ಮೈಸೂರು, ಸೆ.19(ಎಂಟಿವೈ)- ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಾಯ್ದೆ ರೈತ ಮತ್ತು ಕಾರ್ಮಿಕರ ವಿರುದ್ದವಾಗಿದೆ. ಇದನ್ನು ಸಂಸತ್ ಅಧಿವೇಶನದಲ್ಲಿ ವಿರೋಧಿಸುವಂತೆ ಆಗ್ರಹಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾಕ್ಸ್‍ವಾದ)ದ ಜಿಲ್ಲಾ ಸಮಿತಿ ಕಾರ್ಯ ಕರ್ತರು ಮೈಸೂರು ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ ಸಿಂಹ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸರ್ಕಾರವು ಕೋವಿಡ್ ಸಂಕಷ್ಟದ ಅವಧಿಯಲ್ಲೇ ರೈತ, ಕಾರ್ಮಿಕ ವಿರೋಧಿ ಯಾದ 11 ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿದೆ. ಎಲ್ಲವನ್ನೂ ವಾಪಸ್ ಪಡೆಯುವಂತೆ ಒತ್ತಾಯಿಸಬೇಕು. ರಾಜ್ಯಕ್ಕೆ ಬರಬೇಕಿರುವ ಜಿಎಸ್‍ಟಿ ಬಾಕಿ ಹಾಗೂ ನೆರೆ ಪರಿಹಾರ ವನ್ನು ಕೂಡಲೇ ಬಿಡುಗಡೆ ಮಾಡಬೇಕು, ಉದ್ಯೋಗ ಖಾತ್ರಿಯನ್ನು ನಗರಗಳಿಗೆ ಮತ್ತು ಕನಿಷ್ಠ 200 ದಿನಗಳಿಗೆ ವಿಸ್ತರಿಸಬೇಕು, ಕೋವಿಡ್‍ನಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ನಿರುದ್ಯೋಗ ಭತ್ಯೆ ಘೋಷಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಬಸವರಾಜ್, ಜಗದೀಶ್ ಸೂರ್ಯ, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.