ಮೈಸೂರು, ಮಾ.9(ಎಂಕೆ)- ಮೈಸೂರಿನ ವಿವಿಧೆಡೆ ಹೋಳಿ ಹಬ್ಬವನ್ನು ಸಡಗರ-ಸಂಭ್ರಮದೊಂದಿಗೆ ಆಚರಣೆ ಮಾಡಲಾಯಿತು. ಮಹಿಳೆಯರು, ಯುವಕ-ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಎರಚುವ ಮೂಲಕ ಹಬ್ಬ ಆಚರಣೆ ಮಾಡಿದರು.
ಕೊರೊನಾ ವೈರಸ್ ಪರಿಣಾಮದಿಂದ ಉತ್ತರ ಭಾರತದಲ್ಲಿ ಹೋಳಿ ಆಚರಣೆ ಕೈಬಿಟ್ಟಿದ್ದರೂ ಮೈಸೂರಿನ ವಿವಿಧ ಬಡಾವಣೆ, ರಸ್ತೆಗಳು, ಕಾಲೇಜು ಆವರಣ, ಹಾಸ್ಟೆಲ್‍ಗಳು, ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಹೋಳಿ ರಂಗು ಆವರಿಸಿತ್ತು. ಬಿಳಿ ವಸ್ತ್ರತೊಟ್ಟ ಯುವಕ-ಯುವತಿಯರು ಬಣ್ಣಗಳಲ್ಲಿ ಮಿಂದೆದ್ದರು.
ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಪರಸ್ಪರ ಸ್ನೇಹಿತೆಯರಿಗೆ ಬಣ್ಣ ಎರಚಿ ಖುಷಿಪಟ್ಟರೆ, ರಿಂಗ್ ರಸ್ತೆಯ ಬೋಗಾದಿ ಸಮೀಪದಲ್ಲಿರುವ ಬೊಫಿಸ್, ಲೋಬೋಸ್ ಕೋರ್ಟ್‍ಯಾರ್ಡ್ ಸೇರಿದಂತೆ ಹಲವು ರೆಸ್ಟೋರೆಂಟ್‍ಗಳಲ್ಲಿ ಹೋಳಿ ಆಚರಣೆ ನಡೆಯಿತು.
ಪುಂಡರ ಹಾವಳಿ: ಒಂದೆಡೆ ಸಂಭ್ರಮದಿಂದ ಪರಸ್ಪರ ಬಣ್ಣ ಎರಚಾಡಿದರೆ, ಮತ್ತೊಂದೆಡೆ ಪುಂಡರ ಹೆಚ್ಚಾಗಿತ್ತು. ಬಣ್ಣ ಹಿಡಿದು ಬೈಕ್‍ಗಳಲ್ಲಿ ತಿರುಗಾಡುತ್ತಿದ್ದ ಪುಂಡರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಹುಡುಗಿಯರ ಮೇಲೆ ಬಲವಂತವಾಗಿ ಬಣ್ಣ ಎರಚುವುದು ಸಾಮಾನ್ಯವಾಗಿತ್ತು.
ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಈಜುಕೊಳದ ಬಳಿ ನಡೆದುಕೊಂಡು ಬರುತ್ತಿದ್ದ ಎಂಎಸ್‍ಸಿ ವಿದ್ಯಾರ್ಥಿನಿ ಯೊರ್ವಳಿಗೆ ಎದುನಿಂದ ಬಂದ ಪುಂಡರು ಏಕಾಏಕಿ ಬಣ್ಣ ಎರಚಿ ಭಯ ಹುಟ್ಟಿಸಿದರು. ಕಣ್ಣಿಗೆ ಬಣ್ಣ ಬಿದ್ದ ಕಾರಣ ಕೆಲಕಾಲ ಗಾಬರಿಗೊಂಡ ವಿದ್ಯಾರ್ಥಿನಿ, ಅಳುತ್ತಾ ವಿವಿ ಈಜುಕೊಳದ ಅಧಿಕಾರಿಯಿಂದ ನೀರನ್ನು ಪಡೆದು ಮುಖ ತೊಳೆದುಕೊಂಡರು. ಇದೇ ರೀತಿ ಅಲ್ಲಲ್ಲಿ ಪುಂಡರು ಬಲವಂತವಾಗಿ ಬಣ್ಣ ಎರಚುತ್ತಿರುವುದು ಕಂಡುಬಂದಿತು.