರ್ಗವಾಗಿ ಸಂಚರಿಸುತ್ತಿದ್ದ ಎಲ್ಲಾ ರೈಲುಗಳನ್ನು ಅಲ್ಲಲ್ಲೇ ನಿಲ್ಲಿಸಲಾಯಿತು. ಚನ್ನಪಟ್ಟಣ, ಮದ್ದೂರು ಮುಂತಾದ ನಿಲ್ದಾಣಗಳಲ್ಲಿ ಬೆಂಗ ಳೂರು, ಮೈಸೂರಿಗೆ ತೆರಳಬೇಕಾಗಿದ್ದ ರೈಲುಗಳನ್ನು ನಿಲ್ಲಿಸಲಾಗಿತ್ತು. ಮದ್ದೂರಿಗೆ 7.30ಕ್ಕೆ ಬರಬೇಕಿದ್ದ ಚಾಮುಂಡಿ ಎಕ್ಸ್‍ಪ್ರೆಸ್ ರೈಲು 1 ಗಂಟೆ ತಡವಾಗಿ ಆಗಮಿಸಿತು. ಹಳಿ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತೆರವುಗೊಳಿಸಿದ ನಂತರ ರೈಲು ಸಂಚಾರ ಆರಂಭವಾಯಿತು. ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಕೆಲವು ಪ್ರಯಾಣಿಕರು ರೈಲಿನಿಂದಿಳಿದು ಬಸ್ ಮೂಲಕ ಬೆಂಗಳೂರು ಹಾಗೂ ಮೈಸೂರಿಗೆ ಪ್ರಯಾಣ ಬೆಳೆಸಿದರು.