ಎಸ್‍ಬಿಎಂ ಬಡಾವಣೆ ಉದ್ಯಾನದಲ್ಲಿ ಅಕ್ರಮ ಶೆಡ್, ಮುಡಾಗೆ ದೂರು
ಮೈಸೂರು

ಎಸ್‍ಬಿಎಂ ಬಡಾವಣೆ ಉದ್ಯಾನದಲ್ಲಿ ಅಕ್ರಮ ಶೆಡ್, ಮುಡಾಗೆ ದೂರು

August 20, 2020

ಮೈಸೂರು, ಆ.19(ಎಂಕೆ)- ಮೈಸೂರಿನ ಬೋಗಾದಿ ಮುಖ್ಯರಸ್ತೆಯಲ್ಲಿರುವ ಎಸ್‍ಬಿಎಂ ಬಡಾ ವಣೆಯ ‘ಎ’ ಬ್ಲಾಕ್ ನಲ್ಲಿರುವ ಪಾರ್ಕ್ ಆವರಣದೊಳಗೆ ಅಕ್ರಮವಾಗಿ ನಿರ್ಮಿ ಸಿರುವ ಶೆಡ್ ತೆರವು ಗೊಳಿಸುವಂತೆ ಬಡಾ ವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.

23 ವರ್ಷಗಳ ಹಿಂದೆ ಎಸ್‍ಬಿಎಂ ಗೃಹ ನಿರ್ಮಾಣ ಸಹಕಾರ ಸಂಘದಿಂದ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ. ಪಾರ್ಕ್ ಎಂದು ಗುರುತಿಸಿರುವ ಜಾಗದಲ್ಲಿ ಬೋಗಾದಿ ನಿವಾಸಿಯೊಬ್ಬರು ಅಕ್ರಮವಾಗಿ ಶೆಡ್ ನಿರ್ಮಿಸಿ ತಿಂಗಳು ಕಳೆದರೂ ತೆರವು ಮಾಡಿಲ್ಲ. ಬಡಾವಣೆ ನಿವಾಸಿಗಳು ಪ್ರಶ್ನಿಸಿದರೆ ಈ ಜಾಗ ನಮ್ಮದು ಎನ್ನುತ್ತಿದ್ದಾರೆ ಎಂದು ‘ಮೈಸೂರು ಮಿತ್ರ’ನಲ್ಲಿ ದೂರಿದರು.

ಲಕ್ಷಾಂತರ ಹಣ ನೀಡಿ ಸೈಟ್ ಖರೀದಿಸಿ, ಮನೆ ಕಟ್ಟಿದರೂ ನೆಮ್ಮದಿ ಇಲ್ಲದಂತಾಗಿದೆ. ಬಡಾವಣೆಯಲ್ಲಿ ಒಂದೆರಡು ಪಾರ್ಕ್‍ಗಳಿದ್ದರೂ ಅಭಿವೃದ್ಧಿ ಪಡಿಸಿಲ್ಲ. ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಯುಜಿಡಿ ವ್ಯವಸ್ಥೆ ಸರಿಯಿಲ್ಲ. ತೆರಿಗೆ ಕಟ್ಟಿಸಿಕೊಳ್ಳುವ ಮುಡಾ ಬಡಾವಣೆ ನಿರ್ವಹಣೆ ಮಾಡದೇ ಸುಮ್ಮನಿರುವುದು ಬೇಸರ ತಂದಿದೆ ಎಂದು ನಿವಾಸಿ ಉಮೇಶ್ ಅಳಲು ತೋಡಿಕೊಂಡರು.

ಮನವಿ: ಪಾರ್ಕ್ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್ ತೆರವುಗೊಳಿಸುವಂತೆ ಮುಡಾಗೆ ಮನವಿ ಸಲ್ಲಿಸಲಾಗಿದೆ ಎಂದು ನಿವಾಸಿ ಅನಿಲ್ ತಿಳಿಸಿದರು.

 

Translate »