ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೆ ತಿಂಗಳಲ್ಲೇ ಪರಿಹಾರ
News

ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೆ ತಿಂಗಳಲ್ಲೇ ಪರಿಹಾರ

September 20, 2022

ಬೆಂಗಳೂರು, ಸೆ.19(ಕೆಎಂಶಿ)-ಪ್ರಕೃತಿ ವಿಕೋಪ ದಿಂದ ಬೆಳೆ ಕಳೆದುಕೊಂಡ ರೈತರಿಗೆ ಒಂದೇ ತಿಂಗಳಲ್ಲಿ ಪರಿಹಾರ ನೀಡುವು ದಾಗಿ ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ. ಅತಿವೃಷ್ಟಿಯ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು ಈ ವಿಷಯ ತಿಳಿಸಿದರಲ್ಲದೆ ಈ ಹಿಂದೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದಾಗ ರೈತರಿಗೆ ಹತ್ತು ಹನ್ನೊಂದು ತಿಂಗಳ ನಂತರ ಪರಿಹಾರ ಸಿಗುತ್ತಿತ್ತು. ಆದರೆ ಅದು ಇನ್ನು ಮುಂದೆ ಒಂದೇ ತಿಂಗಳಲ್ಲಿ ಲಭ್ಯವಾಗಲಿದೆ ಎಂದರು. ಪರಿಹಾರಕ್ಕಾಗಿ ರೈತರು ಅಲೆದಾಡಬೇಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡು ತ್ತಿದ್ದಂತೆಯೇ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮಾ ಮಾಡಲಾಗುವುದು ಎಂದು ಅವರು ವಿವರ ನೀಡಿದರು.

ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರಿಗೆ ಪರಿಹಾರ ಸಿಗುತ್ತದೆ. ಮತ್ತು ಪರಿಹಾರದ ಮೊತ್ತವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಅನುದಾನಕ್ಕೂ ಕಾಯದೆ ನಮ್ಮ ಬೊಕ್ಕಸದಿಂದಲೇ ಪರಿಹಾರ ನೀಡಿ ಆನಂತರ ಈ ಮೊತ್ತವನ್ನು ನಾವು ಕೇಂದ್ರ ಸರ್ಕಾರದಿಂದ ಪಡೆಯು ತ್ತೇವೆ ಎಂದರು. ಕಳೆದ ಎರಡು ಮೂರು ದಶಕಗಳ ನಂತರ ರಾಜ್ಯದಲ್ಲಿ ಭಾರೀ ಮಳೆ ಬಿದ್ದು ಒಂಭತ್ತು ಲಕ್ಷ ಹೆಕ್ಟೇರ್‍ಗೂ ಅಧಿಕ ಭೂಮಿಯಲ್ಲಿ ಬೆಳೆ ನಷ್ಟವಾ ಗಿದೆ. ಇದರ ಪ್ರಮಾಣ ಮತ್ತಷ್ಟು ಹೆಚ್ಚಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಮಳೆ ಮತ್ತು ಪ್ರವಾಹ ವಲ್ಲದೆ ಕಾವೇರಿ ಮತ್ತು ಕೃಷ್ಣ್ಣ ಕೊಳ್ಳದ ಪಾತ್ರದಲ್ಲಿ ತೇವಾಂಶ ಹೆಚ್ಚಾಗಿ ಈ ಪ್ರಮಾಣದ ಬೆಳೆ ನಷ್ಟವಾಗಿದೆ ಎಂದು ಅಂಕಿ ಅಂಶ ಒದಗಿಸಿದರು. ಭಾರೀ ಮಳೆ ಮತ್ತು ನೆರೆಯಿಂದ ರಾಜ್ಯದಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. 127 ಮಂದಿ ಅಸು ನೀಗಿದ್ದಾರೆ. 1289 ಜಾನುವಾರುಗಳು ಸಾವಿಗೀಡಾ ಗಿವೆ. ನಲವತ್ತೈದು ಸಾವಿರದಷ್ಟು ಮನೆಗಳು ಪೂರ್ಣ ಇಲ್ಲವೇ ಭಾಗಶ: ಹಾನಿಗೀಡಾಗಿವೆ ಎಂದರು. ಮಳೆಯಿಂದಾಗಿ ಅಪಾರ ಹಾನಿಯಾಗಿದ್ದರೂ ರಾಜ್ಯದ ಜಲಾಶಯಗಳಲ್ಲಿ 865 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ ಎಂದ ಅವರು, ಇದೇ ರೀತಿ ಮಳೆಯಿಂದಾಗಿ ರಾಜ್ಯದಲ್ಲಿ ಅಂತರ್ಜಲದ ಪ್ರಮಾಣ ಶೇಕಡಾ ಎಂಭತ್ನಾಲ್ಕರಷ್ಟು ಹೆಚ್ಚಿದೆ ಎಂದರು.

