ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಪ್ರಸಾರಕ್ಕೆ  ತಡೆ ಕೋರಿಕೆಗೆ ಆದಿಜಾಂಬವ ಸಂಘ ಖಂಡನೆ
ಮೈಸೂರು

ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಪ್ರಸಾರಕ್ಕೆ ತಡೆ ಕೋರಿಕೆಗೆ ಆದಿಜಾಂಬವ ಸಂಘ ಖಂಡನೆ

January 11, 2019

ಮೈಸೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಉಘೇ ಉಘೇ ಮಾದೇಶ್ವರ’ ಧಾರಾವಾಹಿ ಪ್ರಸಾರಕ್ಕೆ ತಡೆ ನೀಡುವಂತೆ ರಾಷ್ಟ್ರೀಯ ಬಸವದಳದ ಕಾರ್ಯಾಧ್ಯಕ್ಷ ಸು.ಮಲ್ಲಿಕಾರ್ಜುನಪ್ಪ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದನ್ನು ರಾಜ್ಯ ಆದಿಜಾಂಬವ ಸಂಘ ಖಂಡಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಎಡತೊರೆ ಎಂ.ನಿಂಗರಾಜ್, ಮಾದೇಶ್ವರರು ಶೈವ ಮೂಲದಿಂದ ಬಂದವರಾದರೂ ಲಿಂಗಧಾರಣೆ ಒಪ್ಪಿಕೊಂಡಿಲ್ಲ. ಇದಕ್ಕೆ ಬದಲಾಗಿ `ದೇವರಗುಡ್ಡ’ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಆದರೆ ಸು.ಮಲ್ಲಿಕಾರ್ಜುನಪ್ಪನವರು ಮಾದೇಶ್ವರರು ಲಿಂಗಾಯತ ಧರ್ಮ ಪ್ರಚಾರ ಪಡಿಸಿದರು ಎಂದು ಪ್ರತಿಪಾದಿಸಿ ಧಾರಾವಾಹಿಯ ಮಾದೇಶ್ವರರಲ್ಲಿ ಇಷ್ಟಲಿಂಗ ಕೈಬಿಟ್ಟಿದ್ದಾ ರೆಂದು ಧಾರಾವಾಹಿಗೆ ತಡೆ ಕೋರಿದ್ದು, ಇದು ಖಂಡನಾರ್ಹ ಎಂದು ಹೇಳಿದರು.

ಮಾದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಇಂದಿಗೂ ದೇವರಗುಡ್ಡ’ ದೀಕ್ಷೆ ನೀಡುತ್ತಾರೆಯೇ ಹೊರತು ಲಿಂಗದೀಕ್ಷೆ ಕೊಡುವುದಿಲ್ಲ. ದೇವರಗುಡ್ಡರು ಕುತ್ತಿಗೆಗೆ ರುದ್ರಾಕ್ಷಿ ಮಣಿ ಧರಿಸುತ್ತಾರೆಯೇ ಹೊರತು ಲಿಂಗವನ್ನಲ್ಲ. ಮಾದೇಶ್ವರರನ್ನು ದೇವ ಚಂದ್ರನರಾಜಾವಳಿ’ ಕಥೆಯಲ್ಲಿ ಮಾದಾರ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಧಾರಾವಾಹಿಯಲ್ಲಿ ಮಾದೇಶ್ವರರನ್ನು ಕಹಳೆ ಊದುವ ಕಾಯಕದ ಮಾದಾರ ಕುಲದ ಕಲ್ಯಾಣ ದೇವರ ಮಗ ಎಂದು ಪ್ರಸಾರ ಮಾಡುತ್ತಿರುವುದು ಸರಿ ಇದೆ ಎಂದು ತಿಳಿಸಿದರು. ಮಾದೇಶ್ವರರು ಸರ್ವಜನಾಂಗದ ದೇವರಾಗಿ ಉಳಿಯಲಿ ಎಂಬುದು ನಮ್ಮ ಆಶಯ. ಆದರೆ ಕೆಲವರು ಮಾದೇಶ್ವರರನ್ನು ಲಿಂಗಾಯತಕ್ಕೆ ಸೇರ್ಪಡೆಗೊಳಿಸಲು ಹವಣಿಸುತ್ತಿದ್ದಾರೆ. ಇದು ಖಂಡನೀಯವಾಗಿದ್ದು, ಯಾವುದೇ ಕಾರಣಕ್ಕೂ ಧಾರಾವಾಹಿ ಪ್ರಸಾರಕ್ಕೆ ತಡೆ ನೀಡಬಾರದು ಎಂದು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ಡಿ.ಕುಮಾರ್, ಮಹದೇವಯ್ಯ ನಿಟ್ರೆ, ಬೆಳ್ತೂರು ಮಹಾದೇವು, ಸ್ವಾಮಿ ನಂಜನಗೂಡು, ಎಂ.ಲೋಕೇಶ್ ಮಧುವನಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

Translate »