ಮೈಸೂರಿನ ಎನ್‍ಆರ್ ಸಂಚಾರ ಠಾಣೆ ಸಬ್ ಇನ್ಸ್‍ಪೆಕ್ಟರ್ ಅಶ್ವಿನಿ ಅಮಾನತು
ಮೈಸೂರು

ಮೈಸೂರಿನ ಎನ್‍ಆರ್ ಸಂಚಾರ ಠಾಣೆ ಸಬ್ ಇನ್ಸ್‍ಪೆಕ್ಟರ್ ಅಶ್ವಿನಿ ಅಮಾನತು

September 20, 2022

ಮೈಸೂರು, ಸೆ. 19(ಆರ್‍ಕೆ)- ಪ್ರಥಮ ದರ್ಜೆ ಸಹಾಯಕರ ಹುದ್ದೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಆರೋ ಪದ ಹಿನ್ನೆಲೆಯಲ್ಲಿ ಮೈಸೂರಿನ ಎನ್‍ಆರ್ ಸಂಚಾರ ಠಾಣೆ ಸಬ್ ಇನ್ಸ್‍ಪೆಕ್ಟರ್ ಅಶ್ವಿನಿ ಅನಂತಪೂರ ಅವರನ್ನು ಇಂದು ಸೇವೆ ಯಿಂದ ಅಮಾನತುಗೊಳಿಸಲಾಗಿದೆ.

ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಈ ಸಂಬಂಧ ಇಂದು ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಕೆಪಿಎಸ್‍ಸಿಯವರು ನಡೆಸಿದ ಪ್ರಥಮ ದರ್ಜೆ ಸಹಾಯಕರ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಬಸವರಾಜು ಎಂಬುವರಿಗೆ ಕೆಲಸ ಕೊಡಿಸುವುದಾಗಿ ಅಶ್ವಿನಿ ಅವರು ಬಾಗಲಕೋಟೆ ಜಿಲ್ಲೆಯ ಸಂಗಮೇಶ ಝಳಕಿ ಎಂಬುವರೊಂದಿಗೆ ಹಣದ ವಹಿವಾಟು ನಡೆಸಿರುವ ಬಗ್ಗೆ ಆಡಿಯೋ ವಾಟ್ಸಾಪ್ ಸಂಭಾಷಣೆ, ವಿದ್ಯು ನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ ವರದಿ ನೀಡಿದ್ದರು. ಅಷ್ಟೇ ಅಲ್ಲದೆ, ಹಣ ವರ್ಗಾವಣೆಯಾಗಿದೆ ಎನ್ನಲಾದ ಬಗ್ಗೆ ಬ್ಯಾಂಕ್ ಸ್ಟೇಟ್‍ಮೆಂಟ್ ಸಹ ಬಿತ್ತರವಾಗಿದ್ದು, ಆಡಿಯೋ ಸಂಭಾಷಣೆಯನ್ನು ಪರಿಶೀಲಿಸಿದಾಗ ಸಬ್ ಇನ್ಸ್‍ಪೆಕ್ಟರ್ ಅಶ್ವಿನಿ ಅನಂತಪೂರ ಅವರು ಪ್ರಥಮ ದರ್ಜೆ ಸಹಾಯಕರ ಹುದ್ದೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರು ವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಎಸಿಪಿಯವರು ದಾಖಲಾತಿಗಳೊಂದಿಗೆ ವರದಿ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದಿರುವ ಕಾರಣ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡಾವಳಿಗಳು) ನಿಯಮಗಳು-1965/1989ರ ನಿಯಮ-5ರನ್ವಯ ಅಶ್ವಿನಿ ಅನಂತಪೂರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಇಂದು ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿ ಅಶ್ವಿನಿ ಅನಂತಪೂರ ಅವರ ಸಂಭಾಷಣೆಯ ಆಡಿಯೋ ಹಾಗೂ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

Translate »