ಇವತ್ತು ರಾಜ್ಯದ ನೂರಾ ತೊಂಭತ್ತು ತಾಲೂಕುಗಳಲ್ಲಿ ಅಂತರ್ಜಲದ ಪ್ರಮಾಣ ಗಣನೀಯ ಮಟ್ಟದಲ್ಲಿ ಏರಿಕೆಯಾಗಿದ್ದು, ಇದು ಕೂಡಾ ಒಂದು ದಾಖಲೆ ಎಂದರು.

ಪ್ರಧಾನಿ ನರೇಂದ್ರಮೋದಿ ಅವರ ಅಧಿಕಾರಾವಧಿಯಲ್ಲಿ ರಾಜ್ಯಕ್ಕೆ ಹನ್ನೊಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಅಧಿಕ ಹಣ ಬಂದಿದ್ದು, ಅವರ ಹಿಂದಿದ್ದ ಮನಮೋಹನಸಿಂಗ್ ಅವರ ಅಧಿಕಾರಾವಧಿಯಲ್ಲಿ ಕೇವಲ ಮೂರು ಸಾವಿರ ಕೋಟಿ ರೂಪಾಯಿಗಳಷ್ಟು ಪರಿಹಾರ ಲಭ್ಯವಾಗಿತ್ತು ಎಂದರು. ಈ ಹಂತದಲ್ಲಿ ಕಂದಾಯ ಸಚಿವರ ಮಾತನ್ನು ವಿರೋಧಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಆಯಾ ಪ್ರಧಾನ ಮಂತ್ರಿಗಳು ಅವರ ಬಜೆಟ್‍ಗೆ ಅನುಗುಣವಾಗಿ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯನ್ನು ಬಿಡುಗಡೆ ಮಾಡುತ್ತಾರೆ ಎಂದರು.

ನೀವು ಹಲವು ವರ್ಷಗಳ ದಾಖಲೆ ಕೊಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದೀರಿ. ನಾವು ನಿಮಗೆ ಕೇಳುತ್ತಿರುವುದು 2022-23ನೇ ಸಾಲಿನಲ್ಲಿ ಮಳೆಯಿಂದಾದ ಹಾನಿ ಮತ್ತು ಅದಕ್ಕೆ ಸಂಬಂಧಿಸಿದಂತೆ ಎಷ್ಟು ಪರಿಹಾರ ಬಂದಿದೆ ಎಂದಷ್ಟೇ ಎಂದು ಹೇಳಿದರು. ಈ ವರ್ಷ ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯಲ್ಲಿ ಮಳೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ 1012 ಕೋಟಿ ರೂಪಾಯಿ ಕೇಳಿದ್ದೀರಿ. ಆದರೆ ಅದರಲ್ಲಿ ಬಂದಿರುವ ಹಣವೆಷ್ಟು ಎಂದು ಪ್ರಶ್ನಿಸಿದರು.

ಈ ಬಾರಿಯ ಮಳೆಯಿಂದ ನಮಗೆ ಏಳು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟವಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಯನ್ವಯವೂ ಪರಿಹಾರ ಬಂದಿಲ್ಲ ಎಂದು ವಿವರಿಸಿದರು. ಪುನ: ಮಾತನಾಡಿದ ಕಂದಾಯ ಸಚಿವ ಅರ್.ಅಶೋಕ್, ಮಳೆಯಿಂದಾದ ಹಾನಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತು ತಾವು ರಾಜ್ಯದ ಬಹುತೇಕ ಭಾಗಗಳಿಗೆ ಹೋಗಿ ಪರಿಶೀಲನೆ ಮಾಡಿದ್ದಲ್ಲದೆ, ತಕ್ಷಣ ಪರಿಹಾರದ ಕ್ರಮಗಳನ್ನು ಕೈಗೊಂಡಿರುವುದಾಗಿ ಸಮರ್ಥಿಸಿಕೊಂಡರು.

Translate »