ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಬೆಂಗಳೂರಲ್ಲಿಕಾಂಗ್ರೆಸ್ ಪ್ರತಿಭಟನೆ
News

ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಬೆಂಗಳೂರಲ್ಲಿಕಾಂಗ್ರೆಸ್ ಪ್ರತಿಭಟನೆ

July 22, 2022

ಬೆಂಗಳೂರು, ಜು.21- ಜಾರಿ ನಿರ್ದೇಶನಾಲಯ (ಇಡಿ) ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕೆಪಿಸಿಸಿ ವತಿಯಿಂದ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನಾ ಸಭೆ ನಡೆಸಿದ ಕಾಂಗ್ರೆಸ್ ಮುಖಂಡರು ನಂತರ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಶೇಷಾದ್ರಿ ರಸ್ತೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಧ್ವಜ ಹಿಡಿದು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಮೇಲೆ ಹತ್ತಿ ಪೊಲೀಸರ ಮೇಲೆಯೇ ಡೈವ್ ಹೊಡೆದರು. ಅವರಿಂದ ಸ್ಫೂರ್ತಿ ಪಡೆದಂತೆ ದಿನೇಶ್ ಗುಂಡೂರಾವ್ ಮತ್ತು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಳಪಾಡ್ ಕೂಡ ಬ್ಯಾರಿಕೇಡ್ ಹಾರಿ ಬಂಧÀನಕ್ಕೆ ಒಳಗಾದರು.

ಇತ್ತ ಕಾಂಗ್ರೆಸ್‍ನ ಹಿರಿಯ ಮುಖಂಡರು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಂತೆ ಅತ್ತ ಶಾಂತಿ ನಗರದಲ್ಲಿರುವ ಇಡಿ ಕಚೇರಿ ಮುಂದೆ ಯುವ ಕಾಂಗ್ರೆಸ್ ಕಾರ್ಯಕರ್ತರು ತಾವೇ ತಂದಿದ್ದ 2 ಕಾರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅಗ್ನಿಶಾಮಕ ದಳದವರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ. ಈ ಪ್ರಕರಣದಲ್ಲಿ 11 ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ, ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿ, ಬಂಧನಕ್ಕೆ ಒಳಗಾದರು. ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡಿ, ಐಟಿ ಸಂಸ್ಥೆಗಳು ದುರ್ಬಳಕೆಯಾಗದಂತೆ ಕಾನೂನು ತಿದ್ದುಪಡಿ ತರಲಾಗುವುದು ಎಂದರು. ಕೇಂದ್ರ ಸರ್ಕಾರ ಈ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಮೋದಿ ಅವರನ್ನು ಪ್ರಧಾನಿಯಾಗಿ ಮುಂದುವರೆಯಲು ಬಿಟ್ಟರೆ ಮುಂದೊಂದು ದಿನ ಶ್ರೀಲಂಕಾ ಎದುರಿಸುತ್ತಿರುವಂತಹ ಸಮಸ್ಯೆ ನಮ್ಮ ದೇಶಕ್ಕೂ ಬರಲಿದೆ ಎಂದು ಎಚ್ಚರಿಕೆ ನೀಡಿದರ ಲ್ಲದೇ, ತ್ಯಾಗ ಮಾಡುವುದು ಸುಲಭವಲ್ಲ. ಬೇಕಾದರೆ ಭಾಷಣ ಮಾಡಬಹುದಷ್ಟೇ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತ್ಯಾಗ ಮಾಡಿದ್ದಾರೆ. ನರೇಂದ್ರ ಮೋದಿ ಯಾವತ್ತಾದರೂ ತ್ಯಾಗ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಸೋನಿಯಾ, ರಾಹುಲ್, ಖರ್ಗೆ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಅಕ್ರಮ ಹಣ ವರ್ಗಾವಣೆಯಾಗಿಲ್ಲ. ಆ ಸಂಬಂಧ ಎಫ್‍ಐಆರ್ ಕೂಡ ಆಗಿಲ್ಲ. ಆದರೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ನಮ್ಮನ್ನು ಕುಗ್ಗಿಸುವ ಸಲುವಾಗಿ ಇಡಿ, ಐಟಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಆದರೆ ಅದರಿಂದ ಕಾಂಗ್ರೆಸ್ಸಿಗರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇಡಿ, ಐಟಿ, ಸಿಬಿಐ ಯಾವುದೇ ಬರಲಿ ನಮ್ಮ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಮುಟ್ಟಲು ಸಾಧ್ಯವಿಲ್ಲ. ಇಡಿ ವಿಚಾರಣೆ ನಂತರವೂ ರಾಹುಲ್ ಗಾಂಧಿ ಕುಗ್ಗಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಪಕ್ಷಕ್ಕೆ ಕಾರ್ಯಕರ್ತರು ನೀಡಿದ ಹಣವನ್ನು ದೆಹಲಿಗೆ ಕಳುಹಿಸುತ್ತೇವೆ. ಅದೇ ರೀತಿ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಉಳಿಸಲು ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ವೇತನ ನೀಡಲು ಕಾಂಗ್ರೆಸ್ಸಿಗರೆಲ್ಲಾ ಸೇರಿ ದೇಣಿಗೆ ರೂಪದಲ್ಲಿ ಹಣ ನೀಡಿದ್ದೇವೆ. ಆಗ ಸುಬ್ರಮಣಿಯನ್ ಸ್ವಾಮಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆಯೋಗವು ಇದರಲ್ಲಿ ಏನೂ ತಪ್ಪಿಲ್ಲ ಎಂದು ತಿಳಿಸಿತ್ತು. ಆದಾಯ ತೆರಿಗೆ ಇಲಾಖೆಯೂ ಕೂಡ ತಪ್ಪು ನಡೆದಿಲ್ಲ ಎಂದಿತ್ತು. ಸಂಸತ್‍ನಲ್ಲಿ ಅರುಣ್ ಜೇಟ್ಲಿ ಅವರು ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಅಕ್ರಮವಾಗಿಲ್ಲ ಎಂದು ತಿಳಿಸಿದ್ದರು. ಆದರೂ ಕಾಂಗ್ರೆಸ್ ಮುಖಂಡರನ್ನು ಕುಗ್ಗಿಸಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

Translate »